"ನಿಮಗೆ 24 ಗಂಟೆ ಕಾಲಾವಕಾಶ ನೀಡುತ್ತೇನೆ": ಪ್ರಧಾನಿ ಮೋದಿಗೆ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಸವಾಲು

Update: 2022-04-11 09:35 GMT

ಹೊಸದಿಲ್ಲಿ: ಕೇಂದ್ರ ಸರಕಾರ ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಿದ  ಕೆಲವೇ ತಿಂಗಳ ನಂತರ ತನ್ನ ರಾಜ್ಯದ ರೈತರಿಂದ ಅಕ್ಕಿ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ದಿಲ್ಲಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೊಸ ರೈತ ಸಂಘರ್ಷವನ್ನು ಆರಂಭಿಸಿದ್ದಾರೆ.

"ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ... ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀದಿಸಿ  ಎಂದು ಕೈಮುಗಿದು ಪ್ರಧಾನಿ ಹಾಗೂ  ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ನಾನು ಹೇಳುತ್ತೇನೆ. ನಾನು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತೇನೆ. ಆ ನಂತರ ನಾವು ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಕೆಸಿಆರ್ ಹೇಳಿದರು.

"ತೆಲಂಗಾಣವು ತಮ್ಮ ಹಕ್ಕನ್ನು ಕೇಳುತ್ತದೆ. ಹೊಸ ಕೃಷಿ ನೀತಿಯನ್ನು ರೂಪಿಸಿ ಎಂದು  ನಾನು ಪ್ರಧಾನಿಯವರಿಗೆ ಹೇಳಲು ಬಯಸುತ್ತೇನೆ. ಸರಕಾರವನ್ನು ಉರುಳಿಸುವ ಶಕ್ತಿ ಇರುವ ರೈತರ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ, ರೈತರು ಭಿಕ್ಷುಕರಲ್ಲ ‘’ಎಂದು ಕೆಸಿಆರ್  ಹೇಳಿದರು.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕರು ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸಿದ್ದು, ರಾಜ್ಯದಿಂದ 15 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಖರೀದಿಸಲು ಒತ್ತಾಯಿಸಿದರು.

ಪಕ್ಷದ ಸಂಸದರು, ಶಾಸಕರು, ಎಲ್ಲಾ ಕ್ಯಾಬಿನೆಟ್ ಸಚಿವರು,  ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ದಿಲ್ಲಿಯ ತೆಲಂಗಾಣ ಭವನದಲ್ಲಿ ಧರಣಿ ಕುಳಿತರು.

ಪ್ರಸಕ್ತ ಬೆಳೆ ಹಂಗಾಮಿನಲ್ಲಿ ಬೇಯಿಸಿದ ಅಕ್ಕಿಯನ್ನು ಖರೀದಿಸಬೇಕೆಂಬ ತೆಲಂಗಾಣದ ಮನವಿಯನ್ನು ಕೇಂದ್ರ ಸರಕಾರ ನಿರಾಕರಿಸಿದ ನಂತರ ಟಿಆರ್‌ಎಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿತು ಹಾಗೂ ದಿಲ್ಲಿ ಪ್ರತಿಭಟನೆಗೆ ಕರೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News