×
Ad

ಯುದ್ಧದ ಕಾರಣ ಆಹಾರದ ದರ ದಾಖಲೆ ಮಟ್ಟಕ್ಕೆ ಏರಿಕೆ: ವಿಶ್ವಸಂಸ್ಥೆ

Update: 2022-04-09 00:32 IST

ಪ್ಯಾರಿಸ್, ಎ.8: ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಆಹಾರ ಪದಾರ್ಥಗಳ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಶುಕ್ರವಾರ ಹೇಳಿದೆ. ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿರುವುದು, ಆ ಬಳಿಕ ರಶ್ಯದ ಮೇಲೆ ವಿಧಿಸಿರುವ ಅಂತರಾಷ್ಟ್ರೀಯ ನಿರ್ಬಂಧವು ಆಹಾರ ವಸ್ತುಗಳ ಆಮದು-ರಫ್ತು ಪ್ರಕ್ರಿಯೆಗೆ ಅಡ್ಡಿಯಾಗಿದ್ದು ವಿಶ್ವದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಲ್ಲಿ ಹಸಿವಿನ ಸಮಸ್ಯೆ ಉಲ್ಬಣಿಸಲು ಕಾರಣವಾಗಬಹುದು ಎಂದು ಸಂಸ್ಥೆ ಹೇಳಿದೆ. ವಿಶ್ವದಲ್ಲಿ ಅತ್ಯಧಿಕ ಗೋಧಿ, ಖಾದ್ಯ ತೈಲ ಮತ್ತು ಜೋಳ ಬೆಳೆಯುವ ದೇಶಗಳಾದ ರಶ್ಯ ಮತ್ತು ಉಕ್ರೇನ್ನಲ್ಲಿನ ಕೃಷಿ ಚಟವಟಿಕೆಗೆ ಯುದ್ಧ ಮತ್ತು ನಿರ್ಬಂಧ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಜಾಗತಿಕವಾಗಿ ರಫ್ತಾಗುವ ಆಹಾರ ವಸ್ತುಗಳಲ್ಲಿ ಬೃಹತ್ ಪ್ರಮಾಣದ ಆಹಾರ ಪದಾರ್ಥ ವಿಶ್ವದ ಬ್ರೆಡ್ಬಾಸ್ಕೆಟ್ ಎಂದು ಕರೆಸಿಕೊಳ್ಳುವ ಈ 2 ದೇಶಗಳಿಂದ ಪೂರೈಕೆಯಾಗುತ್ತಿದೆ. ಈಗ ಈ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ವಿಶ್ವದಲ್ಲಿ ರಫ್ತಾಗುವ ಗೋಧಿಯಲ್ಲಿ 30% ಮತ್ತು ಮೆಕ್ಕೆಜೋಳದಲ್ಲಿ 20% ರಶ್ಯ ಮತ್ತು ಉಕ್ರೇನ್ನಿಂದ ಪೂರೈಕೆಯಾಗುತ್ತಿತ್ತು. ಫೆಬ್ರವರಿ 24ರ ಬಳಿಕ ಈ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಆದ್ದರಿಂದ ಮಾರ್ಚ್ನಲ್ಲಿ ಆಹಾರ ವಸ್ತುಗಳ ದರದಲ್ಲಿ 12.6% ಹೆಚ್ಚಳವಾಗಿ ದಾಖಲೆ ಮಟ್ಟಕ್ಕೇರಿದೆ. ಧಾನ್ಯ, ಮಾಂಸ, ಖಾದ್ಯ ತೈಲ, ಸಕ್ಕರೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ದರವೂ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News