×
Ad

ಹಿಂದೂ ಮಹಾಪಂಚಾಯತ್:‌ ಮುಸ್ಲಿಮರ ವಿರುದ್ಧ ಆಯುಧಗಳನ್ನೆತ್ತಿಕೊಳ್ಳುವಂತೆ ನರಸಿಂಹಾನಂದ ಕರೆ

Update: 2022-04-03 17:15 IST

 ಹೊಸದಿಲ್ಲಿ,ಎ.3: ಇಲ್ಲಿಯ ಬುರಾರಿ ಮೈದಾನದಲ್ಲಿ ರವಿವಾರ ಆಯೋಜಿಸಲಾಗಿದ್ದ ಹಿಂದು ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ನಾಲ್ವರು ಮುಸ್ಲಿಮ್ ಪತ್ರಕರ್ತರು ಸೇರಿದಂತೆ ಐವರು ಪತ್ರಕರ್ತರನ್ನು ಬಲಪಂಥೀಯ ಗುಪೊಂದು ಥಳಿಸಿದೆ ಎಂದು ಆರೋಪಿಸಲಾಗಿದೆ. ಥಳಿತಕ್ಕೊಳಗಾದ ಪತ್ರಕರ್ತರಲ್ಲಿ ಫ್ರೀಲಾನ್ಸರ್ಗಳಾದ ಅರ್ಬಾಬ್ ಅಲಿ ಮತ್ತು ಮೀರ್ ಫೈಸಲ್,ಫೋಟೊಜರ್ನಲಿಸ್ಟ್ ಮುಹಮ್ಮದ್ ಮೆಹೆರಬಾನ್ ಮತ್ತು ದಿ ಕ್ವಿಂಟ್ ಸುದ್ದಿ ಜಾಲತಾಣದ ಮೇಘನಾದ ಬೋಸ್ ಸೇರಿದ್ದಾರೆ. ಐದನೇ ಪತ್ರಕರ್ತ ಬೆದರಿಕೆಯ ಭೀತಿಯಿಂದಾಗಿ ಅನಾಮಿಕರಾಗಿರಲು ಬಯಸಿದ್ದಾರೆ.ನ್ಯೂಸ್ ಲಾಂಡ್ರಿ ಯ ಸುದ್ದಿಗಾರರಾದ ಶಿವಾಂಗಿ ಮತ್ತು ರೋನಕ್ ಭಟ್ಟ್ ಅವರ ಮೇಲೂ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ.

ತಾವು ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದಾಗ ತಮ್ಮ ಮೇಲೆ ಹಲ್ಲೆಗಳು ನಡೆದಿವೆ. ಗುಂಪು ತಮ್ಮ ಉಪಕರಣಗಳನ್ನು ಕಿತ್ತುಕೊಂಡಿದ್ದು, ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಅಳಿಸಲಾಗಿದೆ ಎಂದು ಪತ್ರಕರ್ತರು ತಿಳಿಸಿದ್ದಾರೆ.ವಿವಾದಾತ್ಮಕ ಧಾರ್ಮಿಕ ನಾಯಕ ಯತಿ ನರಸಿಂಹಾನಂದರ ಅನುಯಾಯಿ ಪ್ರೀತ್ ಸಿಂಗ್ ನಡೆಸುತ್ತಿರುವ ಸೇವ್ ಇಂಡಿಯಾ ಫೌಂಡೇಷನ್‌ ನ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುದರ್ಶನ ನ್ಯೂಸ್‌ ನ ಸಂಪಾದಕ ಸುರೇಶ ಚಾವಂಕೆ ಅವರೂ ಮಹಾ ಪಂಚಾಯತ್ ನ ಮುಖ್ಯ ಅತಿಥಿಗಳಲ್ಲೋರ್ವರಾಗಿದ್ದರು.

ಕಾರ್ಯಕ್ರಮದಲ್ಲಿ ನರಸಿಂಹಾನಂದ ಮಾತನಾಡುತ್ತಿರುವ ವೀಡಿಯೊವನ್ನು ಎಎ ನ್ಯೂಸ್ ಶೇರ್ ಮಾಡಿಕೊಂಡಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದ ತನ್ನ ಭಾಷಣದಲ್ಲಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಹಿಂದುಗಳನ್ನು ಪ್ರಚೋದಿಸಿರುವ ನರಸಿಂಹಾನಂದ ‘ 20 ವರ್ಷಗಳಲ್ಲಿ ಶೇ.40ರಷ್ಟು ಹಿಂದುಗಳು ಕೊಲ್ಲಲ್ಪಟ್ಟಿದ್ದಾರೆ. ಇದನ್ನು ನೀವು ಬದಲಿಸಲು ಬಯಸಿದ್ದರೆ ನೀವು ಗಂಡಸರಾಗಬೇಕು.ಗಂಡಸರು ತಮ್ಮ ಬಳಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ ’ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಸೇವ್ ಇಂಡಿಯಾ ಫೌಂಡೇಷನ್ ಕಳೆದ ವರ್ಷ ಜಂತರ್ ಮಂತರ್ನಲ್ಲಿ ಇಂತಹುದೇ ಕಾರ್ಯಕ್ರಮವನ್ನು ಏರ್ಪಡಿಸಿತ್ತು ಮತ್ತು ಅಲ್ಲಿ ಮುಸ್ಲಿಮರ ವಿರುದ್ಧ ದ್ವೇಷಭಾಷಣಗಳನ್ನು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನವಂಬರ್ 2021ರಲ್ಲಿ ಪೊಲೀಸರು ಫೌಂಡೇಷನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
‘ಗುಂಪು ನಮ್ಮನ್ನು ಕ್ರೂರವಾಗಿ ಥಳಿಸಿತ್ತು. ಮೀರ್ ಕ್ಯಾಮೆರಾದಲ್ಲಿಯ ವೀಡಿಯೊಗಳನ್ನು ಅಳಿಸಲಾಗಿದೆ. ನಮ್ಮನ್ನು ಕೊಲ್ಲುತ್ತಾರೆಂದು ನಾನು ಭಾವಿಸಿದ್ದೆ. ನಮ್ಮನ್ನು ಥಳಿಸುವಾಗ ಅವರು ನಮ್ಮನ್ನು ಜಿಹಾದಿಗಳು ಎಂದು ಕರೆಯುತ್ತಿದ್ದರು. ಪೊಲೀಸರು ನಮ್ಮನ್ನು ಗುಂಪಿನಿಂದ ಪಾರು ಮಾಡಿ ಮುಖರ್ಜಿ ನಗರ ಠಾಣೆಗೆ ಕರೆದೊಯ್ದರು ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಲಿ ತಿಳಿಸಿದರು.ಘಟನೆಯಲ್ಲಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ.ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಿಸಿಪಿ ಉಷಾ ರಂಗ್ನಾನಿ ಅವರು,ಹಿಂದು ಮಹಾಪಂಚಾಯತ್ಗೆ ಅನುಮತಿಯನ್ನು ನಿರಾಕರಿಸಲಾಗಿತ್ತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News