ಮಣಿಪಾಲದಲ್ಲಿ ಸರಣಿ ಅಪಘಾತ: ಮೂರು ಕಾರು, ಒಂದು ಬೈಕ್ ಜಖಂ

Update: 2022-04-10 07:01 GMT

ಮಣಿಪಾಲ, ಎ.9: ಉಡುಪಿ ಜಿಲ್ಲಾಧಿಕಾರಿ ರಸ್ತೆಯಲ್ಲಿ ರವಿವಾರ ನಸುಕಿನ ವೇಳೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರು ಹಾಗೂ ಒಂದು ಬೈಕ್ ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.

ಇನ್ನೋವಾ ಕಾರೊಂದು ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುತ್ತಿದ್ದು, ಈ ಮಧ್ಯೆ ಯೂಟರ್ನ್‌ನಲ್ಲಿ ಬೈಕೊಂದು ಏಕಾಏಕಿ ಅಡ್ಡ ಬಂತೆನ್ನಲಾಗಿದೆ. ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಇನ್ನೋವಾ ಕಾರು, ಅಲ್ಲೆ ರಸ್ತೆ ಬದಿ ನಿಲ್ಲಿಸಿದ್ದ ಎಕ್ಸ್‌ಯುವಿ ಕಾರು ಹಾಗೂ ಇನ್ನೊಂದು ಬೈಕಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದೇ ವೇಳೆ ಆ ರಸ್ತೆಯಲ್ಲಿ ಅತೀ ವೇಗದಲ್ಲಿ ಸಾಗುತ್ತಿದ್ದ ಹುಂಡೈ ವರ್ನ ಕಾರು, ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮನೆಯ ಕಂಪೌಂಡ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾರು ಕೂಡ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News