×
Ad

ಹಿರಿಯ ರಂಗಕರ್ಮಿ ಶ್ರೀನಿವಾಸ ಶೆಟ್ಟಿಗಾರ್ ನಿಧನ

Update: 2022-04-03 21:58 IST
ಶ್ರೀನಿವಾಸ ಶೆಟ್ಟಿಗಾರ್

ಮಣಿಪಾಲ : ಹಿರಿಯ ರಂಗಕರ್ಮಿ, ಹವ್ಯಾಸಿ ಛಾಯಾಚಿತ್ರಗ್ರಾಹಕ ಶ್ರೀನಿವಾಸ ಶೆಟ್ಟಿಗಾರ್ (80) ಮಣಿಪಾಲದ ಸ್ವಗೃಹದಲ್ಲಿ ರವಿವಾರ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿಯ ಸಾಂಸ್ಕೃತಿಕ ಸಂಘಟನೆಯಾದ ರಂಗಭೂಮಿ ಉಡುಪಿಯ ಸ್ಥಾಪಕ ಸದಸ್ಯರಾದ ಶೆಟ್ಟಿಗಾರ್, ತಮ್ಮ ಗುರು ವಿದ್ವಾನ್ ಕುತ್ಪಾಡಿ ವೆಂಕಟಾಚಲ ಭಟ್ಟರಲ್ಲಿ ನಟರಾಗಿ ಪಳಗಿದವರು. ಇವರು ಸುಮಾರು 20 ವರ್ಷಗಳ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳಲ್ಲಿ ಮಿಂಚಿ ಆ ಕಾಲದಲ್ಲಿ ರಂಗಭೂಮಿಯ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ವರ್ಷವೂ ಅಭಿನಯ ಹಾಗೂ ಹಾಡುಗಾರಿಕೆಗೆ ವೈಯಕ್ತಿಕ ಬಹುಮಾನ ಪಡೆದುಕೊಂಡವರು. ಅತ್ಯಂತ ಸ್ಫುರದ್ರೂಪಿಯಾಗಿದ್ದ ಇವರ ರಂಗ ಪ್ರತಿಭೆಯ ಕುರಿತು ಹಲವು ದಂತಕತೆಗಳು ಅಂದು ಜನಜನಿತವಾಗಿದ್ದವು.

ಅಂತಾರಾಷ್ಟ್ರೀಯ ಜೇಸಿ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ರಂಗಭೂಮಿಯಲ್ಲಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಇವರ ರಂಗ ಚಟುವಟಿಕೆಗಳನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರು ಅಭಿನಂದನಾ ಪತ್ರವನ್ನಿತ್ತು ಗೌರವಿಸಿದ್ದರು. ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದ ಶೆಟ್ಟಿಗಾರರು, ಇಂದಿರಾಗಾಂಧಿ ಹಾಗೂ ದ.ರಾ.ಬೇಂದ್ರೆಯವರನ್ನೊಳಗೊಂಡಂತೆ ಆಗಿನ ಕಾಲದ ಹೆಸರಾಂತ ರಾಜಕಾರಣಿಗಳ ಛಾಯಾಚಿತ್ರಗ್ರಹಣವನ್ನು ಮಾಡಿದ್ದರು. ಮುದ್ರಣ ತಂತ್ರಜ್ಞಾನಿಯೂ ಆಗಿದ್ದ ಇವರು ಮಣಿಪಾಲದಲ್ಲಿ ಪತ್ರಿಕೆಯ ಛಾಯಾಗ್ರಾಹಕರೂ ಆಗಿದ್ದರು.

ಬಳಿಕ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ ಶ್ರೀನಿವಾಸ ಶೆಟ್ಟಿಗಾರ್, ಬಹ್ರೈನ್‌ನಲ್ಲಿ ಮಿನಿಸ್ಟ್ರಿ ಆಫ್ ಇನ್ನೊವೇಷನ್‌ನ ಮುಖ್ಯಸ್ಥನಾಗಿ 23 ವರ್ಷ ಸೇವೆ ಸಲ್ಲಿಸಿದರು. ಬಹ್ರೈನ್‌ಗೆ ಉಡುಪಿಯ ರಂಗಭೂಮಿಯ ತಂಡವನ್ನು ಪ್ರಥಮವಾಗಿ ಕರೆಸಿದ ಹೆಗ್ಗಳಿಕೆ ಇವರದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News