×
Ad

ವಿದ್ಯುತ್ ದರ ಏರಿಕೆ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

Update: 2022-04-11 20:47 IST

ಕುಂದಾಪುರ : ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಸೋಮವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಡಿವೈಎಫ್‌ಐ ಮುಖಂಡ ರವಿ ವಿ.ಎಂ. ಮಾತನಾಡಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸರಕಾರದ ಒಪ್ಪಿಗೆ ಮೇರೆಗೆ ಪ್ರತಿ ಯುನಿಟ್‌ಗೆ ಸರಾಸರಿ ೩೫ ಪೈಸೆ ಹೆಚ್ಚಿಸಿರುವುದು ಮಾತ್ರವಲ್ಲದೆ ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಳ ಮಾಡಿರುವುದು ಖಂಡನೀಯ ಎಂದು ತಿಳಿಸಿದರು.

ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ಸುರೇಶ ಕಲ್ಲಾಗರ ಮಾತನಾಡಿ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣದ ಪ್ರಕ್ರೀಯೆಗಳ ಭಾಗವಾಗಿ ದರ ಏರಿಕೆ ಮಾಡಲಾಗುತ್ತಿದೆ. ತೈಲ ಬೆಲೆ, ಅಡುಗೆ ಅನಿಲ, ಔಷಧಿಗಳ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿರುವಾಗ ನೆರವಿಗೆ ಬರಬೇಕಾದ ಸರಕಾರದ ಇಂಧನ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಡಿವೈಎಫ್‌ಐ ಮಾಜಿ ಅಧ್ಯಕ್ಷ ಎಚ್.ನರಸಿಂಹ ಮಾತನಾಡಿ, ಬಿಜೆಪಿ ನೇತೃತ್ವದ ಸರಕಾರವು ಬೆಲೆ ಏರಿಕೆ ತಡೆಗಟ್ಟಲು ಯಾವುದೇ ಪರ್ಯಾಯ ಕ್ರಮವಹಿಸದಿ ರುವುದು  ಬಿಜೆಪಿಯ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸರಕಾರ ಕೂಡಲೇ ಬೆಲೆ ಏರಿಕೆ ತಡೆಗಟ್ಟಲು ಕ್ರಮ ವಹಿಸಿ ಜನತೆಯನ್ನು ರಕ್ಷಿಸಲು ಮುಂದಾಗ ಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜ ಬಿಟಿಆರ್, ಪ್ರಕಾಶ್ ಕೋಣಿ, ಹೆಮ್ಮಾಡಿ ಸಂತೋಷ, ಸುರೇಂದ್ರ, ಚಂದ್ರಶೇಖರ ವಿ., ಉದಯ ಟೈಲರ್ ಆದಿ ವಾಸಿ ಸಂಘಟನೆಯ ಮುಖಂಡ ಶ್ರೀಧರ ನಾಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News