×
Ad

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ರಾತ್ರಿ ಹುಟ್ಟೂರಿಗೆ ಮೃತದೇಹ ರವಾನೆ

Update: 2022-04-13 22:39 IST

ಉಡುಪಿ : ಕುಟುಂಬಸ್ಥರ ಆಗಮನ, ಪ್ರಕರಣ ದಾಖಲು, ಪಂಚ ನಾಮೆ ಪ್ರಕ್ರಿಯೆ, ಆರೋಪಿಗಳ ಬಂಧನಕ್ಕೆ ಪಟ್ಟು ಸೇರಿದಂತೆ ಹಲವು ಬೆಳವಣಿಗೆಗಳಿಂದಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತಪಟ್ಟ ಸುಮಾರು 32 ತಾಸುಗಳ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಬುಧವಾರ ಸಂಜೆ ವೇಳೆ ನೆರವೇರಿಸಲಾಯಿತು.

ನಗರದ ಶಾಂಭವಿ ಹೊಟೇಲಿನ ರೂಮಿನಲ್ಲಿ ಎ.೧೨ರಂದು ಬೆಳಗ್ಗೆ ೧೦ಗಂಟೆಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ವಿವಿಧ ಬೆಳವಣಿಗೆಯ ಬಳಿಕ ಇಂದು ಸಂಜೆ ೫.೧೫ರ ಸುಮಾರಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆಎಂಸಿಯ ಶವಗಾರಕ್ಕೆ ಕಂಡೊಯ್ಯ ಲಾಯಿತು. ಸುಮಾರು ಮೂರು ತಾಸುಗಳ ಪ್ರಕ್ರಿಯೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹ ಕೊಂಡೊಯ್ಯಲು ಒಪ್ಪದ ಕುಟುಂಬಸ್ಥರ ಮನವೊಲಿಸಿ ರಾತ್ರಿ ೯ಗಂಟೆ ಸುಮಾರಿಗೆ ಬೆಳಗಾವಿಯ ಹಿಂಡಲಗಕ್ಕೆ ಕೊಂಡೊಯ್ಯಲಾಯಿತು.

ಕುಟುಂಬಸ್ಥರ ಆಗಮನ

ಸಂತೋಷ್ ಪಾಟೀಲ್ ಮೃತಪಟ್ಟ ಮಾಹಿತಿ ತಿಳಿದು ಎ.೧೨ರಂದು ಬೆಳಗ್ಗೆ  ಕುಟುಂಬಸ್ಥರು ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದು, ಕುಟುಂಬಸ್ಥರು ಬರುವವರೆಗೆ ಮೃತದೇಹವನ್ನು ಮುಟ್ಟಬಾರದು ಎಂಬ ಸೂಚನೆ ಹಿನ್ನೆಲೆಯಲ್ಲಿ  ರೂಮ್‌ನ್ನು ಪೊಲೀಸರು ಸೀಲ್ ಮಾಡಿದ್ದರು. ರಾತ್ರಿ ೧೧ ಗಂಟೆ ಸುಮಾರಿಗೆ ಸಂತೋಷ್ ಪಾಟೀಲ್ ಸಹೋದರ ಬೆಂಗಳೂರು ವಿ.ಜಿ. ಪುರಂ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಬಸವನ ಗೌಡ ಪಾಟೀಲ್, ಅವರ ಪತ್ನಿ, ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ್ ಮತ್ತು ಸುರೇಶ್ ಪಾಟೀಲ್, ಭಾವ ಹಾಗೂ ಇತರರು ಉಡುಪಿಗೆ ಆಗಮಿಸಿದ್ದರು.

ನೇರ ಹೊಟೇಲಿಗೆ ಬಂದಿಳಿದ ಕುಟುಂಬಸ್ಥರು, ಲಾಡ್ಜ್‌ನ ರೂಮಿಗೆ ತೆರಳಿ ಮೃತದೇಹವನ್ನು ವೀಕ್ಷಿಸಿದರು. ಈ ವೇಳೆ ಸಂತೋಷ್ ಪಾಟೀಲ್ ಕೇಸರಿ ಶಾಲು ಧರಿಸಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಅಲ್ಲಿಂದ ನೇರ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ ಕುಟುಂಬಸ್ಥರು ಈಶ್ವರಪ್ಪ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದರು.

