×
Ad

ಚೌಕಿದಾರ್ ಚೋರ್ ಹೈ: ಪಾಕಿಸ್ತಾನ ಸೇನೆ ವಿರುದ್ಧ ಘೋಷಣೆ

Update: 2022-04-11 07:24 IST

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪದಚ್ಯುತಿಯನ್ನು ವಿರೋಧಿಸಿ ದೇಶಾದ್ಯಂತ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಕಾರ್ಯಕರ್ತರು ನಡೆಸುತ್ತಿರುವ ರ‍್ಯಾಲಿಯ ವೇಳೆ ಪಾಕಿಸ್ತಾನದ ಸೇನೆ ವಿರುದ್ಧ "ಚೌಕಿದಾರ್ ಚೋರ್ ಹೈ" ಘೋಷಣೆ ಕೂಗಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೊಟ್ಟ ಮೊದಲು ರಾಹುಲ್‍ ಗಾಂಧಿ ಈ ಘೋಷಣೆ ಕೂಗಿದ್ದರು. ಇದೀಗ ಇಮ್ರಾನ್‍ ಖಾನ್ ಅವರ ಜನಾದೇಶವನ್ನು ಸೇನೆ ಕದ್ದಿದೆ ಎಂದು ಆಪಾದಿಸಿದ ಕಾರ್ಯಕರ್ತರು ಈ ಘೋಷಣೆ ಕೂಗಿದರು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಲ್ ಹವೇಲಿಯಲ್ಲಿ ಜಮಾಯಿಸಿದ ಕಾರ್ಯಕರ್ತರು ಇಮ್ರಾನ್ ಪದಚ್ಯುತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಾಕಿಸ್ತಾನ ಸೇನೆಯನ್ನು ಕಳ್ಳರು ಎಂಬ ಅರ್ಥದ ಘೋಷಣೆ ಕೂಗಿದರು. ಈ ಹಂತದಲ್ಲಿ ಮಾಜಿ ಆಂತರಿಕ ವ್ಯವಹಾರಗಳ ಖಾತೆ ಸಚಿವ ಶೇಖ್ ರಶೀದ್ ಇಂಥ ಘೋಷಣೆ ಕೂಗದಂತೆ ಮನವಿ ಮಾಡಿದರು. "ಇಂಥ ಘೋಷಣೆ ಕೂಗಬೇಡಿ.. ನಾವು ಶಾಂತಿಯಿಂದ ಹೋರಾಡೋಣ" ಎಂದು ಅವರು ಸಲಹೆ ಮಾಡಿದರು.‌

ಶನಿವಾರ ಮಧ್ಯರಾತ್ರಿ ಬಳಿಕ ನಡೆದ ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲಾಗಿತ್ತು. 342 ಸದಸ್ಯಬಲದ ಸದನದಲ್ಲಿ 174 ಮಂದಿ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರು.

ಅವಿಶ್ವಾಸ ನಿರ್ಣಯ ಬಗ್ಗೆ ಪ್ರತಿಕ್ರಿಯಿಸಿದ ಶೇಖ್ ರಶೀದ್, "ನೀವು ನಿಮ್ಮ ದೇಶವನ್ನು ರಕ್ಷಿಸಲು ಬಯಸುವುದಾದರೆ, ರಾತ್ರಿಯ ಕತ್ತಲಲ್ಲಿ ಈ ನಿರ್ಧಾರ ಕೈಗೊಳ್ಳಬೇಡಿ. ಹಗಲಿನ ಬೆಳಕಿನಲ್ಲಿ ಇಂಥ ನಿರ್ಧಾರ ಕೈಗೊಳ್ಳಿ" ಎಂದು ಮಾರ್ಮಿಕವಾಗಿ ನುಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News