ಬಹುತ್ವ ಭಾರತದ ಬಟ್ಟೆ ಬಿಚ್ಚಿಸುತ್ತಿರುವ ಪೊಲೀಸ್ ವ್ಯವಸ್ಥೆ

Update: 2022-04-08 19:30 GMT

ಇಂದು ನಾವು ನಮ್ಮದೇ ಆದ ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿದ್ದೇವೋ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದೇವೋ ಎಂಬುದು ಅರ್ಥವಾಗದೆ ನಲುಗುತ್ತಿದ್ದೇವೆ.

ಇತ್ತೀಚೆಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಕೇದಾರನಾಥ ಶುಕ್ಲಾ ಹಾಗೂ ಅವರ ಪುತ್ರ ಕುಂದೇರ್ ಗುರುದತ್ ಶುಕ್ಲಾ ವಿರುದ್ಧ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ್ದರೆನ್ನಲಾದ ರಂಗಭೂಮಿ ಕಲಾವಿದ ನೀರಜ್ ಕುಮಾರ್‌ರ ಬಂಧನದ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ರಂಗಭೂಮಿ ಕಲಾವಿದರು ಸೇರಿ 8 ಮಂದಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿ ಅವರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ಠಾಣೆಯೊಳಗೆ ಒಳಉಡುಪಿನಲ್ಲಿ ಕೈ ಕಟ್ಟಿ ನಿಲ್ಲುವಂತೆ ಮಾಡಿರುವ ಆಘಾತಕಾರಿ ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದಲ್ಲದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಜಾತಂತ್ರ ವ್ಯವಸ್ಥೆಯ ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ತನ್ನ ಕರ್ತವ್ಯ ನಿರ್ವಹಿಸುವುದನ್ನು ಮಾಧ್ಯಮದಲ್ಲಿ ಪ್ರಕಟಿಸುವುದು, ಅದರ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡುವುದು, ಒಂದು ವೇಳೆ ಅದು ತಪ್ಪುಎಂದಾದರೆ ಅದನ್ನು ಸರಿಪಡಿಸುವಂತೆ ಒತ್ತಾಯಿಸುವುದು ಮತ್ತು ದೈನಂದಿನವಾಗಿ ಸಮಾಜದಲ್ಲಿ ನಡೆಯುವ ವಿಷಯಗಳನ್ನು ಜನರತ್ತ ತಲುಪುವಂತೆ ಮಾಡುವ ಕೆಲಸ ಮಾಧ್ಯಮದವರದ್ದಾಗಿದೆ. ಇವರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಮೌಲ್ಯವರ್ಧಿತವಾದ ವೃತ್ತಿಯಾಗಿದೆ.

ಇಂತಹ ವೃತ್ತಿಯಲ್ಲಿ ತೊಡಗಿರುವ ಪತ್ರಕರ್ತರನ್ನು ಮಧ್ಯಪ್ರದೇಶದ ಪೊಲೀಸರು ಬಟ್ಟೆ ಬಿಚ್ಚಿಸಿ ನಿಲ್ಲಿಸುತ್ತಾರೆ ಎಂದರೆ ವ್ಯವಸ್ಥೆಯನ್ನು ಯಾವ ಮಟ್ಟಕ್ಕೆ ಧ್ವಂಸ ಮಾಡಲು ಹೊರಟಿದ್ದಾರೆ? ಮುಂದುವರಿದು, ಠಾಣಾಧಿಕಾರಿ ಅಭಿಷೇಕ್ ತಿವಾರಿ ಪತ್ರಕರ್ತರಿಗೆ ನೀವು ಶಾಸಕರ ವಿರುದ್ಧ ಯಾಕೆ ವರದಿ ಪ್ರಕಟಿಸುತ್ತೀರಿ? ಮತ್ತೆ ಶಾಸಕರ ವಿರುದ್ಧ ವರದಿ ಪ್ರಕಟಿಸಿದರೆ ನಿಮ್ಮನ್ನು ಬೆತ್ತಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದಾರೆ. ಇವರಿಗೆ ಬಂಧಿಸಿದ ವ್ಯಕ್ತಿಯ ಬಟ್ಟೆ ಬಿಚ್ಚಿಸಲು ಅಧಿಕಾರ ಕೊಟ್ಟವರ್ಯಾರು? ಕಾನೂನಾತ್ಮಕವಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ ಆತನಿಗೆ ಸಂವಿಧಾನ ಕಲಂ. 21 ಪ್ರಕಾರ ಜೀವ ಸಂರಕ್ಷಣೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ ಮಾಡಬೇಕೇ ಹೊರತು ಹರಣ ಮಾಡತಕ್ಕುದಲ್ಲ ಎಂದು ಹೇಳಿದೆ. ಆದರೆ ಇಲ್ಲಿ ಪೊಲೀಸರು ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಲ್ಲದೆ ಪತ್ರಿಕಾ ಸ್ವಾತಂತ್ರ್ಯವನ್ನು ಕೂಡಾ ಹರಣ ಮಾಡಿ ಸಂವಿಧಾನಕ್ಕೆ ದ್ರೋಹವೆಸಗಿದ್ದಾರೆ.

ಈ ಪೊಲೀಸರು ಶಾಸಕರ ಪರ ಧ್ವನಿ ಎತ್ತಿ ಪತ್ರಕರ್ತರಿಗೆ ಧಮ್ಕಿ ಹಾಕುತ್ತಾರೆ ಎಂದರೆ ಇವರು ಶಾಸಕರ ಪರ ಕೆಲಸ ಮಾಡುತ್ತಾರೋ ಅಥವಾ ಸಾರ್ವಜನಿಕರ ಪರ ಕೆಲಸ ಮಾಡುತ್ತಾರೋ ಎಂಬುದು ಸಹ ವಿಮರ್ಶಿಸಬೇಕಾಗಿದೆ. ಇವರು ಸಾರ್ವಜನಿಕ ತೆರಿಗೆಯಲ್ಲಿ ಪಡೆಯುವ ಸಂಬಳಕ್ಕೆ ಪ್ರಾಮಾಣಿಕರಾಗಿರಬೇಕೇ ಹೊರತು ಶಾಸಕರು ಕೊಡುವ ದೇಣಿಗೆಗೆ ಅಲ್ಲ ಎಂಬುದು ಮನಗಾಣಬೇಕಾಗಿದೆ. ಈ ಕೃತ್ಯ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಕೊಳ್ಳಿ ಇಟ್ಟಂತಾಗಿದೆ ಅಲ್ಲದೆ ಬಹುತ್ವ ಭಾರತದ ಬಟ್ಟೆಯನ್ನು ಬಿಚ್ಚಿಸಲು ಹೊರಟಿದ್ದಾರೆ ಎಂದರೆ ತಪ್ಪಾಗಲಾರದು! ಕೂಡಲೇ ಈ ಪತ್ರಕರ್ತರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದೊಂದು ದಿನ ಇವರಿಂದಲೇ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿ ಕಟ್ಟಕಡೆಯ ಜನರಿಗೆ ನ್ಯಾಯ ಮರೀಚಿಕೆಯಾಗಿ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುವ ದಿನ ದೂರವೇನಿಲ್ಲ.

Writer - ಪುನೀತ್ ಎನ್., ಮೈಸೂರು

contributor

Editor - ಪುನೀತ್ ಎನ್., ಮೈಸೂರು

contributor

Similar News