ಕರೌಲಿ: ಕೋಮು ಸಂಘರ್ಷ; ಎಪ್ರಿಲ್ 7ರ ವರೆಗೆ ಕರ್ಫ್ಯೂ ವಿಸ್ತರಣೆ

Update: 2022-04-06 17:02 GMT

ಜೈಪುರ, ಎ. 5: ಎಪ್ರಿಲ್ 2ರಂದು ನಡೆದ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜಸ್ಥಾನದ ಕರೌಲಿಯಲ್ಲಿ ಹೇರಲಾಗಿರುವ ಕರ್ಫ್ಯೂವನ್ನು ಎಪ್ರಿಲ್ 7ರ ಮಧ್ಯರಾತ್ರಿ ವರೆಗೆ ವಿಸ್ತರಿಸಲಾಗಿದೆ. ಕರ್ಫ್ಯೂ ವಿಸ್ತರಣೆಯ ಆದೇಶ ಜಾರಿಗೊಳಿಸಿದ ಕರೌಲಿಯ ಜಿಲ್ಲಾಧಿಕಾರಿ ರಾಜೇಂದ್ರ ಶೇಖಾವತ್, ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿಗೆ ಪ್ರಸ್ತುತ ಸನ್ನಿವೇಶ ಸಹಜವಾಗಿಲ್ಲ ಎಂದಿದ್ದಾರೆ.

ಆದರೆ, ಪರೀಕ್ಷೆಗೆ ಹಾಜರಾಗಲಿರುವ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯತಿ ನೀಡಲಾಗುವುದು. ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಪರೀಕ್ಷಾ ಕೇಂದ್ರ ತಲುಪಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮನೆಯಿಂದ ಹೊರಗಿಳಿಯಲು ಹಾಗೂ ಅಗತ್ಯದ ವಸ್ತುಗಳನ್ನು ಖರೀದಿಸಲು ಎರಡು ಗಂಟೆಗಳ ಕರ್ಫ್ಯೂ ಸಡಿಲಿಕೆ ನೀಡಲಾಗುವುದು. ಕಾನೂನು ಹಾಗೂ ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಕರ್ಫ್ಯೂ ಸಡಿಲಿಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನವ ಸಂವತ್ಸರದ ಸಂಭ್ರಮಾಚರಣೆಯ ಮೋಟಾರು ಸೈಕಲ್ ರ್ಯಾಲಿ ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶದಿಂದ ಹಾದು ಹೋಗುವ ಸಂದರ್ಭ ಕಲ್ಲು ತೂರಾಟ ನಡೆದಿದೆ. ಅನಂತರ ಕೋಮು ಗಲಭೆ ಆರಂಭವಾಗಿದೆ. ಹಿಂಸಾಚಾರ ಕೂಡಲೇ ಉಲ್ಬಣಿಸಿತು. ಉದ್ರಿಕ್ತ ಗುಂಪು ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿತು. ಈ ಘಟನೆಯಲ್ಲಿ 35 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಟಾರು ಸೈಕಲ್ ರ್ಯಾಲಿಯನ್ನು ವಿಶ್ವಹಿಂದೂ ಪರಿಷತ್ (ವಿಎಚ್ಪಿ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಾಗೂ ಬಜರಂಗ ದಳ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News