×
Ad

ವೇದಿಕೆಯಲ್ಲಿ ಹಲ್ಲೆ ; ವಿಲ್ ಸ್ಮಿತ್‍ಗೆ 10 ವರ್ಷ ಆಸ್ಕರ್ ಸಮಾರಂಭಕ್ಕೆ ನಿಷೇಧ

Update: 2022-04-09 07:51 IST
ವಿಲ್ ಸ್ಮಿತ್‍

ಲಾಸ್ ಎಂಜಲೀಸ್ : ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಗೆ ಧಾವಿಸಿ ಹಾಸ್ಯನಟ ಕ್ರಿಸ್ ರಾಕ್ ಅವರ ಮೇಲೆ ಹಲ್ಲೆ ನಡೆಸಿದ ಎರಡು ವಾರಗಳ ಬಳಿಕ ಹಾಲಿವುಡ್ ನಟ ವಿಲ್ ಸ್ಮಿತ್‍ಗೆ 10 ವರ್ಷ ಆಸ್ಕರ್‌ ಗೆ ಹಾಜರಾಗದಂತೆ ನಿಷೇಧ ಹೇರಲಾಗಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಯೋಜಿಸುವ ಯಾವುದೇ ಇತರ ಸಮಾರಂಭಗಳಲ್ಲಿ ಕೂಡಾ ಮುಂದಿನ ಹತ್ತು ವರ್ಷ ಸ್ಮಿತ್ ಭಾಗವಹಿಸುವಂತಿಲ್ಲ.‌

ಆದರೆ "ಕಿಂಗ್ ರಿಚರ್ಡ್" ಚಿತ್ರದ ಅದ್ಭುತ ನಟನೆಗಾಗಿ ಕಳೆದ ತಿಂಗಳು ಸ್ಮಿತ್ ಗೆದ್ದಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ವಾಪಾಸು ಪಡೆದಿಲ್ಲ ಅಥವಾ ಭವಿಷ್ಯದಲ್ಲಿ ಆಸ್ಕರ್ ನಾಮನಿರ್ದೇಶಕ್ಕೆ ನಿಷೇಧ ಹೇರುವ ಬಗ್ಗೆ ಅಕಾಡೆಮಿಯ ಮುಖ್ಯಸ್ಥರು ನೀಡಿದ ಪತ್ರದಲ್ಲಿ ಯಾವುದೇ ಉಲ್ಲೇಖ ಇಲ್ಲ.

"2022ರ ಎಪ್ರಿಲ್ 8ರಿಂದ ಅನ್ವಯವಾಗುವಂತೆ 10 ವರ್ಷಗಳ ಅವಧಿಗೆ ಸ್ಮಿತ್ ಅವರು ಅಕಾಡೆಮಿಯ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ. ನೇರವಾಗಿ ಮಾತ್ರವಲ್ಲದೇ ವರ್ಚುವಲ್ ಸಮಾರಂಭಗಳಲ್ಲಿ ಕೂಡಾ ಭಾಗವಹಿಸುವಂತಿಲ್ಲ. ಇದು ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ಸೀಮಿತವಾಗಿರುವುದಿಲ್ಲ" ಎಂದು ಅಧ್ಯಕ್ಷ ಡೇವಿಡ್ ರುಬಿನ್ ಮತ್ತು ಸಿಇಒ ಡ್ವಾನ್ ಹಡ್ಸನ್ ಸ್ಪಷ್ಟಪಡಿಸಿದ್ದಾರೆ.

ಅಕಾಡೆಮಿ ಗವರ್ನರ್ ಗಳು ಶುಕ್ರವಾರ ಸಭೆ ಸೇರಿ ಸ್ಮಿತ್ ವಿರುದ್ಧ ಕ್ರಮದ ಬಗ್ಗೆ ಚರ್ಚಿಸಿದರು. ಅತ್ಯುತ್ತಮ ನಟನ ಭವಿಷ್ಯದ ಬಗ್ಗೆ ನಿರ್ಣಯ ನೀಡಲು ಮಂಡಳಿಯ ಸದಸ್ಯರಾದ ಸ್ಟೀವನ್ ಸ್ಪಿಲ್‍ಬರ್ಗ್ ಮತ್ತು ವೂಪಿ ಗೋಲ್ಡ್ ಬರ್ಗ್ ಅವರನ್ನು ಆಹ್ವಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News