ಮಾದರಿ, ಸಾಕ್ಷ್ಯಗಳ ಸಂಗ್ರಹ

ಎ.೧೨ರಂದೇ ಉಡುಪಿಗೆ ಆಗಮಿಸಿ ಮೊಕ್ಕಾಂ ಹೂಡಿದ್ದ ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಎ.೧೩ರಂದು ಬೆಳಗ್ಗೆ ೮ಗಂಟೆ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಜೊತೆ ಸೇರಿ ಹೊಟೇಲಿನ ರೂಮ್, ಮೃತದೇಹ ಹಾಗೂ ಮೊಬೈಲ್‌ಗಳ ಪಂಚನಾಮೆ ಪ್ರಕ್ರಿಯೆ ನಡೆಸಿತು. ಈ ಎಲ್ಲ ಪ್ರಕ್ರಿಯೆಯನ್ನು ಕುಟುಂಬಸ್ಥರ ಸಮ್ಮುಖದಲ್ಲೇ ನಡೆಸಲಾಯಿತು.

ಸುಮಾರು ಐದು ತಾಸುಗಳ ಕಾಲ ಈ ಪ್ರಕ್ರಿಯೆ ನಡೆಸಿದ ತಂಡವು ವಿಷದ ಬಾಟಲಿ, ಬೆರಳಚ್ಚು, ಹಲವು ಮಾದರಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿತು.  ಸಂತೋಷ್ ಪಾಟೀಲ್ ಹಾಗೂ ಗೆಳೆಯರು ಬಂದಿದ್ದ ಹೊಟೇಲ್ ಹೊರಗಡೆ ನಿಲ್ಲಿಸಿದ ಕಾರಿನ ಪಂಚ ನಾಮೆಯನ್ನು ನಡೆಸಲಾಯಿತು. ಕಾರಿನಲ್ಲಿ ದೊರೆತ ಬೆರಳಚ್ಚು, ಐಡಿ, ಬಟ್ಟೆ ಹಾಗೂ ವಿವಿಧ ಮಾದರಿ ಹಾಗೂ ಹಲವು ಸೊತ್ತುಗಳನ್ನು ತಂಡ ವಶಪಡಿಸಿಕೊಂಡಿದೆ.

ಸ್ಥಳದಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯಕ್, ತನಿಖಾಧಿಕಾರಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು.

ಆರೋಪಿಗಳ ಬಂಧನಕ್ಕೆ ಪಟ್ಟು

ಈ ಮಧ್ಯೆ ಲಾಡ್ಜ್‌ನಿಂದ ಹೊರಗೆ ಬಂದ ಮೃತರ ಕುಟುಂಬಸ್ಥರು, ದೂರಿನಲ್ಲಿ ಹೇಳಲಾಗಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅಲ್ಲಿಯ ವರೆಗೆ ಮೃತದೇಹವನ್ನು ಈ ಲಾಡ್ಜ್‌ನಿಂದ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣ ವಾಯಿತು.

ದೂರುದಾರ ಪ್ರಶಾಂತ್ ಪಾಟೀಲ್ ಮಾತನಾಡಿ, ನಾವು ಇಲಾಖೆಯವರಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ಪಂಚನಾಮೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ನಾವು ನೀಡಿದ ಸಹಕಾರದಂತೆ ಇಲಾಖೆಯವರು ಕೂಡ ನಮಗೆ ಸಹಕಾರ ನೀಡಿ ಆರೋಪಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೆ ಈ ಲಾಡ್ಜ್‌ನಿಂದ ಮೃತದೇಹ ಹೊರಗೆ ಹೋಗುವುದಿಲ್ಲ. ನನ್ನ ತಮ್ಮನಿಗೆ ನ್ಯಾಯ ಸಿಗುವುದು ನಮಗೆ ಮುಖ್ಯ ಎಂದರು.

ಮರಣೋತ್ತರ ಪರೀಕ್ಷೆ ವಿಳಂಬ

ಪಂಚನಾಮೆ ಪ್ರಕ್ರಿಯೆ ಮುಗಿದ ಕೂಡಲೇ ಪೋಲಿಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಶವಗಾರಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ಲಾಡ್ಜ್ ಹೊರಗಡೆ ಅಂಬ್ಯುಲೆನ್ಸ್ ಕೂಡ ಸಜ್ಜುಗೊಳಿಸಲಾಗಿತ್ತು.

ಈ ವೇಳೆಗೆ ಸಂತೋಷ್ ಪಾಟೀಲ್ ಮೃತಪಟ್ಟು ೨೪ ತಾಸಿಗಿಂತ ಅಧಿಕ ಕಾಲ ಆಗಿದ್ದುದರಿಂದ ಮೃತದೇಹವು ಕೊಳೆತ ಸ್ಥಿತಿಗೆ ಬಂದಿತ್ತು. ಅದಕ್ಕಾಗಿ ಮೃತದೇಹ ವನ್ನು ಪ್ಯಾಕ್ ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸ ಲಾಗಿತ್ತು. ಆದರೆ ಕುಟುಂಬಸ್ಥರು, ಆರೋಪಿಗಳನ್ನು ಬಂಧಿಸದೆ ಮೃತದೇಹ ಬಿಟ್ಟುಕೊಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದಿದ್ದರು. ಇದರಿಂದ ಮೃತದೇಹ ವನ್ನು ಶವಗಾರಕ್ಕೆ ಸಾಗಿಸಲು ನಾಲ್ಕು ತಾಸು ವಿಳಂಬವಾಯಿತು.

