ಮಾಂಸಾಹಾರ ಕುರಿತು ಜೆಎನ್‌ಯು ವಿದ್ಯಾರ್ಥಿಗಳ ನಡುವೆ ಘರ್ಷಣೆಯಲ್ಲಿ ಕನಿಷ್ಠ 16 ಜನರಿಗೆ ಗಾಯ

Update: 2022-04-11 16:39 GMT
Photo: PTI

ಹೊಸದಿಲ್ಲಿ,ಎ.11: ಇಲ್ಲಿಯ ಜವಾಹರಲಾಲ ನೆಹರು ವಿವಿ (ಜೆಎನ್‌ಯು)ಯ ಕ್ಯಾಂಪಸ್‌ನಲ್ಲಿ ರವಿವಾರ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದು,ಕನಿಷ್ಠ 16 ಜನರು ಗಾಯಗೊಂಡಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಎನ್ಯು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕದಡುವ ಇಂತಹ ಘಟನೆಗಳಲ್ಲಿ ಭಾಗಿಯಾಗುವುದರ ವಿರುದ್ಧ ಸೋಮವಾರ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

ರವಿವಾರ ಸಂಜೆ ವಿವಿಯ ಕಾವೇರಿ ಹಾಸ್ಟೆಲ್ನಲ್ಲಿ ಮಾಂಸಾಹಾರವನ್ನು ಬಡಿಸುತ್ತಿದ್ದನ್ನು ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳ ಗುಂಪು ಆಕ್ಷೇಪಿಸಿದ ಬಳಿಕ ಕ್ಯಾಂಪಸ್‌ನಲ್ಲಿ ಘರ್ಷಣೆಗಳು ನಡೆದಿವೆ. ಎರಡೂ ಗುಂಪುಗಳಿಗೆ ಸೇರಿದ ಕನಿಷ್ಠ 16 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಕಾವೇರಿ ಹಾಸ್ಟೆಲ್‌ಗೆ ನುಗ್ಗಿದ ಎಬಿವಿಪಿ ಸದಸ್ಯರು ರವಿವಾರದ ವಿಶೇಷವಾಗಿ ಮೆಸ್ನಲ್ಲಿ ಮಾಂಸಾಹಾರವನ್ನು ಸಿದ್ಧಪಡಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ದಾಳಿಗಳನ್ನು ಆರಂಭಿಸಿದ್ದರು. ಅವರು ಚಿಕನ್ ಪೂರೈಸಲು ಹಾಸ್ಟೆಲ್‌ಗೆ ಬಂದಿದ್ದ ವ್ಯಾಪಾರಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಘರ್ಷಣೆಯಲ್ಲಿ ತಲೆಗೆ ಗಾಯಗೊಂಡಿರುವ ವಿದ್ಯಾರ್ಥಿನಿ ಅಖ್ತರಿಸ್ತಾ ಅನ್ಸಾರಿ ತಿಳಿಸಿದರು.

ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರ ಪೂರೈಕೆಗೆ ತಮ್ಮ ವಿರೋಧವಿಲ್ಲ. ಪ್ರತಿಯೊಬ್ಬರೂ ತಮಗಿಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರಿದ್ದಾರೆ ಎಂದು ಹೇಳಿದ ಎಬಿವಿಪಿಯ ಜೆಎನ್ಯು ಘಟಕಾಧ್ಯಕ್ಷ ರೋಹಿತ ಕುಮಾರ್,ಘರ್ಷಣೆಗಳ ಹಿಂದೆ ವಿರೋಧಿ ಗುಂಪು ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ(ಜೆಎನ್‌ಯುಎಸ್‌ಯು)ದ ಪೂರ್ವಯೋಜಿತ ಒಳಸಂಚು ಇತ್ತು ಎಂದು ಆರೋಪಿಸಿದರು.

