ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‍ಗಳ ಎಟಿಎಂಗಳಲ್ಲಿ 'ಕಾರ್ಡ್‍ರಹಿತ' ಹಣ ವಿದ್‍ಡ್ರಾ ಸೌಲಭ್ಯ

Update: 2022-04-08 10:36 GMT

ಮುಂಬೈ: ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಎಲ್ಲಾ ಬ್ಯಾಂಕ್‍ಗಳಿಗೆ ಎಟಿಎಂಗಳ ಮೂಲಕ ಕಾರ್ಡ್‍ರಹಿತ ನಗದು ವಿದ್‍ಡ್ರಾವಲ್ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಅನುಮತಿಸಿದೆ.

ಪ್ರಸಕ್ತ ಇಂತಹ ಒಂದು ವ್ಯವಸ್ಥೆಯನ್ನು ದೇಶದಲ್ಲಿ ಕೆಲವೇ ಕೆಲವು ಬ್ಯಾಂಕ್‍ಗಳು  ತಮ್ಮ ಗ್ರಾಹಕರಿಗೆ, ತಮ್ಮ ಎಟಿಎಂಗಳ ಮೂಲಕ ಮಾತ್ರ ಅನುಮತಿಸುತ್ತಿವೆ.

"ಇದೀಗ ಈ ವ್ಯವಸ್ಥೆಯನ್ನು ಎಲ್ಲಾ ಬ್ಯಾಂಕ್‍ಗಳ ಎಲ್ಲಾ ಎಟಿಎಂ ನೆಟ್‍ವರ್ಕ್‍ಗಳಲ್ಲೂ ಯುಪಿಐ ಮೂಲಕ ಒದಗಿಸಲು ಪ್ರಸ್ತಾಪಿಸಲಾಗಿದೆ. ಈ ಮೂಲಕ ಭೌತಿಕ ಕಾರ್ಡ್ ಅವಶ್ಯಕತೆಯಿಲ್ಲದೇ ಇರುವುದಿಂದ ವಂಚಕರು ಕಾರ್ಡ್ ಕ್ಲೋನಿಂಗ್ ಹಾಗೂ ಸ್ಕಿಮ್ಮಿಂಗ್ ನಡೆಸುವುದನ್ನು ತಡೆಯಬಹುದಾಗಿದೆ" ಎಂದು ಆರ್‍ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆಯನ್ನು ಘೋಷಿಸುವ ವೇಲೆ ಗವರ್ನರ್ ಶಕ್ತಿಕಂಠ ದಾಸ್ ಹೇಳಿದ್ದಾರೆ.

ಈ ಹೊಸ ವ್ಯವಸ್ಥೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಯುಪಿಐ ಮೂಲಕ ಮಾಡಲಾಗುವುದಾದರೆ ಹಣ ವಿದ್‍ಡ್ರಾ ಎಟಿಎಂಗಳ ಮೂಲಕ ಆಗುತ್ತದೆ. ಈ ಕುರಿತು ಎನ್‍ಪಿಸಿಐ, ಎಟಿಎಂ ನೆಟ್‍ವರ್ಕ್‍ಗಳು ಮತ್ತು ಬ್ಯಾಂಕ್‍ಗಳಿಗೆ ಶೀಘ್ರ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಆರ್‍ಬಿಐ ಹೇಳಿದೆ.

ಭಾರತ್ ಬಿಲ್ ಪೇಮೆಂಟ್ ಸಿಸ್ಟಂ(ಬಿಬಿಪಿಎಸ್) ಮೂಲಕ  ಹೆಚ್ಚಿನ ಸಂಖ್ಯೆಯ ಬ್ಯಾಂಕೇತರ ಭಾರತ್ ಬಿಲ್ ಪೇಮೆಂಟ್ ಆಪರೇಟಿಂಗ್ ಘಟಕಗಳು ಕಾರ್ಯಾಚರಿಸುವಂತಾಗಲು ಇಂತಹ ಘಟಕಗಳ ಒಟ್ಟು ಮೌಲ್ಯವನ್ನು ರೂ 100 ಕೋಟಿಯಿಂದ ರೂ 25 ಕೋಟಿಗೆ ಇಳಿಸಲಾಗಿದೆ, ಈ ಕುರಿತು ಅಗತ್ಯ ನಿಯಮಗಳ ತಿದ್ದುಪಡಿ ಸದ್ಯದಲ್ಲಿಯೇ ಮಾಡಲಾಗುವುದು ಎಂದು ಆರ್‍ಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News