ಈಶಾನ್ಯ ರಾಜ್ಯಗಳಲ್ಲಿ 10ನೇ ತರಗತಿವರೆಗೆ ಹಿಂದಿ ಕಡ್ಡಾಯವಾಗಲಿದೆ: ಅಮಿತ್ ಶಾ

Update: 2022-04-08 17:00 GMT
photo courtesy:twitter

ಹೊಸದಿಲ್ಲಿ,ಎ.8: ಎಲ್ಲ ಎಂಟು ಈಶಾನ್ಯ ರಾಜ್ಯಗಳಲ್ಲಿ 10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಂದಿ ಪರೀಕ್ಷೆಗಳಿಗೆ ಹೆಚ್ಚಿನ ಗಮನವನ್ನು ನೀಡಬೇಕು ಎಂದೂ ಅವರು ತಿಳಿಸಿದ್ದಾರೆ.

ಎಂಟು ಈಶಾನ್ಯ ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ಈಶಾನ್ಯದ ಒಂಭತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿಕೊಂಡಿವೆ ಎಂದು ಗುರುವಾರ ಇಲ್ಲಿ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ತಿಳಿಸಿದ ಶಾ,ಅಧಿಕೃತ ಭಾಷೆಯನ್ನು ದೇಶದ ಏಕತೆಯ ಭಾಗವಾಗಿಸಲು ಈಗ ಸಕಾಲವಾಗಿದೆ ಎಂದರು.ಹಿಂದಿಯನ್ನು ‘ಭಾರತದ ಭಾಷೆ ’ ಎಂದು ಬಣ್ಣಿಸಿದ ಅವರು,ವಿವಿಧ ರಾಜ್ಯಗಳ ಜನರು ಪರಸ್ಪರ ಮಾತನಾಡುವಾಗ ಹಿಂದಿಯನ್ನೇ ಬಳಸಬೇಕು. ಹಿಂದಿಯನ್ನು ಇಂಗ್ಲಿಷ್ಗೆ ಪರ್ಯಾಯವಾಗಿ ಒಪ್ಪಿಕೊಳ್ಳಬೇಕು,ಸ್ಥಳೀಯ ಭಾಷೆಗಳಿಗಲ್ಲ ಎಂದರು.
ಭಾರತವು ರಾಷ್ಟ್ರೀಯ ಭಾಷೆಯನ್ನು ಹೊಂದಿಲ್ಲ ಮತ್ತು ಹಿಂದಿ ದೇಶದ ಅಧಿಕೃತ ಭಾಷೆಯಾಗಿದೆ.

ಹಿಂದಿ ಸರಕಾರವನ್ನು ನಡೆಸುವ ಮಾಧ್ಯಮವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದರು ಮತ್ತು ಇದು ಹಿಂದಿ ಭಾಷೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಲಿದೆ. ಶೇ.70ರಷ್ಟು ಸಚಿವಾಲಯಗಳ ಕಾರ್ಯಸೂಚಿಗಳನ್ನು ಈಗ ಹಿಂದಿಯಲ್ಲಿ ಸಿದ್ಧಗೊಳಿಸಲಾಗುತ್ತದೆ ಎಂದು ಹೇಳಿದ ಶಾ,ಅಧಿಕೃತ ಭಾಷೆಯ ಪ್ರಸಾರವನ್ನು ಹೆಚ್ಚಿಸಲು ಇತರ ಭಾಷೆಗಳಿಂದ ಸ್ಥಳೀಯ ಶಬ್ದಗಳನ್ನು ಸೇರಿಸಿಕೊಂಡು ಹಿಂದಿ ನಿಘಂಟನ್ನು ಮರುಪ್ರಕಟಿಸಬೇಕು ಎಂದು ಶಿಫಾರಸು ಮಾಡಿದರು.
ಅಧಿಕೃತ ಭಾಷಾ ಸಮಿತಿಯ ವರದಿಯ 11ನೇ ಸಂಪುಟವನ್ನು ರಾಷ್ಟ್ರಪತಿಗಳಿಗೆ ಕಳುಹಿಸುವುದನ್ನು ಅನುಮೋದಿಸಿದ ಶಾ,ಎಲ್ಲ 11 ವರದಿಗಳ ಜಾರಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಂಬಂಧಿತ ಕಾರ್ಯದರ್ಶಿಗಳೊಂದಿಗೆ ಸಭೆಯ ಬಳಿಕ ಅನುಷ್ಠಾನ ಸಮಿತಿಯನ್ನು ರಚಿಸಬೇಕು ಎಂದೂ ಶಿಫಾರಸು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News