ನೇಕಾರ, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಣೆ: ಸಿಎಂ ಬೊಮ್ಮಾಯಿ

Update: 2022-04-11 15:09 GMT

ಉಚ್ಚಿಲ : ಈಗ ರಾಜ್ಯದ ರೈತ ಮಕ್ಕಳಿಗೆ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆಯನ್ನು ಈ ವರ್ಷದಿಂದ ನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಂಪೂರ್ಣ ಜೀರ್ಣೋದ್ಧಾರದ ಬಳಿಕ ನಡೆದ ದೇವಿಯ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಈ ಯೋಜನೆಯಡಿ ಎಂಟರಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾಭ್ಯಾಸ ಕ್ಕಾಗಿ ಹೆಣ್ಣು ಮಕ್ಕಳಿಗೆ ಅಗತ್ಯ ಸ್ಕಾಲರ್‌ಶಿಪ್‌ನ್ನು ನೀಡಲಾಗುತ್ತದೆ. ಈ ಮೂಲಕ ಆಯಾ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಲಾಗುತ್ತದೆ ಎಂದರು.

ಮೀನುಗಾರರ ಬದುಕನ್ನು ಹಸನುಗೊಳಿಸಲು, ಹೊಸ ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡಲು ಪ್ರಾಯೋಗಿಕವಾಗಿ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರಿಗೆ ಆಳಸಮುದ್ರ ಮೀನುಗಾರಿಕೆಗಾಗಿ ೧೦೦ ಹೈಸ್ಪೀಡ್ ಬೋಟ್ ಗಳನ್ನು ಖರೀದಿಸಲು ಸಬ್ಸಿಡಿ ಮೂಲಕ ಪ್ರೋತ್ಸಾಹಿಸಲಾಗುವುದು ಎಂದರು.

ತಲಾ ೧.೫ ಕೋಟಿ ರೂ ಮೊತ್ತದ ಈ ಬೋಟ್‌ಗಳಿಗೆ ಕೇಂದ್ರದಿಂದ ಶೇ.೪೦, ರಾಜ್ಯದ ಶೇ.೫೦ ಸಬ್ಸಿಡಿ ನೀಡಲಾಗುತ್ತದೆ. ಉಳಿದ ಶೇ.೧೦ನ್ನು ಫಲಾನುಭವಿ ನೀಡಬೇಕಾಗುತ್ತದೆ. ಇದಕ್ಕಾಗಿ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರ ಕನ್ನಡದ ಮೀನುಗಾರರಿಂದ ಮುಂದಿನ ತಿಂಗಳು ಅರ್ಜಿ ಆಹ್ವಾನಿಸಲಾಗುವುದು. ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ೫೦೦೦ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದೂ ಬೊಮ್ಮಾಯಿ ತಿಳಿಸಿದರು.

ಮೀನುಗಾರರ ಬಹುದೊಡ್ಡ ಬೇಡಿಕೆಯಾದ ಎಂಟು ಬಂದರುಗಳ ಹೂಳೆತ್ತಲು ಈ ಬಾರಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು. ಬಯಲು ಸೀಮೆಯಲ್ಲಿ ಪ್ರತಿ ಗ್ರಾಪಂಗೊಂದು ಕೆರೆಯನ್ನು ಮೀನುಗಾರರಿಗೆಂದು ಕಾದಿಟ್ಟು ಅಲ್ಲಿ ಮೀನು ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ೧೦೦೦ ಮಕ್ಕಳಿಗೆ ಅವಕಾಶವಿರುವ ಹಾಸ್ಟೆಲ್ ಕ್ಲಸ್ಟರ್‌ಗಳನ್ನು ನಿರ್ಮಾಣ ಮಾಡಲಾಗುವುದು. ಹಾಸ್ಟೆಲ್‌ಗಳ ಬೇಡಿಕೆಗಳನ್ನು ಗಮನಿಸಿ ೧೦೦ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು. ಇವುಗಳಲ್ಲಿ ಮೊಗವೀರ ಸಮುದಾಯದ ಮಕ್ಕಳಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ಮೀನುಗಾರರ ಪರವಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಹಾಗೂ ಮೊಗವೀರ ಸಮುದಾಯ ನೀಡಿದ ವಿವಿಧ ಬೇಡಿಕೆಗಳ ಮನವಿ ಕುರಿತು ಮಾತನಾಡಿದ ಅವರು ಮಹಾಲಕ್ಷ್ಮೀ ದೇವಸ್ಥಾನದ ಇನ್ನುಳಿದ ಕಾಮಗಾರಿಗೆ ಅಗತ್ಯವಿರುವ ಐದು ಕೋಟಿ ರೂ.ಗಳನ್ನು ಮುಜರಾಯಿ ಇಲಾಖೆ ಮೂಲಕ ನೀಡಲು ಸರಕಾರ ಸಿದ್ಧವಿದೆ ಎಂದರು.

ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಕುರಿತು ಪರಿಶೀಲಿಸಲಾಗುವುದು, ಸ್ತ್ರೀಶಕ್ತಿ ಸಂಘಗಳಿಗೆ ೧.೫ ಲಕ್ಷರೂ.ಗಳಷ್ಟು ಸಾಲ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ವಸ್ತುಸಂಗ್ರಹಾಲಯ (ಮ್ಯೂಸಿಯಂ) ನಿರ್ಮಾಣಕ್ಕೆ ಬೇಕಾದ ಸಹಾಯ, ಸಬ್ಸಿಡಿ ಡೀಸೆಲ್‌ನ್ನು ೧.೫ ಲಕ್ಷ ಲೀ.ನಿಂದ ಎರಡು ಲಕ್ಷ ಲೀ.ಗೆ ಏರಿಸುವ ಕುರಿತು, ಯಾಂತ್ರಿಕೃತ ದೋಣಿಗಳಿಗೆ ನೀಡುವ  ಸೀಮೆಎಣ್ಣೆ ಕೋಟಾವನ್ನು ೪೦೦ಲೀ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವರಾದ ಶ್ರೀರಾಮುಲು, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್‌ಕುಮಾರ್, ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಬಿ.ಎಂ.ಸುಕುಮಾರ್ ಶೆಟ್ಟಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್,  ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿಯ ಮುಖಂಡರಾದ ಕುಯಿಲಾಡಿ ಸುರೇಶ್ ನಾಯಕ್, ಯಶ್ಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ಮೊಗವೀರ ಮುಖಂಡರಾದ ಎ.ಸಿ.ಕುಂದರ್, ವಾಸುದೇವ ಸಾಲ್ಯಾನ್, ಗುಂಡು ಬಿ.ಅಮೀನ್, ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ ಮುಂತಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಜಿ.ಶಂಕರ್ ಅತಿಥಿಗಳನ್ನು ಸ್ವಾಗತಿಸಿ, ಸಮಾಜದ ಹಾಗೂ ಸಮಿತಿಯ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದರು. ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ಸಂಘದ ಸುಧಾಕರ ಕುಂದರ್ ವಂದಿಸಿದರೆ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News