ಕಾನೂನು ಕೈಗೆತ್ತಿಕೊಂಡರೆ, ಹಿಂಸೆಗೆ ಇಳಿದರೆ ಸರಕಾರ ಸಹಿಸುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ : ನಮ್ಮದು ಸಂವಿಧಾನ ಬದ್ಧವಾಗಿ ರಚಿಸಿರುವ ಸರಕಾರ. ಕಾನೂನು ಸುವ್ಯವಸ್ಥೆ ಹಾಗೂ ಎಲ್ಲರನ್ನು ಸಮಾನ ದೃಷ್ಠಿಕೋನ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಮತ್ತು ಹಿಂಸೆಗೆ ಇಳಿದರೆ ನಮ್ಮ ಸರಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ನಗರ ಆದಿಉಡುಪಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಶಾಂತಿಯುತ ಹಾಗೂ ಪ್ರಗತಿಪರ ರಾಜ್ಯ. ಅದನ್ನು ಯಾವ ರೀತಿ ಕಾಪಾಡಬೇಕು ಎಂಬುದು ನಮಗೆ ಗೊತ್ತಿದೆ. ನಾವು ಮಾಡುತ್ತಿದ್ದೇವೆ ಮತ್ತು ಮಾಡಿ ತೋರಿ ಸುತ್ತೇವೆ ಎಂದರು.
ರಾಜ್ಯದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಮೌನವಾಗಿರುವುದಾಗಿ ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮ ಆ್ಯಕ್ಷನ್‌ಗಳೇ ಮಾತನಾಡುತ್ತದೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳೇ ಮಾತನಾಡುತ್ತವೆ. ಯಾವ ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಾವು ಮಾಡುತ್ತೇವೆ. ಇವರಿಂದ ನಾವು ಏನು ಕಲಿಯಬೇಕಾಗಿಲ್ಲ ಎಂದು ತಿಳಿಸಿದರು.
ಇವರು ಹಲವು ಹಿಂದೂ ಯುವಕರ ಕೊಲೆ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿರುವ ಸಂಸ್ಥೆಗಳ ಹಲವರ ಮೇಲಿನ ಕೇಸ್‌ಗಳನ್ನು ಸರಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟಿದ್ದಾರೆ. ಆಗ ಎಲ್ಲಿ ಇತ್ತು ಇವರ ಕರ್ತವ್ಯ ಪ್ರಜ್ಞೆ? ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು. ಆ ಸಂಸ್ಥೆಗಳನ್ನು ನಿಷೇಧಿಸುತ್ತೀರಾ ಎಂಬ ಪ್ರಶ್ನೆಗೆ, ಅದೆಲ್ಲ ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗುತ್ತದೆ ಎಂದರು.
ಲವ್ ಜಿಹಾದ್ ಕುರಿತು ಹಿಂದೂ ಕಾರ್ಯಪಡೆ ಮಾಡಲು ಹೊರಟಿದ್ದಾರೆ, ಯಾಕೆ ಸರಕಾರಕ್ಕೆ ಆಗುತ್ತಿಲ್ಲ ಎಂದು ಅವರು ಮಾಡುತ್ತಿದ್ದಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ರೀತಿ ತಪ್ಪು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಯಾರು ಬೇಕಾದರು ಅವರವರು ರಕ್ಷಣೆ ಮಾಡುತ್ತಾರೆ. ಆದರೆ ಎಲ್ಲದಕ್ಕೂ ಕಾನೂನು ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳಿಗೂ ಕಾನೂನು ಇದೆ. ಕೆಲವು ಕಾನೂನುಗಳನ್ನು ಹಿಂದಿನ ಸರಕಾರಗಳೇ ಮಾಡಿರುವುದು. ನಾವು ಹೊಸ ಕಾನೂನು ಮಾಡುತ್ತಿಲ್ಲ. ಆ ಕಾನೂನು ಪ್ರಕಾರವೇ ಎಲ್ಲವೂ ನಡೆಯುತ್ತದೆ. ಅದನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.