ಆಕಾಶದಿಂದ ಉರಿಯುತ್ತಾ ಕೆಳಗೆ ಬಿದ್ದ ಸಿಲಿಂಡರ್‌ ರೀತಿಯ ಅಪರಿಚಿತ ವಸ್ತು: ವೀಡಿಯೊ ವೈರಲ್

Update: 2022-04-03 15:20 GMT

ಹೊಸದಿಲ್ಲಿ,ಎ.3: ಮಹಾರಾಷ್ಟ್ರದ ಆಗಸದಲ್ಲಿ ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಉಲ್ಕಾಪಾತದಂತಹ ದೃಶ್ಯಗಳು ಗೋಚರವಾದ ಬೆನ್ನಿಗೇ ಚಂದ್ರಾಪುರ ಜಿಲ್ಲೆಯಲ್ಲಿ ಬೃಹತ್ ಲೋಹದ ಬಳೆ ಮತ್ತು ಸಿಲಿಂಡರಾಕಾರದ ವಸ್ತು ಪತ್ತೆಯಾಗಿವೆ.‘ಸಿಂದೆವಾಹಿ ಗ್ರಾಮದಲ್ಲಿ ರಾತ್ರಿ ಸುಮಾರು ಮೂರು ಮೀಟರ್ ವ್ಯಾಸದ ಲೋಹದ ಬಳೆಯೊಂದು ಬಿದ್ದಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಬಳೆ ಬಿಸಿಯಾಗಿತ್ತು ಮತ್ತು ಆಗಸದಿಂದ ಬಿದ್ದಿರುವಂತೆ ಕಂಡು ಬಂದಿದೆ. ಸಮೀಪದ ಇನ್ನೊಂದು ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಿಲಿಂಡರಾಕಾರದ ವಸ್ತುವೊಂದು ಪತ್ತೆಯಾಗಿದೆ ’ ಎಂದು ಚಂದ್ರಾಪುರದ ತಹಶೀಲ್ದಾರ್ ಗಣೇಶ ಜಗದಾಳೆ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.


ಶನಿವಾರ ರಾತ್ರಿ ಖಾಲಿ ನಿವೇಶನವೊಂದರಲ್ಲಿ ಕಬ್ಬಿಣದ ಬೃಹತ್ ಬಳೆ ಬಿದ್ದಿರುವುದನ್ನು ಜನರು ನೋಡಿದ್ದರು. ಆ ಬಳೆ ಮೊದಲು ಅಲ್ಲಿರಲಿಲ್ಲ,ಹೀಗಾಗಿ ಅದು ಆಗಸದಿಂದ ಬಿದ್ದಿದೆ ಎನ್ನಲಾಗಿದೆ ಎಂದು ಚಂದ್ರಾಪುರ ಜಿಲ್ಲಾಧಿಕಾರಿ ಅಜಯ ಗುಲ್ಹಾನೆ ಅವರೂ ಹೇಳಿದರು.ಮುಂಬೈನ ವಿಪತ್ತು ನಿರ್ವಹಣೆ ನಿಯಂತ್ರಣ ಕೊಠಡಿಯ ತಜ್ಞರ ತಂಡವೊಂದು ಈ ವಸ್ತುಗಳನ್ನು ಪರೀಕ್ಷಿಸಲು ಚಂದ್ರಾಪುರಕ್ಕೆ ಭೇಟಿ ನೀಡಲಿದೆ ಎಂದರು.ಈ ಅವಶೇಷಗಳು ಉಪಗ್ರಹ ಉಡಾವಣೆಯ ಬಳಿಕ ರಾಕೆಟ್ ಬೂಸ್ಟರ್ಗಳ ತುಂಡುಗಳಾಗಿರಬಹುದು ಎಂದು ತಜ್ಞರು ಸೂಚಿಸಿದ್ದಾರೆ.ಶನಿವಾರ ನ್ಯೂಝಿಲಂಡ್ನ ಮಾಹಿಯಾ ಪೆನ್ಸುಲಾದಿಂದ ಎರಡು ಉಪಗ್ರಹಗಳನ್ನು ರಾಕೆಟ್ ಲ್ಯಾಬ್ ಎಲೆಕ್ಟ್ರಾನ್ ಲಾಂಚರ್ನಿಂದ ಉಡಾವಣೆಗೊಳಿಸಲಾಗಿತ್ತು. ಆದರೆ ಈ ಬೂಸ್ಟರ್ಗಳು ಆ ರಾಕೆಟ್ಗೆ ಸೇರಿದ್ದು ಎನ್ನುವುದು ದೃಢಪಟ್ಟಿಲ್ಲ.


‘ ಈ ಅವಶೇಷಗಳು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ ಚೀನಿ ರಾಕೆಟ್ನದ್ದಾಗಿರಬಹುದು. ಫೆ.2021ರಲ್ಲಿ ಉಡಾವಣೆಗೊಂಡಿದ್ದ ಚಾಂಗ್ ಝೆಂಗ್ 3ಬಿ ಸರಣಿ ಸಂಖ್ಯೆ ವೈ77ನ ಮೂರನೇ ಹಂತವಾಗಿದೆ. ಹೆಚ್ಚುಕಡಿಮೆ ಮುಂದಿನ ಒಂದು ಗಂಟೆಯಲ್ಲಿ ಅದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿತ್ತು ಮತ್ತು ಈಗ ಅವಶೇಷಗಳು ಪತ್ತೆಯಾಗಿರುವ ಸಮಯವು ಅದಕ್ಕೆ ತಾಳೆಯಾಗುತ್ತಿದೆ ’ ಎಂದು ಖಗೋಳಶಾಸ್ತ್ರಜ್ಞ ಜೋನಾಥನ್ ಮೆಕ್ಡೊವೆಲ್ ಅವರು ಶನಿವಾರ ರಾತ್ರಿ ಟ್ವೀಟಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಸಿಲಿಂಡರಾಕಾರದ ವಸ್ತುವು ಸುಮಾರು ಒಂದೂವರೆ ಮೀ.ವ್ಯಾಸವನ್ನು ಹೊಂದಿದೆ.
ವಾತಾವರಣದಲ್ಲಿ ವಸ್ತುಗಳು ಉರಿಯುತ್ತಿರುವ ವೀಡಿಯೊಗಳನ್ನು ಜನರು ಶನಿವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಈ ವಿದ್ಯಮಾನಗಳು ಗೋಚರಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News