×
Ad

ಶೌಚ ಗುಂಡಿ, ಒಳಚರಂಡಿ ಸ್ವಚ್ಛತೆ ಕೆಲಸದಲ್ಲಿ 3 ವರ್ಷಗಳಲ್ಲಿ 161 ಸಾವು: ಕೇಂದ್ರ ಸರಕಾರ

Update: 2022-04-06 21:26 IST

ಹೊಸದಿಲ್ಲಿ, ಎ.6: ಕಳೆದ ಮೂರು ವರ್ಷಗಳಲ್ಲಿ ಶೌಚಗುಂಡಿ ಹಾಗೂ ಒಳಚರಂಡಿಗಳನ್ನು ಶುಚಿಗೊಳಿಸುವ ಸಂದರ್ಭ 161 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.

ರಾಜ್ಯ ಸಭೆಯಲ್ಲಿ ಬಿಜೆಪಿ ಸಂಸದ ಮಹೇಶ್ ಪೋದ್ದಾರ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಿದ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್, ಇಂತಹ ಸಾವುಗಳು 2019ರಲ್ಲಿ 118, 2020ರಲ್ಲಿ 19 ಹಾಗೂ 2021ರಲ್ಲಿ 24 ಸಂಭವಿಸಿವೆ ಎಂದರು.

ತಮಿಳುನಾಡಿನಲ್ಲಿ 27 ಮಂದಿ ಸಾವನ್ನಪ್ಪಿದ್ದು, ದೇಶದಲ್ಲೇ ಗರಿಷ್ಠವಾಗಿದೆ. 26 ಮಂದಿ ಸಾವನ್ನಪ್ಪಿರುವ ಉತ್ತರಪ್ರದೇಶದ ಅನಂತರದ ಸ್ಥಾನದಲ್ಲಿದೆ ಎಂದು ತಿಳಿಸಿದರು. 2013 ಹಾಗೂ 2018ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೇಶಾದ್ಯಂತ 58.098 ಮ್ಯಾನುವೆಲ್ ಸ್ಕಾವೆಂಜರ್‌ಗಳನ್ನು ಗುರುತಿಸಲಾಗಿದೆ.

 ಮ್ಯಾನುವೆಲ್ ಸ್ಕಾವೆಂಜರ್‌ಗಳ ಪುನರ್ವಸತಿ ಯೋಜನೆ (ಎಸ್‌ಆರ್‌ಎಂಎಸ್) ಅಡಿಯಲ್ಲಿ ಗುರುತಿಸಲಾದ ಹಾಗೂ ಅರ್ಹ 58,098 ಮ್ಯಾನುವೆಲ್ ಸ್ಕಾವೆಂಜರ್‌ಗಳ ಬ್ಯಾಂಕ್ ಖಾತೆಗಳಿಗೆ ಒಂದು ಬಾರಿಯ ನಗದು ನೆರವು 40 ಸಾವಿರ ರೂಪಾಯಿಯನ್ನು ನೇರವಾಗಿ ಠೇವಣಿ ಮಾಡಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ. ಅನೈರ್ಮಲ್ಯ ಶೌಚಾಲಯಗಳು, ಮ್ಯಾನುವಲ್ ಸ್ಕಾವೆಂಜರ್‌ಗಳು ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು 2020ರಲ್ಲಿ ‘ಸ್ವಚ್ಛತಾ ಅಭಿಯಾನ’ ಮೊಬೈಲ್ ಆ್ಯಪ್‌ಅನ್ನು ಸಚಿವಾಲಯ ಲೋಕಾರ್ಪಣೆಗೊಳಿಸಿದೆ ಎಂದು ಅವರು ಹೇಳಿದರು.

ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ, 1993ರಿಂದ ಚರಂಡಿ ಹಾಗೂ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭ 971 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News