×
Ad

ಗಲಭೆ ಪೀಡಿತ ಕರೌಲಿಗೆ ಭೇಟಿ ನೀಡಲು ಯತ್ನ: ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಪೊಲೀಸ್‌ ವಶಕ್ಕೆ

Update: 2022-04-13 17:39 IST
Photo: twitter/BJYM

ಜೈಪುರ್:‌ ರಾಜಸ್ಥಾನದ ಹಿಂಸಾಚಾರ ಪೀಡಿತ ಕರೌಲಿ ಪಟ್ಟಣಕ್ಕೆ ಹೋಗಲೆತ್ನಿಸಿದ ಬಿಜೆಪಿಯ ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯಾಧ್ಯಕ್ಷ ತೇಜಸ್ವಿ ಸೂರ್ಯನನ್ನು ರಾಜಸ್ತಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ಇತರೆ ನಾಯಕರೊಂದಿಗೆ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಪ್ರಯತ್ನಿಸಿದ ಅವರನ್ನು ದೌಸ ಗಡಿಭಾಗದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ndtv.com ವರದಿ ಮಾಡಿದೆ.

ಅದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಸೂರ್ಯ, ನಾನು ಕರೌಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದು, ಜನರನ್ನು ಅಲ್ಲಿ ಸೇರುವಂತೆ ಕರೆ ನೀಡಿದ್ದರು.

“ಬಿಜೆಪಿ ಯುವ ಮೋರ್ಚಾದ #ಚಲೋಕರೌಲಿ ನ್ಯಾಯ ಯಾತ್ರೆಯನ್ನು ತಡೆಯುವ ಸಲುವಾಗಿ ಅಶೋಕ್‌ ಗೆಹ್ಲೋಟ್ ರಿಂದ ದೌಸಾದಲ್ಲಿ ನೂರಾರು ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂಬ ವರದಿಗಳನ್ನು ಸ್ವೀಕರಿಸಲಾಗುತ್ತಿದೆ. ಕರೌಲಿಯಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಬಿಜೆವೈಎಂ ಉದ್ದೇಶಿಸಿದೆ. ಅದು ನಮ್ಮ ಸಾಂವಿಧಾನಿಕ ಹಕ್ಕು.‌ ಸಾಧ್ಯವಿದ್ದರೆ ನಮ್ಮನ್ನು ತಡೆದು ನಿಲ್ಲಿಸಿ” ಎಂದು ಸೂರ್ಯ ಟ್ವೀಟ್‌ ಮಾಡಿದ್ದರು.

ನಾವು ಇರುವ ಪ್ರದೇಶದಲ್ಲಿ ಯಾವುದೇ 144 ಸೆಕ್ಷನ್, ನಿರ್ಬಂಧಗಳು ಇಲ್ಲ. ಗಲಭೆಯಿಂದ ಗಾಯಗೊಂಡ ಸಂತ್ತ್ರಸ್ತರ ಕುಟುಂಬವನ್ನು ಭೇಟಿ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು. ಒಂದು ಪ್ರದೇಶಯಲ್ಲಿ ಯಾವುದೇ ನಿರ್ಭಂಧವಿಲ್ಲದಿರುವಾಗ ತಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ತೇಜಸ್ವಿ ಸೂರ್ಯ ರಾಜಸ್ಥಾನ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಗಾದಿ ಹಿನ್ನೆಲೆಯಲ್ಲಿ ಹಿಂದುತ್ವ ಸಂಘಟನೆಗಳು ಆಯೋಜಿಸಿದ್ದ ಮೆರವಣಿಗೆಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ ಬಳಿಕ ಕಲ್ಲು ತೂರಾಟ ನಡೆದಿದ್ದು, ಇದರ ಬೆನ್ನಲ್ಲೇ ಗಲಭೆ ಎದ್ದಿದೆ ಎಂದು ರಾಜಸ್ತಾನ ಪೊಲೀಸರು ಕರೌಲಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News