ರಾಮನವಮಿ ಮೆರವಣಿಗೆಗೆ ಕಲ್ಲು ತೂರಾಟ: ʼಆರೋಪಿಗಳʼ ಮನೆಯನ್ನು ನೆಲಸಮಗೊಳಿಸಿದ ಮ.ಪ್ರ ಸರಕಾರ

Update: 2022-04-11 13:14 GMT
Photo: twitter.com/MTvalluvan

ಭೋಪಾಲ್:‌ ಖಾರ್ಗೋನ್‌ ನಗರದಲ್ಲಿ ರಾಮನವಮಿ ಮೆರವಣಿಗೆ ವೇಳೆ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ, ಕಲ್ಲು ತೂರಾಟ ಮಾಡಿದ ಆರೋಪಿಗಳ ಮನೆಗಳನ್ನು ಮಧ್ಯಪ್ರದೇಶ ಸರ್ಕಾರವು ಸೋಮವಾರ ಕೆಡವಲು ಪ್ರಾರಂಭಿಸಿದೆ ಎಂದು news18.com ವರದಿ ಮಾಡಿದೆ.

 ಗಲಭೆಗೆ ಸಂಬಂಧಿಸಿ ಇದುವರೆಗೆ 77 ಜನರನ್ನು ಬಂಧಿಸಲಾಗಿದ್ದು, ಇಡೀ ಖಾರ್ಗೋನ್ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ.  ಖಾರ್ಗೋನ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಮನೆಗಳನ್ನು ನೆಲಸಮ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ

ಹಿಂಸಾಚಾರದಲ್ಲಿ ಖಾರ್ಗೋನ್‌ನ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಚೌಧರಿ ಹಾಗೂ ಆರು ಪೊಲೀಸರು ಸೇರಿದಂತೆ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರವಿವಾರ ರಾಮನವಮಿ ಮೆರವಣಿಗೆಯ ವೇಳೆ ಉಂಟಾದ ಘರ್ಷಣೆ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಘಟನೆಯು ದುರದೃಷ್ಟಕರ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದು,  ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 ಗಲಭೆಕೋರರನ್ನು ಸುಮ್ಮನೆ ಬಿಡುವುದಿಲ್ಲ, ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಮಧ್ಯಪ್ರದೇಶದಲ್ಲಿ ಗಲಭೆಕೋರರಿಗೆ ಜಾಗವಿಲ್ಲ ಎಂದು ಸಿಎಂ ಹೇಳಿದ್ದಾರೆ.

 ಹಾನಿಯಾದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಕಾಯಿದೆಯನ್ನು ನಾವು ತಂದಿದ್ದೇವೆ. ಕಾಯಿದೆಯಡಿ ಹಕ್ಕು ನ್ಯಾಯಮಂಡಳಿಯನ್ನು ರಚಿಸುತ್ತಿದ್ದೇವೆ ಮತ್ತು ನಷ್ಟವನ್ನು ನಿರ್ಣಯಿಸಿದ ನಂತರ, ಅದರ ವಸೂಲಾತಿಯನ್ನು ಗಲಭೆಕೋರರಿಂದ ಮಾಡಲಾಗುತ್ತದೆ ಎಂದು ಚೌಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು news18.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News