ಪಂಚನಾಮೆ ವರದಿಗೆ ಆಕ್ಷೇಪ

ಪಂಚನಾಮೆ ವರದಿಯಲ್ಲಿನ ಕೆಲವೊಂದು ಲೋಪಗಳ ಬಗ್ಗೆ ಮೃತರ ಸಹೋದರ ಇನ್ಸ್‌ಸ್ಪೆಕ್ಟರ್ ಬಸವಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪೊಲೀಸರು ಹಾಗೂ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆಯಿತು.

ಇದೇ ಕಾರಣಕ್ಕಾಗಿ ಕುಟುಂಬಸ್ಥರು ಪಂಚನಾಮೆ ವರದಿಗೆ ಸಹಿ ಹಾಕಲು ನಿರಾಕರಿಸಿದ್ದರು. ಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮನವೊಲಿಕೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ವರದಿಯಲ್ಲಿ ಲೋಪಗಳನ್ನು ಸರಿ ಪಡಿಸಿ ವರದಿ ಸಹಿ ಮಾಡಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಈ ಎಲ್ಲ ಪ್ರಕ್ರಿಯೆಗಳು ಮುಗಿಯುವ ಸಂಜೆ ಐದು ಗಂಟೆ ಆಗಿತ್ತು. ಸುಮಾರು ನಾಲ್ಕು ತಾಸಿನ ಗೊಂದಲದ ಬಳಿಕ ಸಂತೋಷ್ ಪಾಟೀಲ್ ಮೃತದೇಹವನ್ನು ಕುಟುಂಬಸ್ಥರ ಒಪ್ಪಿಗೆಯಂತೆ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಗಾರಕ್ಕೆ ಪೊಲೀಸ್ ಭದ್ರತೆಯಲ್ಲಿ ರವಾನಿಸಲಾಯಿತು. ಮೃತದೇಹ ವನ್ನು ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿ ದರು. ಲಾಡ್ಜ್ ಹಾಗೂ ಶವಗಾರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಎಲ್ಲ ರೀತಿಯಲ್ಲೂ ಸೂಕ್ತ ತನಿಖೆ: ಐಜಿಪಿ ದೇವಜ್ಯೋತಿ ರೇ

ಸಂತೋಷ್ ಪಾಟೀಲ್ ಸಂಬಂಧಿಕರು ನೀಡಿದ ದೂರಿನ ಪ್ರಕಾರ ಕೆ.ಎಸ್.ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಎಲ್ಲಾ ರೀತಿಯ ಸೂಕ್ತ ತನಿಖೆಗಳನ್ನು ಮಾಡಲಾಗುವುದು ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ತಿಳಿಸಿದ್ದಾರೆ

ಲಾಡ್ಜ್‌ಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ದೂರಿನ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೃತರ ಹತ್ತಿರದ ಸಂಬಂಧಿಕರ ಎದುರಿನಲ್ಲಿಯೇ ಎಲ್ಲ ಪರಿಶೀಲನೆ ಮಾಡ ಲಾಗಿದೆ. ಡಿಜಿಟಲ್ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವಂತ ಎಲ್ಲ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ತಂಡದಲ್ಲಿ ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರು ಇದ್ದಾರೆ ಎಂದು ತಿಳಿಸಿದರು.

"ಪ್ರಕರಣದ ತನಿಖೆ ನಡೆಸುವುದಾಗಿ ಕುಟುಂಬದವರಿಗೆ ಭರವಸೆ ನೀಡಿದ್ದೇವೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅವರು ಮೃತದೇಹವನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ".

-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ

"ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ನೀಡಿದ್ದಾರೆ. ಆ ಕಾರಣಕ್ಕಾಗಿ ನಾವು ಮೃತದೇಹ ವನ್ನು ಸ್ವೀಕರಿಸಿ ಹುಟ್ಟೂರಿಗೆ ಕೊಂಡೊಯ್ಯುತ್ತಿದ್ದೇವೆ. ಊರಿಗೆ ಹೋಗಿ ಕುಟುಂಬದವರ ಜೊತೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು".


-ಪ್ರಶಾಂತ್ ಪಾಟೀಲ್, ಮೃತರ ಸಂಬಂಧಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News