"ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಗೈಯುವ" ಹೇಳಿಕೆ: ಬಜರಂಗ್‌ ಮುನಿಯ ಬಂಧನಕ್ಕೆ ಟ್ವಿಟ್ಟರಿಗರ ಆಗ್ರಹ

Update: 2022-04-09 13:53 GMT
Photo: Twitter (Screen Shot)

ಲಕ್ನೋ: ಉತ್ತರ ಪ್ರದೇಶದ ಸಿತಾಪುರ್‌ ಜಿಲ್ಲೆಯ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಬಲಾತ್ಕಾರ ಮಾಡುವುದಾಗಿ ಬೆದರಿಸಿದ ಹಿಂದುತ್ವ ನಾಯಕ ಮಹಂತ್‌ ಬಜರಂಗ್‌ ಮುನಿಯನ್ನು ಬಂಧಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹ ಕೇಳಿ ಬಂದಿದೆ.

'#ArrestBajrangMuni' ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವಾರು ಬಳಕೆದಾರರು ಮುನಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

 ಮುನಿಯ ಹೇಳಿಕೆ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕೆಂಡಾಮಂಡಲವಾಗಿದ್ದು, ಬಲವಾದ ವಿರೋಧವನ್ನು ಆಯೋಗ ವ್ಯಕ್ತಪಡಿಸಿದೆ ಹಾಗೂ ಆತನನ್ನು ಬಂಧಿಸುವಂತೆ ಆಗ್ರಹಿಸಿದೆ.

ಈ ನಡುವೆ, ಪೊಲೀಸರು ಘಟನೆಯ ಬಗ್ಗೆ ಎಫ್‌ಐಆರ್‌ ದಾಖಲಿಸಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

ಎಪ್ರಿಲ್‌ 2 ರಂದು ಈ ವಿವಾದಿತ ವಿಡಿಯೋ ಚಿತ್ರೀಕರಿಸಲಾಗಿದ್ದು, ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ತನ್ನ ವಾಹನದ ಒಳಗಿನಿಂದಲೇ ಮುಸ್ಲಿಮ್‌ ಮಹಿಳೆಯರನ್ನು ಬಲತ್ಕಾರ ಮಾಡುವುದಾಗಿ ಬೆದರಿಸಿದ್ದಾರೆ. ಮೈಕ್‌ ನಲ್ಲಿ ಮಾತನಾಡಿದ ಮುನಿ, ನಿಮ್ಮ ಪುರುಷರು ಯಾರಾದರೂ ಈ ಪ್ರದೇಶದ ಹುಡುಗಿಯರನ್ನು ಚುಡಾಯಿಸಿದರೆ, ನಿಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಮಾಡುತ್ತೇವೆ ಎಂದು ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ. ಈ ವೇಳೆ ನೆರೆದಿದ್ದವರು, ʼಜೈ ಶ್ರೀ ರಾಂʼ ಎಂದು ಘೋಷಣೆ ಕೂಗುತ್ತಾರೆ.

ಮುನಿ ಕುಳಿತುಕೊಂಡಿದ್ದ ವಾಹನದಲ್ಲಿ ಪೊಲೀಸರು ನಿಂತಿರುವ ವಿಡಿಯೋಗಳು ಕೂಡಾ ಇದೀಗ ಬಹಿರಂಗಗೊಂಡಿದ್ದು, ಮಹಿಳೆಯರ ಮೇಲೆ ಬಲಾತ್ಕಾರದ ಬೆದರಿಕೆ ಹಾಕುವಾಗ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳೆದ್ದಿವೆ.

ಈ ವಿಡಿಯೋಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು,  “(ಇದನ್ನು ನೋಡಿ) ನಾನು ಆಘಾತಕ್ಕೊಳಗಾಗಿದ್ದೇನೆ, ಮತ್ತು ಗಾಬರಿಯಾಗಿದ್ದೇನೆ, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರದ ಬೆದರಿಕೆಗಳ ಬಳಿಕ ಜೈ ಶ್ರೀರಾಂ ಘೋಷಣೆ ಕೂಗಲಾಗುತ್ತಿದೆ. ಇದನ್ನು ಯಾವ ದೇವರು ಕ್ಷಮಿಸುತ್ತಾನೆ?” ಎಂದು ಪತ್ರಕರ್ತೆ ಶ್ವೇತಾ ಕೊಟ್ಟಾರಿ ಟ್ವೀಟ್‌ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News