×
Ad

ಮಾಯಾವತಿ ಅವರನ್ನು ಸಿಎಂ ಅಭ್ಯರ್ಥಿಯಾಗಿಸಲು ಮುಂದಾಗಿದ್ದೆವು, ಆದರೆ ಆಕೆ ನಮ್ಮ ಜತೆ ಮಾತನಾಡಲೇ ಇಲ್ಲ: ರಾಹುಲ್ ಗಾಂಧಿ

Update: 2022-04-09 20:09 IST
PHOTO: TWITTER

 ಹೊಸದಿಲ್ಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಹುಜನ್ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಲು ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಆಫರ್ ಅನ್ನು ಕಾಂಗ್ರೆಸ್ ಮಾಡಿತ್ತು ಆದರೆ ಮಾಯಾವತಿ ನಮ್ಮ ಜತೆ ಮಾತನಾಡಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"ನಾವು ಮೈತ್ರಿ ಸಾಧಿಸಲು ಮಾಯಾವತಿ ಅವರಿಗೆ ಸಂದೇಶ ನೀಡಿದೆವು ಹಾಗೂ ಆಕೆ ಮುಖ್ಯಮಂತ್ರಿಯಾಗಬಹುದೆಂದು ಹೇಳಿದೆವು. ಆಕೆ ನಮ್ಮ ಜತೆ ಮಾತನಾಡಲಿಲ್ಲ. ಆದರೆ ನನಗೆ ಬಿಎಸ್‍ಪಿ ಸ್ಥಾಪಕ ಕಾನ್ಶೀರಾಮ್ ಬಗ್ಗೆ ಗೌರವವಿದೆ, ಅವರು ದಲಿತರಿಗಾಗಿ ಹೋರಾಡಿದ್ದರು" ಎಂದು ರಾಹುಲ್ ಹೇಳಿದರು.

"ಸಿಬಿಐ, ಇಡಿ ಮತ್ತು ಪೆಗಾಸಸ್'ನಿಂದಾಗಿ ಮಾಯಾವತಿ ಅವರು ಆಡಳಿತ ಬಿಜೆಪಿಯ ಕೆಲಸವನ್ನು ಉತ್ತರ ಪ್ರದೇಶದಲ್ಲಿ ಸುಲಭವಾಗಿಸಿದರು" ಎಂದು ಹೇಳಿ ಮಾಯಾವತಿ ವಿರುದ್ಧ ರಾಹುಲ್ ಕಿಡಿಕಾರಿದ್ದಾರೆ.

ʼದಿ ದಲಿತ್ ಟ್ರುತ್' ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ರಾಹುಲ್,  ಸಂವಿಧಾನ ಒಂದು ಅಸ್ತ್ರವಾಗಿದ್ದರೂ, ಸಂವಿಧಾನಿಕ ಸಂಸ್ಥೆಗಳಿಲ್ಲದೆ ಅದು  ಅರ್ಥಹೀನವಾಗಿದೆ ಹಾಗೂ ಈ ಸಂಸ್ಥೆಗಳನ್ನು "ಆರೆಸ್ಸೆಸ್ ತನ್ನ ಕೈವಶ" ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.

"ಇದೇನು ಹೊಸ ದಾಳಿಯಲ್ಲ. ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದ ದಿನದಿಂದ ಇದು ಆರಂಭವಾಗಿದೆ" ಎಂದು ರಾಹುಲ್ ಹೇಳಿದರು.

"ಜನರು ದನಿಯೆತ್ತಬೇಕು, ಇಲ್ಲದೇ ಇದ್ದರೆ ಸಾಂವಿಧಾನಿಕ ಮೌಲ್ಯಗಳನ್ನು ಅನುಸರಿಸಲಾಗುವುದಿಲ್ಲ. ಇದು ಭಾರತದ ವಾಸ್ತವ. ಸಂವಿಧಾನಿಕ ಮೌಲ್ಯಗಳಿಗೆ ಬೆಲೆ ಇಲ್ಲದೇ ಇದ್ದರೆ, ದಲಿತರು, ಅಲ್ಪಸಂಖ್ಯಾತರು, ನಿರುದ್ಯೋಗಿಗಳು, ಸಣ್ಣ ರೈತರು ಮತ್ತು ಬಡವರು ಬಹಳ ಬಾಧಿತರಾಗುತ್ತಾರೆ" ಎಂದು ರಾಹುಲ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News