ಹಾರ್ದಿಕ್ ಪಟೇಲ್‌ಗಾಗಿ ನಮ್ಮ ಬಾಗಿಲು ತೆರೆದಿರುತ್ತದೆ: ಎಎಪಿ ಗುಜರಾತ್ ಮುಖ್ಯಸ್ಥ

Update: 2022-04-14 16:59 GMT
Photo: Gopal Italia (Twitter/@AamAadmiParty), Hardik Patel (PTI)

ಅಹಮದಾಬಾದ್:‌ ಗುಜರಾತ್‌ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ತನ್ನನ್ನು ಪಕ್ಷ ಕಡೆಗಣಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದ ಒಂದು ದಿನದ ಬೆನ್ನಲ್ಲೇ, ಆಮ್ ಆದ್ಮಿ ಪಾರ್ಟಿಯ (ಎಎಪಿ) ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು, ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್‌ನಲ್ಲಿ ಅತೃಪ್ತರಾಗಿದ್ದರೆ ಅವರನ್ನು ಸ್ವಾಗತಿಸಲು ತಮ್ಮ ಪಕ್ಷ ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಕೋಟಾ ಆಂದೋಲನವನ್ನು ಮುನ್ನಡೆಸಲು ಹಾರ್ದಿಕ್ ಸ್ಥಾಪಿಸಿದ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಯೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ಇಟಾಲಿಯಾ ಕೂಡಾ ಪಾಟಿದಾರ್ ಸಮುದಾಯದವರಾಗಿದ್ದಾರೆ.

 “ಹಾರ್ದಿಕ್ ಪಟೇಲ್‌ಗಾಗಿ ನಮ್ಮ ಬಾಗಿಲು ತೆರೆದಿದೆ ಮತ್ತು ಅಂತಹ ಕ್ರಾಂತಿಕಾರಿ ಯುವಕರನ್ನು ನಾವು ಖಂಡಿತವಾಗಿ ಸ್ವಾಗತಿಸುತ್ತೇವೆ. ಪಾಟಿದಾರ್ ಸಮುದಾಯದ ಜನರಲ್ಲಿ ಅವರ ಸ್ವೀಕಾರಾರ್ಹತೆ ಮತ್ತು ಅವರ ಮೇಲಿರುವ ಪ್ರೀತಿಯನ್ನು ನಾವು ನೋಡಿದ್ದೇವೆ” ಎಂದು ಇಟಾಲಿಯಾ ಹೇಳಿದ್ದಾರೆ.

ಪಕ್ಷದಲ್ಲಿ ತನ್ನ ಸ್ಥಾನವು "ಸಂತಾನಹರಣಕ್ಕೆ ಒಳಗಾದ ವರನಂತಿದೆ" ಎಂದು ಹಾರ್ದಿಕ್‌ ಪಟೇಲ್ ಹೇಳಿದ್ದರು. ಗುಜರಾತ್‌ನಲ್ಲಿ ಪಕ್ಷದ ರಾಜ್ಯ ನಾಯಕರು ತೆಗೆದುಕೊಳ್ಳುವ ನೇಮಕಾತಿಗಳು ಮತ್ತು ಪ್ರಮುಖ ನಿರ್ಧಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅವರು‌ ಈ ಹಿಂದೆ ಹೇಳಿದ್ದರು.

ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇಟಾಲಿಯಾ, “ಕಾಂಗ್ರೆಸ್ ಪಕ್ಷದಲ್ಲಿ ಹಾರ್ದಿಕ್ ಪಟೇಲ್ ಅತೃಪ್ತರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಗುಜರಾತ್‌ನ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಪರ್ಯಾಯವಾಗಿ ಅವರು ಕಾಂಗ್ರೆಸ್ ತೊರೆದು ಎಎಪಿ ಸೇರಬೇಕು ಎಂದು ನಾವು ಬಯಸುತ್ತೇವೆ. ನಾವು ಅವರಿಗೆ ಆಹ್ವಾನವನ್ನು ನೀಡುತ್ತೇವೆ. ಅವರು ಒಪ್ಪಿಕೊಂಡರೆ, ನಾವು ಖಂಡಿತವಾಗಿಯೂ ಅವರನ್ನು ಎಎಪಿ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಖೋಡಲ್ಧಾಮ್ ಟ್ರಸ್ಟ್‌ನ ನರೇಶ್ ಪಟೇಲ್ ಅವರಿಗೆ ನಾವು ಈಗಾಗಲೇ ಆಹ್ವಾನವನ್ನು ನೀಡಿದ್ದೇವೆ. ಸಾರ್ವಜನಿಕರಿಗಾಗಿ ಕೆಲಸ ಮಾಡಲು ಬಯಸುವ ಎಲ್ಲರಿಗೂ ನಾವು ನಮ್ಮ ಬಾಗಿಲು ತೆರೆದಿದ್ದೇವೆ ಎಂದು ಅವರು ಹೇಳಿದ್ದಾರೆ.

 “ಹಾರ್ದಿಕ್ ಪಟೇಲ್ ಅವರ ಕಾರ್ಯಶೈಲಿ ಮತ್ತು ಸಿದ್ಧಾಂತವು ಎಎಪಿ ಪಕ್ಷದ ಕಾರ್ಯಶೈಲಿಯನ್ನು ಹೋಲುತ್ತದೆ. ಅವರು ರಾಜ್ಯದ ಪಾಟಿದಾರ್ ಸಮುದಾಯದ ಯುವಕರಲ್ಲಿ ಸಾಮೂಹಿಕ ಪ್ರಭಾವವನ್ನು ಹೊಂದಿದ್ದಾರೆ. 2015 ರಲ್ಲಿ ಪ್ರಾರಂಭವಾದ ಪಾಟಿದಾರ್ ಮೀಸಲಾತಿ ಆಂದೋಲನದಲ್ಲಿ ಹಾರ್ದಿಕ್ ಪಟೇಲ್ ಯುವ ಪಾಟಿದಾರ್ ನಾಯಕನಾಗಿ ಹೊರ ಹೊಮ್ಮಿದ್ದು ನಾವು ನೋಡಿದ್ದೇವೆ.” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News