ಅರಸು ರಾಕ್ಷಸ ಮಂತ್ರಿಯೆಂಬುವ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ...

Update: 2022-04-13 06:07 GMT

ಆಡಳಿತರೂಢ ಸರಕಾರಗಳು ದೇಶದಲ್ಲಿ ಎಬ್ಬಿಸಿದ ಗೊಂದಲ ಮತ್ತು ಗಲಭೆಯ ಬೆಲೆಯನ್ನು ತೆರಲೇ ಬೇಕಾಗುತ್ತದೆ. ಸಸ್ಯಾಹಾರ ಮತ್ತು ಮಾಂಸಾಹಾರದ ವಿಚಾರದಲ್ಲಿ ಎಬ್ಬಿಸಿದ ಗಲಭೆ, ಹಿಜಾಬ್, ಹಲಾಲ್ ಕಟ್ ವಿಚಾರದಲ್ಲಿ ಎಬ್ಬಿಸಿದ ಗಲಭೆಯಾಗಲಿ ಇನ್ನೂ ಅನೇಕ ವಿಚಾರಗಳು ನಮ್ಮ ಸರಕಾರದ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಇದು ವೋಟ್ ಬ್ಯಾಂಕ್ ರಾಜಕಾರಣವೇ ಹೊರತು ಬೇರೇನೂ ಅಲ್ಲ. 

ಕುಮಾರವ್ಯಾಸನ ಈ ಮೇಲಿನ ಪದ್ಯ ಎಂದಿಗೂ ಪ್ರಸ್ತುತವೆ. ಅದರಲ್ಲೂ ಸಮಕಾಲೀನ ರಾಜಕೀಯಕ್ಕೆ ಹಿಡಿದ ಕನ್ನಡಿಯಂತಿದೆ. ಇಂದಿನ ರಾಜಕೀಯ ಪ್ರಕ್ಷುಬ್ಧತೆಯ ಬಗೆಗೆ ಮಾತನಾಡದೆ ಮೌನವಾಗಿರುವುದು ದ್ರೋಹವಾಗಿಬಿಡುತ್ತದೆ. ದಾರಿತಪ್ಪಿದ ರಾಜಕಾರಣ ಮತ್ತು ರಾಜಕಾರಣಿಗಳನ್ನು ಎಚ್ಚರಿಸುವ ಅಗತ್ಯ ಜನಸಾಮಾನ್ಯರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

 ರಾಜಕಾರಣಿಗಳ ಇಂದಿನ ನಡೆಯನ್ನು ಗಮನಿಸಿದಾಗ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯ ಬಲ್ಲರು ಎನ್ನುವುದನ್ನು ಅವರೇ ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಯಾವ ಲಜ್ಜೆಯೂ ಇಲ್ಲದೆ ವರ್ತಿಸುತ್ತಿರುವುದು ಇದಕ್ಕೆ ಕನ್ನಡಿಯಂತಿದೆ. ರಾಜಕಾರಣಿಗಳಿಗೆ ಆತ್ಮಸಾಕ್ಷಿ ಇದೆ ಎಂದಾದರೆ ಅವರು ತಮ್ಮತಮ್ಮ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಮತ್ತು ಅಭಿವೃದ್ಧಿಗಳನ್ನು ಜನರಿಗೆ ಮನವರಿಕೆ ಮಾಡಿಸಿ ಮತವನ್ನು ಕೇಳಲಿ. ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಧನೆ ಮತ್ತು ಕೆಲಸಗಳೊಂದಿಗೆ ಚುನಾವಣೆ ಎದುರಿಸಲಿ. ಅದನ್ನು ಬಿಟ್ಟು ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ಎಷ್ಟು ಸರಿಯಾದುದು? ದೇವರು, ಧರ್ಮದ ಹೆಸರಿನಲ್ಲಿ ಸಾಮಾಜಿಕ ಶಾಂತಿ, ಸಹಿಷ್ಣುತೆಯನ್ನು ನಾಶಮಾಡಿ ಅಧಿಕಾರಕ್ಕೆ ಬರಬೇಕೆನ್ನುವ ದುಷ್ಟತನವನ್ನು ಬಿಟ್ಟು ಮನುಷ್ಯರಂತೆ ವರ್ತಿಸುವುದನ್ನು ಕಲಿಯಬೇಕಿದೆ.

ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಮಾಡುವ ವ್ಯಕ್ತಿಗಳ ನಡೆ, ನುಡಿ ಮತ್ತು ತಾವು ಮಾಡುವ ಕೆಲಸ ಬಹಳ ಮುಖ್ಯವಾದುದು ಎಂಬ ಸಣ್ಣ ವಿವೇಕದ ವಾತಾವರಣವನ್ನು ಇಂದು ರಾಜಕಾರಣದಲ್ಲಿ ಬೆಳೆಸುವ ಕೆಲಸ ಆಗಬೇಕಿದೆ. ಅದನ್ನು ಮರೆತಿರುವುದೇ ಇಂದಿನ ದುರಂತಗಳಿಗೆ ಕಾರಣ. ಪ್ರಾಮಾಣಿಕತೆ, ಬದ್ಧತೆಗೆ ಎಳ್ಳು ನೀರು ಬಿಟ್ಟು, ಅಧಿಕಾರ ಮತ್ತು ಹಣ ಗಳಿಕೆಯೊಂದೇ ರಾಜಕೀಯ ಎಂದು ತಿಳಿದಿರುವುದೇ ರಾಜಕಾರಣ ಇಂದು ಅಧಃಪತನಕ್ಕೆ ಇಳಿದಿರುವುದು. ಸಾಮಾಜಿಕತೆ ಇಂದು ಬಹಳ ಅಪಾಯವನ್ನು ಎದುರಿಸುತ್ತಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಜನಸಾಮಾನ್ಯರು ವಿವೇಕದಿಂದ ಅರಿತು ಕೈಗೆತ್ತಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ರಾಜಕಾರಣಿಗಳು ಪಕ್ಷದ ಅಥವಾ ಸಂಘಟನೆಯ ಗುಲಾಮರಂತೆ ವರ್ತಿಸದೆ, ಕುಮಾರವ್ಯಾಸ ಹೇಳುವಂತೆ ರಾಕ್ಷಸರೂ ಆಗದೆ, ಜನಸಾಮಾನ್ಯರ ಮತದ ಮೌಲ್ಯವನ್ನು ಅರ್ಥಮಾಡಿಕೊಂಡು ಸಮಾಜದ ಒಳಿತಿಗೆ ಶ್ರಮಿಸುವ ವ್ಯಕ್ತಿಗಳಾಗಬೇಕು. ಜಾತಿ, ಧರ್ಮ, ಪ್ರಾದೇಶಿಕತೆಗಳ ತಾರತಮ್ಯವನ್ನು ಬಿಟ್ಟು ಸಮಾಜದ ಒಳಿತನ್ನು ತನ್ನ ಕೆಲಸದಲ್ಲಿ ಕಂಡುಕೊಳ್ಳುವಂತಹ ವಿವೇಕವನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ಮನುಷ್ಯರ ನಡುವೆ ಶಾಂತಿ, ಸೌಹಾರ್ದ ಮತ್ತು ಪ್ರೀತಿಯನ್ನು ಬೆಳೆಸುವ ಕೆಲಸವನ್ನು ನಿಮ್ಮ ಕೈಯಲ್ಲಿ ಮಾಡಲಾಗದಿದ್ದಲ್ಲಿ ದ್ವೇಷವನ್ನು ಬಿತ್ತುವ ಕೆಲಸವನ್ನಂತೂ ಮಾಡಬೇಡಿ. ಜನಸಾಮಾನ್ಯರನ್ನು ಬದುಕಲು ಬಿಡಿ. ನಿಮ್ಮ ನಿಮ್ಮ ಸ್ವಾರ್ಥ, ದ್ವೇಷ, ಅಹಂಕಾರಗಳ ಪರಿಮಾಣವನ್ನು ಜನಸಾಮಾನ್ಯರು ಯಾಕೆ ಅನುಭವಿಸಬೇಕು? ನಿಮ್ಮ ಕೈಯಲ್ಲಿ ಒಳ್ಳೆಯ ಸಮಾಜವನ್ನು ಕಟ್ಟುವ ಸಾಮರ್ಥ್ಯ ಆಗದಿದ್ದಲ್ಲಿ, ನಾಶಮಾಡುವ ಕೆಲಸವನ್ನು ಮಾಡದಿರಿ. ದೇಶದ ಆರ್ಥಿಕತೆ ನಿಂತಿರುವುದೇ ಜನಸಾಮಾನ್ಯರ ತೆರಿಗೆಯ ಹಣದಿಂದ. ಜನಸಾಮಾನ್ಯರು ಕಷ್ಟದಿಂದ, ಪ್ರಾಮಾಣಿಕವಾಗಿ ಸಂಪಾದಿಸಿ ಕಟ್ಟಿದ ತೆರಿಗೆಯ ಹಣವನ್ನು ಪೋಲುಮಾಡದೆ ಸಮಾಜದ ಒಳಿತಿಗೆ ಬಳಸಿ. ಈ ಕನಿಷ್ಠ ವಿವೇಕವಾದರೂ ನಿಮಗೆಲ್ಲರಿಗೂ ಇರಲಿ. ನಿಮ್ಮಿಳಗೆ ಸ್ವಲ್ಪಮಾನವೀಯತೆ ಇದೆ ಎಂದಾದರೆ ಆ ಪಾಪಪ್ರಜ್ಞೆಯಾದರೂ ನಿಮಗೆ ಕಾಡಲಿ. ರಾಜಕಾರಣಕ್ಕಾಗಿ ಧರ್ಮಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ?. ರಾಜಕಾರಣ ಯಾವತ್ತೂ ಧರ್ಮಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬರುವುದಲ್ಲ. ಧರ್ಮಗಳು ಅಧಿಕಾರವನ್ನು ಬಳಸಿಕೊಂಡು ದ್ವೇಷ ಬಿತ್ತುವುದಲ್ಲ. ಈ ಎರಡು ಮಾದರಿಗಳು ದುಷ್ಟತನದ ವರ್ತನೆಗಳೇ. ಈ ರೀತಿಯ ದುಷ್ಟತನದ ರಾಜಕಾರಣ ಮಾಡುವುದನ್ನು ರಾಜಕಾರಣಿಗಳು ಬಿಡಬೇಕು. ಆದರೆ ಈ ರೀತಿಯ ಅಧಿಕಾರದ ರುಚಿಯನ್ನು ದೇಶದಾದ್ಯಂತ ಕಂಡುಕೊಂಡಿರುವ ಆಡಳಿತರೂಢ ಪಕ್ಷ ಧರ್ಮ ಒಂದೇ ಅದರ ಬಂಡವಾಳ ಎನ್ನುವಂತೆ ನಡೆದುಕೊಳ್ಳುತ್ತಿದೆ. ಅದನ್ನು ಬಿಟ್ಟು ಬೇರೆ ಉತ್ತಮ ರೀತಿಯ ಚುನಾವಣೆಯನ್ನು ಎದುರಿಸುವ ಮಾರ್ಗ ಅದಕ್ಕೆ ಇಲ್ಲದ ರೀತಿ ನಡೆದುಕೊಳ್ಳುತ್ತಿದೆ. ಆಡಳಿತರೂಢ ಸರಕಾರಗಳು ದೇಶದಲ್ಲಿ ಎಬ್ಬಿಸಿದ ಗೊಂದಲ ಮತ್ತು ಗಲಭೆಯ ಬೆಲೆಯನ್ನು ತೆರಲೇ ಬೇಕಾಗುತ್ತದೆ. ಸಸ್ಯಾಹಾರ ಮತ್ತು ಮಾಂಸಾಹಾರದ ವಿಚಾರದಲ್ಲಿ ಎಬ್ಬಿಸಿದ ಗಲಭೆ, ಹಿಜಾಬ್, ಹಲಾಲ್ ಕಟ್ ವಿಚಾರದಲ್ಲಿ ಎಬ್ಬಿಸಿದ ಗಲಭೆಯಾಗಲಿ ಇನ್ನೂ ಅನೇಕ ವಿಚಾರಗಳು ನಮ್ಮ ಸರಕಾರದ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಇದು ವೋಟ್ ಬ್ಯಾಂಕ್ ರಾಜಕಾರಣವೇ ಹೊರತು ಬೇರೇನೂ ಅಲ್ಲ. ಧರ್ಮದ ಅಮಲನ್ನು ಎಲ್ಲರ ತಲೆಯಲ್ಲೂ ತುಂಬಿ ತಮ್ಮ ರಾಜಕೀಯ ಮತ್ತು ಧರ್ಮದ ಬೇಳೆ ಬೇಯಿಸಿಕೊಳ್ಳುವುದನ್ನು ಬಿಡಬೇಕಿದೆ. ಧರ್ಮವನ್ನು ರಾಜಕೀಯದ ಸರಕಾಗಿಸಿಕೊಂಡಿರುವ ರಾಜಕಾರಣಿಗಳು ಮಾರಾಟವಾಗುತ್ತಿರುವುದು ರಾಜಕೀಯ ವಲಯ ಕಲುಷಿತವಾಗಿ ಸಮಾಜದಲ್ಲಿ ಗಬ್ಬುನಾರುವಂತಾಗಿದೆ. ದೇಶದ ಜನಸಾಮಾನ್ಯರು ಸಾಂಕ್ರಾಮಿಕ ರೋಗದ ಭೀತಿ, ಬೆಲೆ ಏರಿಕೆಯ ಸಂಕಟ, ನಿರುದ್ಯೋಗದಂತಹ ಅನೇಕ ಸಮಸ್ಯೆಗಳಿಂದ ಸಂಕಷ್ಟವನ್ನು ಅನುಭವಿಸುವಂತಾಗಿರುವುದು ನಮ್ಮ ಸರಕಾರದಿಂದಾಗಿ ಎನ್ನುವ ಮರುಕ ನಿಮಗೆ ಇರಬೇಕಾಗಿತ್ತು. ದೇಶದ ಜನಸಾಮಾನ್ಯರ ಬದುಕು ದುಸ್ಥಿತಿಯಲ್ಲಿ ಇರುವಾಗ ಅದರ ಬಗೆಗೆ ಚಿಂತಿಸುವುದನ್ನು ಬಿಟ್ಟು ನಿಮಗೆ ರಾಜಕೀಯ ಮತ್ತು ಧಾರ್ಮಿಕ ಮೇಲಾಟಗಳೇ ಮುಖ್ಯವಾಗಿದೆ. ಸಾಮಾನ್ಯ ಜನರು ದಂಗೆ ಏಳುವುದಕ್ಕೂ ಮೊದಲೇ ನಿಮ್ಮ ಸಣ್ಣತನಗಳನ್ನು ಬಿಟ್ಟು ಪ್ರಬುದ್ಧ ರಾಜಕಾರಣಿಗಳಾಗಿ ವರ್ತಿಸುವುದನ್ನು ಕಲಿತುಕೊಳ್ಳಿ.

ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಮೇಲೆ. ಸಂವಿಧಾನದ ಮೇಲೆ ಪ್ರಮಾಣಮಾಡಿ ಅಧಿಕಾರ ವಹಿಸಿಕೊಳ್ಳುವ ರಾಜಕಾರಣಿಗಳು ಆನಂತರ ಸಂವಿಧಾನದ ಆಶಯಗಳನ್ನು ಗಾಳಿಗೆತೂರಿ ತಮ್ಮದೇ ಜಾತಿ, ಸಂಘಟನೆ, ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುವುದು ಸಂವಿಧಾನಕ್ಕೆ ಎಸಗುವ ದ್ರೋಹವಲ್ಲವೇ?. ಆ ಮೂಲಕ ಸಂವಿಧಾನದ ಮೂಲ ಆಶಯವನ್ನು ನಾಶಮಾಡುವುದು ಅವರ ಕೆಲಸವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.

ಅಧಿಕಾರದಿಂದ ವಂಚಿತ ಸಮುದಾಯಗಳಿಗೆ ಅಧಿಕಾರ ಸಿಗುವಂತಾಗಿದ್ದು ಸಂವಿಧಾನದ ಮೂಲಕ. ಒಂದು ವೇಳೆ ಸಂವಿಧಾನ ಇಲ್ಲದಿದ್ದ ಪಕ್ಷದಲ್ಲಿ ಶೋಷಿತ ಸಮುದಾಯಗಳಿಗೆ ಅಧಿಕಾರವೆನ್ನುವುದು ಮರಿಚೀಕೆಯಾಗುತ್ತಿತ್ತು. ಆ ಪ್ರಜ್ಞೆಯನ್ನು ಮರೆತವರು ಇದನ್ನು ಅರ್ಥಮಾಡಿಕೊಂಡು ತಮ್ಮ ಸ್ಥಾನಮಾನಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಆ ಮೂಲಕ ಸಂವಿಧಾನಕ್ಕೆ ಮತ್ತು ಸಮಾಜಕ್ಕೆ ದ್ರೋಹವೆಸಗದೆ ನಡೆದುಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕಿದೆ. ಸಂವಿಧಾನದ ವಿನಾಶವೆಂದರೆ ಸರ್ವರ ವಿನಾಶ ಮತ್ತು ದೇಶದ ವಿನಾಶ ಎನ್ನುವ ತಿಳುವಳಿಕೆಯ ಪಾಠವನ್ನು ಕಲಿಯಬೇಕಿದೆ. ತಮ್ಮನ್ನೇ ತಾವು ಮುಗಿಸಿಕೊಳ್ಳುವುದಕ್ಕೆ ಎಲ್ಲರೂ ಪೈಪೋಟಿಗೆ ಇಳಿದಿದ್ದಾರೆ. ರಾಜಕೀಯಕ್ಕೆ ಹೋಗುವುದಾದರೆ ಸಮಾಜದ ಒಳಿತಿಗಾಗಿ ಹೋಗಿ. ನಿಮ್ಮ ಸ್ವಾರ್ಥ ಸಾಧನೆಗಾಗಿ ಹೋಗಬೇಡಿ. ದೇಶ ಆಳುವವರು ದೇಶದ ಒಳಿತಿಗೆ ಶ್ರಮಿಸಬೇಕೇ ಹೊರತು ವಿನಾಶದ ಬಗೆಗೆ ಚಿಂತಿಸಬಾರದು.

Writer - ಡಾ. ಶಿವಣ್ಣ ಕೆಂಸಿ

contributor

Editor - ಡಾ. ಶಿವಣ್ಣ ಕೆಂಸಿ

contributor

Similar News