ರೈಲು ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 4 ಮಕ್ಕಳ ಸಹಿತ 39 ಮಂದಿ ಮೃತ್ಯು; ಉಕ್ರೇನ್ ಹೇಳಿಕೆ
ಕೀವ್, ಎ.8: ಪೂರ್ವ ಉಕ್ರೇನ್ನ ಕ್ರಮಟೊರಸ್ಕ್ ನಗರದ ರೈಲು ನಿಲ್ದಾಣದ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ 4 ಮಕ್ಕಳ ಸಹಿತ ಕನಿಷ್ಟ 39 ಮಂದಿ ಮೃತಪಟ್ಟಿದ್ದು ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ರಶ್ಯದ ಕ್ಷಿಪಣಿ ದಾಳಿಯಲ್ಲಿ 4 ಮಕ್ಕಳ ಸಹಿತ 39 ಮಂದಿ ಮೃತಪಟ್ಟಿದ್ದು ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಡೊನೆಟ್ಸ್ಕ್ ಗವರ್ನರ್ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ. ದೇಶದ ಇತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ರೈಲು ನಿಲ್ದಾಣಕ್ಕೆ ಆಗಮಿಸಿದ ಜನರನ್ನು ಗುರಿಯಾಗಿಸಿ ರಶ್ಯ ಸೇನೆ ಎರಡು ಕ್ಷಿಪಣಿ ಪ್ರಯೋಗಿಸಿದೆ ಎಂದು ಉಕ್ರೇನ್ನ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ರಶ್ಯ ನಿರಾಕರಿಸಿದೆ. ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇದೊಂದು ಸಾಮಾನ್ಯ ರೈಲ್ವೇ ನಿಲ್ದಾಣವಾಗಿತ್ತು ಮತ್ತು ಇಲ್ಲಿನ ಬಹುತೇಕ ನಾಗರಿಕರು ರಶ್ಯ ಭಾಷೆ ಮಾತನಾಡುವವರು.
ಯುದ್ಧಧ 44 ದಿನಗಳ ಬಳಿಕದ ವಾಸ್ತವಾಂಶದ ಚಿತ್ರವಿದು ಎಂದವರು ಟ್ವೀಟ್ ಮಾಡಿದ್ದಾರೆ. ಕ್ಷಿಪಣಿ ದಾಳಿಯ ಸಂದರ್ಭ ರೈಲು ನಿಲ್ದಾಣದಲ್ಲಿ ಸಾವಿರಾರು ಜನರಿದ್ದರು. ತಾವು ಎಲ್ಲಿಗೆ ಗುರಿ ಹಿಡಿದಿದ್ದೇವೆ ಮತ್ತು ಏನು ಮಾಡಲು ಹೊರಟಿದ್ದೇವೆ ಎಂಬುದು ರಶ್ಯನ್ನರಿಗೆ ತಿಳಿದಿದೆ. ಆತಂಕ ಮತ್ತು ಭೀತಿಯ ಬೀಜ ಬಿತ್ತಲು ಅವರು ಬಯಸಿದ್ದಾರೆ.ಸಾಧ್ಯವಾದಷ್ಟು ನಾಗರಿಕರನ್ನು ಮುಗಿಸಿಬಿಡುವುದು ಅವರ ಉದ್ದೇಶವಾಗಿದೆ ಎಂದು ಉಕ್ರೇನ್ ವಿದೇಶ ಸಚಿವಾಲಯ ಆರೋಪಿಸಿದ್ದು ರೈಲ್ವೇ ನಿಲ್ದಾಣದಲ್ಲಿ ಹಲವು ಮೃತದೇಹಗಳು ಬಿದ್ದಿರುವುದು, ಬ್ಯಾಗ್ಗಳು ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವ ಫೊಟೊವನ್ನು ಅಪ್ಲೋಡ್ ಮಾಡಿದೆ.
ಕನಿಷ್ಟ 20 ಮೃತದೇಹಗಳನ್ನು ರೈಲು ನಿಲ್ದಾಣದಲ್ಲಿ ಕಂಡಿರುವುದಾಗಿ ಎಎಫ್ಪಿ ಪತ್ರಕರ್ತರು ಹೇಳಿದ್ದು, ನಿಲ್ದಾಣದ ಪಕ್ಕ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದಿದ್ದಾರೆ. ಆರೋಪವನ್ನು ನಿರಾಕರಿಸಿರುವ ರಶ್ಯ, ಉಕ್ರೇನ್ ಅಧಿಕಾರಿಗಳು ಪೋಸ್ಟ್ ಮಾಡಿರುವ ಫೋಟೊದಲ್ಲಿ ಕಂಡುಬರುವ ಕ್ಷಿಪಣಿಯ ಚೂರು ಟೊಚ್ಕಾ-ಯು ಕ್ಷಿಪಣಿಯ ಭಾಗವಾಗಿದೆ ಮತ್ತು ಇದನ್ನು ಉಕ್ರೇನ್ ಸೇನೆ ಬಳಸುತ್ತಿದೆ. ಇಂತಹ ಕೃತ್ಯಗಳನ್ನು ಉದ್ದೇಶಪೂರ್ವಕವಾಗಿ ನಡೆಸಿ ರಶ್ಯದ ಮೇಲೆ ಆರೋಪ ಹೊರಿಸುವ ತಂತ್ರಗಾರಿಕೆ ಉಕ್ರೇನ್ನದ್ದಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಇದೇ ಪ್ರದೇಶದಲ್ಲಿ ಗುರುವಾರ 3 ರೈಲುಗಳ ಪ್ರಯಾಣವನ್ನು ವಾಯದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್ ಅಧಿಕಾರಿಗಳು ರದ್ದುಗೊಳಿಸಿದ್ದರು.