ಉತ್ತರಪ್ರದೇಶ: ಗಾಝಿಪುರ, ದೇವಬಂದ್‌ ಸೇರಿದಂತೆ ಮತ್ತಷ್ಟು ನಗರಗಳ ಹೆಸರು ಬದಲಾವಣೆ ಸಾಧ್ಯತೆ!

Update: 2022-04-06 13:14 GMT

ಲಕ್ನೋ: ಆದಿತ್ಯನಾಥ್ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶದ ಇನ್ನೂ ಕೆಲವು ಜಿಲ್ಲೆಗಳು ಮತ್ತು ನಗರಗಳ ಹೆಸರುಗಳು ಬದಲಾಗುವ ಸಾಧ್ಯತೆಯಿದೆ. 12 ಜಿಲ್ಲೆಗಳು ಮತ್ತು ನಗರಗಳ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಿದ್ದರು freepressjournal.in ವರದಿ ಮಾಡಿದೆ. 

ಮೂಲಗಳ ಪ್ರಕಾರ, 12 ಜಿಲ್ಲೆಗಳ ಮರುನಾಮಕರಣವು ರಾಜ್ಯ ಸರ್ಕಾರದ ಪರಿಗಣನೆಯಲ್ಲಿದೆ. ಶೀಘ್ರದಲ್ಲೇ, ಈ ಸಂಬಂಧ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿದೆ. 

ರಾಜ್ಯ ಸರ್ಕಾರವು ಅಲಿಗಢ್, ಫಾರೂಕಾಬಾದ್, ಬದೌನ್, ಸುಲ್ತಾನ್‌ಪುರ್, ಫಿರೋಜಾಬಾದ್ ಮತ್ತು ಶಹಜಹಾನ್‌ಪುರಗಳ ಮರುನಾಮಕರಣವನ್ನು ಮೊದಲು ಪರಿಗಣಿಸಬಹುದು ಮತ್ತು ಉಳಿದವುಗಳನ್ನು ನಂತರ ಪರಿಶೀಲಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ಜಿಲ್ಲೆಗಳ ಶಾಸಕರು, ಸಂಸದರು ಮತ್ತು ಜಿಲ್ಲಾ ಪಂಚಾಯತ್ ಮಂಡಳಿಗಳಿಂದ ರಾಜ್ಯ ಸರ್ಕಾರವು ಮರುನಾಮಕರಣದ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.

 ಮರುನಾಮಕರಣ ಮಾಡಬಹುದಾದ ನಗರಗಳಲ್ಲಿ ದೇವ್‌ಬಂದ್ ಕೂಡ ಸೇರಿದೆ, ಅಲ್ಲಿನ ಶಾಸಕ ಬ್ರಿಜೇಶ್ ಕುಮಾರ್ ಇದನ್ನು ದೇವಿಂದ್ ಎಂದು ಬದಲಾಯಿಸಲು ಸಲಹೆ ನೀಡಿದ್ದಾರೆ.

ಯುಪಿಯಲ್ಲಿ ತನ್ನ ಮೊದಲ ಅಧಿಕಾರಾವಧಿಯಲ್ಲಿ, ಯೋಗಿ ಸರ್ಕಾರವು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಬದಲಾಯಿಸಿತ್ತು. ಅಲ್ಲದೆ, ಮೊಘಲ್ಸ್ ರಾಯ್ ಜಂಕ್ಷನ್ ಅನ್ನು ದೀನದಯಾಳ್ ಉಪಾಧ್ಯ ಎಂದು ಮರುನಾಮಕರಣ ಮಾಡಲಾಗಿತ್ತು. 

ರಾಜ್ಯ ಸರ್ಕಾರದ ಅಧಿಕಾರಿಗಳ ಪ್ರಕಾರ, ಅಲಿಗಢದ ಜಿಲ್ಲಾ ಪಂಚಾಯತ್‌, ಜಿಲ್ಲೆಯ ಹೆಸರನ್ನು ಹರಿಘರ್ ಅಥವಾ ಆರ್ಯಗಢ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕಳುಹಿಸಿದೆ. ಅಲಿಗಢವನ್ನು ಹರಿಘರ್ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು 2015 ರಲ್ಲಿ ವಿಶ್ವ ಹಿಂದೂ ಪರಿಷತ್   ಮೊದಲಿಗೆ ಎತ್ತಿತ್ತು. 
ಸುಲ್ತಾನ್‌ಪುರ ಜಿಲ್ಲೆಯನ್ನು ಕುಶಭಾವನ್‌ಪುರ ಎಂದು ಮರುನಾಮಕರಣ ಮಾಡುವಂತೆಯೂ ಬೇಡಿಕೆಯನ್ನು ಎತ್ತಲಾಗಿದೆ. ಗಾಝಿಪುರವನ್ನು ಗಾಧಿಪುರಿ ಎಂದು ಮರುನಾಮಕರಣ ಮಾಡಬೇಕೆಂದು, ಬದೌನ್ ಜಿಲ್ಲೆಯನ್ನು ವೇದ್ ಮೌ ಮರುನಾಮಕಾರಣ ಮಾಡಲು ಬೇಡಿಕೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. 

ಈ ಹಿಂದೆ ಸಿಎಂ ಯೋಗಿ ಅವರ ಅಧಿಕಾರಾವಧಿಯಲ್ಲಿ, ಫಿರೋಜಾಬಾದ್ ಜಿಲ್ಲೆಯ ಹೆಸರನ್ನು ಚಂದ್ರನಗರ ಮತ್ತು ಶಹಜಾನ್‌ಪುರವನ್ನು ಶಾಜಿಪುರ ಎಂದು ಬದಲಾಯಿಸುವ ಪ್ರಸ್ತಾಪವನ್ನು ಈ ಸ್ಥಳಗಳ ಜನಪ್ರತಿನಿಧಿಗಳು ಮುಂದಿಟ್ಟಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ, ಮೈನ್‌ಪುರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಮಂಡಳಿಯು ಇದನ್ನು ಮಾಯನ್‌ಪುರಿ ಎಂದು ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರವನ್ನು ಕೇಳಿತ್ತು. ಆಗ್ರಾವನ್ನು ಅಗ್ರವನ್ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಕೂಡಾ ಇದೆ. 

ಯಾವುದೇ ಜಿಲ್ಲೆಗೆ ಮರುನಾಮಕರಣ ಮಾಡಲು ಮೊದಲು ವಿಧಾನಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮತಿ ನೀಡಿದ ನಂತರ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ, ಅಂತಹ ಕೆಲವು ಪ್ರಸ್ತಾಪಗಳು ಬರಬಹುದು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News