ವಿಶ್ವ ಡಬಲ್ಸ್ ಸ್ಕ್ವಾಷ್: ಭಾರತಕ್ಕೆ ಎರಡು ಚಿನ್ನ
ಹೊಸದಿಲ್ಲಿ: ಗಾಸ್ಗೊದ ಸ್ಕ್ವಾಟರ್ನ್ ಲೀಶರ್ ಸೆಂಟರ್ ನಲ್ಲಿ ಶನಿವಾರ ನಡೆದ ಪಿಎಸ್‍ಎ ವಿಶ್ವ ಡಬಲ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತ ಎರಡು ಚಿನ್ನದ ಪದಕ ಗೆದ್ದಿದೆ. ವಿಶ್ವಮಟ್ಟದಲ್ಲಿ ಸ್ಕ್ವಾಷ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಗುತ್ತಿರುವುದು ಇದೇ ಮೊದಲು.
ಮೂರು ವರ್ಷಗಳಿಂದ ಕ್ರೀಡೆಯಿಂದ ಹೊರಗುಳಿದಿದ್ದ 30 ವರ್ಷದ ದೀಪಿಕಾ ಪಲ್ಲಿಕಲ್ ಎರಡು ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೀಪಿಕಾ, ಸೌರವ್ ಘೋಷಲ್ ಜತೆ ಮಿಕ್ಸ್ಡ್ ಡಬಲ್ಸ್ ನಲ್ಲಿ ಇಂಗ್ಲೆಂಡಿನ ಅಡ್ರಿಯನ್ ವಾಲರ್ ಮತ್ತು ಅಲಿಸನ್ ವಾಟರ್ಸ್ ಜೋಡಿಯನ್ನು 11-6, 11-8ರಲ್ಲಿ ಪರಾಭವಗೊಳಿಸಿದರೆ, ಮಹಿಳಾ ಡಬಲ್ಸ್ ನಲ್ಲಿ ದೀಪಿಕಾ- ಜ್ಯೋತ್ಸ್ನಾ ಚನ್ನಪ್ಪ ಜೋಡಿ ಮತ್ತೊಂದು ಇಂಗ್ಲಿಷ್ ಜೋಡಿ ಸರಹ್ ಜಾನ್ ಪೆರ್ರಿ- ಅಲಿಸನ್ ವಾಟರ್ಸ್ ರನ್ನು 11-9, 4-11, 11-8ರಲ್ಲಿ ಕೆಡವಿತು.
ಗುಂಪು ಹಂತದ ಸ್ಪರ್ಧೆಯಲ್ಲಿ ಸರಹ್-ಅಲಿಸನ್ ಜೋಡಿ ವಿರುದ್ಧದ ಸೋಲಿಗೆ ಜೋತ್ಸ್ನಾ ದೀಪಿಕಾ ಜೋಡಿ ಸೇಡು ತೀರಿಸಿಕೊಂಡಿತು. "ಕೆಲ ದಿನಗಳ ಹಿಂದೆ ನಮ್ಮನ್ನು ಆ ಜೋಡಿ ಸೋಲಿಸಿದ್ದರಿಂದ ಫೈನಲ್‍ನಲ್ಲಿ ಒಳ್ಳೆಯ ಯೋಜನೆ ರೂಪಿಸಿದ್ದೆವು. ಗೆಲುವಿನಿಂದ ಸಂತಸವಾಗಿದೆ" ಎಂದು ಜೋತ್ಸ್ನಾ ಹೇಳಿದರು.