 ಹಾಸ್ಟೆಲ್ನೊಳಗೆ ರಾಮನವಮಿ ಪೂಜೆಯನ್ನು ನಡೆಸುವುದನ್ನು ಜೆಎನ್‌ಯುಎಸ್‌ಯು ವಿದ್ಯಾರ್ಥಿಗಳು ವಿರೋಧಿಸಿದ್ದರು ಮತ್ತು ಪೂಜಾವಿಧಿಗಳು ನಡೆಯುತ್ತಿದ್ದಾಗ ತಮ್ಮ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ ಎಂದರು.

 ಜೆಎನ್‌ಯುಎಸ್‌ಯು,ಎಸ್ಎಫ್ಐ,ಡಿಎಸ್ಎಫ್ ಮತ್ತು ಎಐಎಸ್ಎ ನೀಡಿರುವ ದೂರಿನ ಮೇರೆಗೆ ಸೋಮವಾರ ಬೆಳಿಗ್ಗೆ ಪೊಲೀಸರು ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ತಾವೂ ದೂರನ್ನು ಸಲ್ಲಿಸುವುದಾಗಿ ಎಬಿವಿಪಿ ಸದಸ್ಯರು ತಿಳಿಸಿದ್ದಾರೆ ಮತ್ತು ದೂರು ಸ್ವೀಕರಿಸಿದ ಬಳಿಕ ಅಗತ್ಯ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಡಿಸಿಪಿ ಮನೋಜ್ ಸಿ.ತಿಳಿಸಿದರು. ಶಾಂತಿಯನ್ನು ಕಾಯ್ದುಕೊಳ್ಳಲು ಮತ್ತು ಅಹಿತಕರ ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಲು ವಿವಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ಯಾಂಪಸ್‌ನ ಹೊರಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ವಿವಿ ಕೋರಿಕೊಂಡರೆ ಕ್ಯಾಂಪಸ್‌ನೊಳಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಕಾವೇರಿ ಹಾಸ್ಟೆಲ್ ನ ಮೆಸ್ ನಲ್ಲಿ ನಡೆದ ಹಿಂಸಾಚಾರವನ್ನು ಜೆಎನ್ಯು ಶಿಕ್ಷಕರ ಸಂಘವು ಖಂಡಿಸಿದೆ. ವಿದ್ಯಾರ್ಥಿಗಳು ಮತ್ತು ವಿವಿಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸುರಕ್ಷತೆಯನ್ನು ಸಂಪೂರ್ಣವಾಗಿ ಖಚಿತಪಡಿಸಬೇಕು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಹಿಂಸಾಚಾರಕ್ಕೆ ಪರಸ್ಪರರನ್ನು ಹೊಣೆಯಾಗಿಸಿ ಜೆಎನ್‌ಯುಎಸ್‌ಯು ಮತ್ತು ಎಬಿವಿಪಿ ವಿದ್ಯಾರ್ಥಿಗಳು ರವಿವಾರ ವಿವಿ ಕ್ಯಾಂಪಸ್‌ನೊಳಗೆ ಪ್ರತ್ಯೇಕ ಜಾಥಾಗಳನ್ನು ನಡೆಸಿದರು.

ಘಟನೆಯು ನಡೆದಾಗ ವಿವಿಯ ಕುಲಪತಿ ಶಾಂತಿಶ್ರೀ ಡಿ.ಪಂಡಿತ್ ಅವರು ದಿಲ್ಲಿಯಲ್ಲಿರಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಿತಿಯ ಮೇಲೆ ನಿಗಾಯಿರಿಸಲು ರಾತ್ರಿಯೇ ವಿವಿಯನ್ನು ತಲುಪಿದ್ದರು ಎಂದು ಮೂಲಗಳು ತಿಳಿಸಿವೆ.

ಘರ್ಷಣೆಗಳದ್ದು ಎಂದು ಹೇಳಲಾಗಿರುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು,ಅಖ್ತರಿಸ್ತಾ ಅನ್ಸಾರಿ ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವೀಡಿಯೊ ಇವುಗಳಲ್ಲಿ ಸೇರಿದೆ. ರವಿವಾರ ರಾತ್ರಿ ಟ್ವೀಟಿಸಿರುವ ಅವರು,ತಾನು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು,ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News