ವಂಚನೆ ಪ್ರಕರಣ: ಶಿವಸೇನೆ ನಾಯಕನ 41 ಆಸ್ತಿಗಳನ್ನು ಜಪ್ತಿ ಮಾಡಿದ ತೆರಿಗೆ ಇಲಾಖೆ

Update: 2022-04-08 17:14 GMT
yashwant jadhav(photo pti)

ಹೊಸದಿಲ್ಲಿ,ಎ.8: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಐದು ಕೋ.ರೂ.ಮೌಲ್ಯದ ಫ್ಲಾಟ್ ಸೇರಿದಂತೆ ಶಿವಸೇನೆ ನಾಯಕ ಹಾಗೂ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸ್ಥಾಯಿಸಮಿತಿಯ ಮಾಜಿ ಅಧ್ಯಕ್ಷ ಯಶವಂತ ಜಾಧವ್ ಅವರಿಗೆ ಸೇರಿದ್ದೆನ್ನಲಾಗಿರುವ 41 ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ ಎಂದು ಇಲಾಖೆಯ ಮೂಲಗಳು ಶುಕ್ರವಾರ ತಿಳಿಸಿವೆ. 

ಮುಂಬೈನ ಬೈಕುಲಾದಲ್ಲಿಯ ಬಿಲ್ಖಾಡಿ ಚೇಂಬರ್ ಕಟ್ಟಡದಲ್ಲಿಯ 31 ಫ್ಲಾಟ್ ಗಳು, ಬಾಂದ್ರಾದಲ್ಲಿಯ ಐದು ಕೋ.ರೂ.ಮೌಲ್ಯದ ಫ್ಲಾಟ್ ಹಾಗೂ ಬೈಕುಲಾದ ಹೋಟೆಲ್ ಕ್ರೌನ್ ಇಂಪೀರಿಯಲ್ ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ಸೇರಿವೆ. ಜಾಧವ್ ಬಿಎಂಸಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಈ ಎಲ್ಲ ಆಸ್ತಿಗಳನ್ನು ಖರೀದಿಸಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಜಪ್ತಿ ಮಾಡಿಕೊಳ್ಳಲಾಗಿರುವ ಆಸ್ತಿಗಳು ಜಾಧವ್,ಅವರ ಕುಟುಂಬ ಸದಸ್ಯರು ಮತ್ತು ನಿಕಟವರ್ತಿಗಳ ಹೆಸರುಗಳಲ್ಲಿ ನೋಂದಣಿಯಾಗಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಜಪ್ತಿ ಮಾಡಲಾಗಿರುವ ಆಸ್ತಿಗಳ ಪೈಕಿ ಒಂದು ಹೋಟೆಲ್ ಶಿವಸೇನೆ ಶಾಸಕಿ ಹಾಗೂ ಜಾಧವ ಪತ್ನಿ ಯಾಮಿನಿ ಜಾಧವರ ತಾಯಿ ಸುನಂದಾ ಮೊಹಿತೆಯವರ ಹೆಸರನ್ನು ಹೊಂದಿದೆ.

ಜಾಧವರ ನಿಕಟವರ್ತಿಗಳಾಗಿರುವ ವಿಲಾಸ ಮೊಹಿತೆ ಮತ್ತು ವಿನೀತ ಜಾಧವ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಇಲಾಖೆಯು ಅವರಿಬ್ಬರಿಗೂ ಸಮನ್ಸ್ ಹೊರಡಿಸಿತ್ತಾದರೂ ಅವರು ಹಾಜರಾಗಿಲ್ಲ.

ವಿಲಾಸ ಮೊಹಿತೆ ಬಿಎಂಸಿಯಲ್ಲಿ ಜಾಧವ್ ಕೆಲಸವನ್ನು ನೋಡಿಕೊಳ್ಳುತ್ತಿದ್ದರೆ ವಿನೀತ್ ಜಾಧತ್ ಬಿಮಲ್ ಅಗರವಾಲ್ ಎಂಬವರ ಕಂಪನಿ ನ್ಯೂಸ್ಶಾಕ್ ಮಲ್ಟಿಮೀಡಿಯಾ ಪ್ರೈ.ಲಿ.ನ ನಿರ್ದೇಶಕರಲ್ಲಿ ಓರ್ವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪರಂಬೀರ್ ಸಿಂಗ್ರ ಹಫ್ತಾ ವಸೂಲಿ ಪ್ರಕರಣದಲ್ಲಿಯೂ ಇದೇ ಬಿಮಲ್ ಅಗರವಾಲ್ ಹೆಸರು ಕೇಳಿ ಬಂದಿತ್ತು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News