ಐಪಿಎಲ್: ಹೈದರಾಬಾದ್‌ಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್
ನವಿ ಮುಂಬೈ, ಎ.9: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸಿಡಿಸಿದ ಆಕರ್ಷಕ ಅರ್ಧಶತಕ(75 ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ರಾಹುಲ್ ತ್ರಿಪಾಠಿ(ಅಜೇಯ 39, 15 ಎಸೆತ, 5 ಬೌಂ.,2 ಸಿ.)ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ನ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು.
ಡಾ.ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 155 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 17.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆರಂಭಿಕ ಬ್ಯಾಟರ್‌ಗಳಾದ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟಿಗೆ 89 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ವಿಲಿಯಮ್ಸನ್(32 ರನ್, 40 ಎಸೆತ)ವಿಕೆಟನ್ನು ಕಬಳಿಸಿದ ಮುಕೇಶ್ ಚೌಧರಿ ಈ ಜೋಡಿಯನ್ನು ಬೇರ್ಪಡಿಸಿದರು.
ಆದಾಗ್ಯೂ ತ್ರಿಪಾಠಿ ಹಾಗೂ ಅಭಿಷೇಕ್ ಎರಡನೇ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಚೆನ್ನೈ ಟೂರ್ನಿಯಲ್ಲಿ ಈತನಕ ಆಡಿರುವ ನಾಲ್ಕೂ ಪಂದ್ಯಗಳನ್ನು ಕಳೆದುಕೊಂಡಿದೆ. ಹೈದರಾಬಾದ್ ತಾನಾಡಿದ 3ನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 15 ಎಸೆತಗಳಲ್ಲಿ 23 ರನ್ ಗಳಿಸಿದ ರವೀಂದ್ರ ಜಡೇಜ ತಂಡದ ಸ್ಕೋರನ್ನು 150ರ ಗಡಿ ತಲುಪಿದರು. ಆಲ್‌ರೌಂಡರ್ ಮೊಯಿನ್ ಅಲಿ ಚೆನ್ನೈ ಪರ ಸರ್ವಾಧಿಕ ಸ್ಕೋರ್(48 ರನ್,35 ಎಸೆತ, 3 ಬೌಂಡರಿ, 2 ಸಿ.)ಸ್ಕೋರ್ ಗಳಿಸಿದರು.
ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ(15) ಹಾಗೂ ಋತುರಾಜ್ ಗಾಯಕ್ವಾಡ್(16) ಉತ್ತಮ ಆರಂಭ ಒದಗಿಸಲು ವಿಫಲರಾದರು. ಅಂಬಟಿ ರಾಯುಡು 27 ಹಾಗೂ ಎಂಎಸ್ ಧೋನಿ 3 ರನ್ ಗಳಿಸಿದರು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ಚೆನ್ನೈ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೈದರಾಬಾದ್ ಪರ ಟಿ.ನಟರಾಜನ್(2-30) ಹಾಗೂ ವಾಷಿಂಗ್ಟನ್ ಸುಂದರ್(2-21)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಭರ್ಜರಿ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.