ಹೈಕೋರ್ಟ್ ಜಾಮೀನು ನಿರಾಕರಣೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನವಾಬ್ ಮಲಿಕ್
ಹೊಸದಿಲ್ಲಿ, ಎ. 3: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಜಾಮೀನು ಅರ್ಜಿ ತಿರಸ್ಕರಿಸಿ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸುಪ್ರೀಂ ಕೋರ್ಟ್ನಲ್ಲಿ ಶನಿವಾರ ಮನವಿ ಸಲ್ಲಿಸಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹೀಂ ಹಾಗೂ ಆತನ ಸಹವರ್ತಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿ 23ರಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಮಹಾರಾಷ್ಟ್ರದಲ್ಲಿರುವುದು ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನ ಮೈತ್ರಿ ಸರಕಾರ.
ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮಾರ್ಚ್ 1ರಂದು ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಮಲಿಕ್ ಅವರು, ಜಾರಿ ನಿರ್ದೇಶನಾಲಯದಿಂದ ತನ್ನ ಬಂಧನ ಲಜ್ಜೆಗೆಟ್ಟ ಹಾಗೂ ಕಾನೂನು ಬಾಹಿರ ಕ್ರಮ ಎಂದು ವಾದಿಸಿದ್ದರು. ತಾನು ಕೆಲವು ವಿಷಯಗಳನ್ನು ಬಹಿರಂಗಪಡಿಸಿರುವುದರಿಂದ ತೀವ್ರ ಮುಖಭಂಗಕ್ಕೀಡಾದ ಬಳಿಕ ರಾಜಕೀಯ ಪ್ರತಿಸ್ಪರ್ಧಿಗಳು ತನ್ನನ್ನು ಗುರಿಯಾಗಿರಿಸಿದ್ದಾರೆ ಎಂದು ಮಲಿಕ್ ಪ್ರತಿಪಾದಿಸಿದ್ದಾರೆ. ಮಲಿಕ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಉಚ್ಚ ನ್ಯಾಯಾಲಯ ಮಾರ್ಚ್ 15ರಂದು ನಿರಾಕರಿಸಿತ್ತು. ಪ್ರಕರಣದಲ್ಲಿ ಎತ್ತಿದ ವಿಷಯಗಳು ಚರ್ಚಾರ್ಹ ಹಾಗೂ ದೀರ್ಘವಾಗಿ ಅಲಿಸುವ ಅಗತ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ವರಾಲೆ ಹಾಗೂ ಎಸ್ಎಂ ಮೋದಕ್ ಅವರನ್ನು ಒಳಗೊಂಡ ಪೀಠ ತಿಳಿಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯ ಮಾರ್ಚ್ 21ರಂದು ಮಲಿಕ್ ಅವರ ಕಸ್ಟಡಿಯನ್ನು ಎಪ್ರಿಲ್ 4ರ ವರೆಗೆ ವಿಸ್ತರಿಸಿತ್ತು.