ರಾಜೀನಾಮೆ ಶಿಕ್ಷೆಯಲ್ಲ

Update: 2022-04-15 15:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಬಳಿಕ ಭ್ರಷ್ಟಾಚಾರ ಕಾರಣಕ್ಕಾಗಿ ರಾಜೀನಾಮೆ ನೀಡಿದ ಬಿಜೆಪಿಯ ಇನ್ನೊಬ್ಬ ಪ್ರಮುಖ ನಾಯಕ ಈಶ್ವರಪ್ಪ. ಪಂಚಾಯತ್ ರಾಜ್‌ನಂತಹ ಮಹತ್ವದ, ಜನಸಾಮಾನ್ಯರನ್ನು ಅತಿ ಹೆಚ್ಚು ತಲುಪಲು ಸಾಧ್ಯವಾಗಬಹುದಾದ ಖಾತೆಯನ್ನು ತನ್ನ ಬಳಿ ಇಟ್ಟುಕೊಂಡೂ, ಅನಗತ್ಯ ಕೋಮು ಉದ್ವಿಗ್ನ ರಾಜಕಾರಣಗಳಲ್ಲೇ ದಿನಗಳೆಯುತ್ತಿದ್ದ ಈಶ್ವರಪ್ಪ ಅವರ ರಾಜೀನಾಮೆಯಿಂದ ನಾಡಿಗೆ ನಷ್ಟವಾಗುವಂತಹದೇನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ, ಶಾಲಾ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಪೂರೈಸಿದ ಆರೋಪವನ್ನು ಈಶ್ವರಪ್ಪ ಹೊತ್ತುಕೊಂಡಿದ್ದರು ಮಾತ್ರವಲ್ಲ, ಅದನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು.

ಹರ್ಷ ಎನ್ನುವ ಕ್ರಿಮಿನಲ್ ಹಿನ್ನೆಲೆಯಿರುವ ಯುವಕನ ಕೊಲೆಯನ್ನು ರಾಜಕೀಯಕ್ಕೆ ಬಳಸಿಕೊಂಡು, ಶಿವಮೊಗ್ಗಕ್ಕೆ ಬೆಂಕಿ ಹಚ್ಚಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಿದ್ದರು. ಅಮಾಯಕರ ಸಾವನ್ನು ಮೆಟ್ಟಿಲಾಗಿಸಿಕೊಂಡು ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಈಶ್ವರಪ್ಪ ಅವರ ಪತನಕ್ಕೆ ಅಮಾಯಕನೊಬ್ಬನ ಸಾವೇ ಕಾರಣವಾದದ್ದು ವಿಪರ್ಯಾಸ. ಅದೇನೇ ಇರಲಿ, ‘ತಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಜಾಸತ್ತೆಗೆ ಸವಾಲು ಎಸೆದಿದ್ದ ಈಶ್ವರಪ್ಪ ಇದೀಗ ರಾಜೀನಾಮೆ ನೀಡುವ ಮೂಲಕ, ರಾಜ್ಯ ಸರಕಾರದ ಮಾನ, ಮರ್ಯಾದೆ ಸಂಪೂರ್ಣ ಕೊಚ್ಚಿಕೊಂಡು ಹೋಗುವುದನ್ನು ತಪ್ಪಿಸಿದ್ದಾರೆ. ಯಡಿಯೂರಪ್ಪ ತಲೆಮಾರಿನ ರಾಜಕಾರಣಿಗಳನ್ನೆಲ್ಲ ಗುಡಿಸಿ ಮೂಲೆಗೆ ಸೇರಿಸಿ, ಆರೆಸ್ಸೆಸ್‌ನ ಹೊಸ ತಲೆಮಾರಿನ ಯುವಕರನ್ನು ಮುನ್ನೆಲೆಗೆ ತರುವ ಪ್ರಯತ್ನಕ್ಕೆ ಈಶ್ವರಪ್ಪ ರಾಜೀನಾಮೆ ಪೂರಕವಾಗಿದೆ. ವಿರೋಧ ಪಕ್ಷದ ಒತ್ತಡಕ್ಕಿಂತಲೂ, ಬಿಜೆಪಿಯೊಳಗಿರುವ ಈಶ್ವರಪ್ಪ ವಿರೋಧಿಗಳ ಒತ್ತಡವೇ ಅವರನ್ನು ರಾಜೀನಾಮೆ ನೀಡುವಂತೆ ಮಾಡಿದೆ. ಆದರೆ ಈಶ್ವರಪ್ಪ ರಾಜೀನಾಮೆಯೊಂದಿಗೆ ಈ ಪ್ರಕರಣ ಮುಗಿಯಲಾದು. 

ಇಲ್ಲಿ, ಗುತ್ತಿಗೆದಾರನೊಬ್ಬ ‘ಈಶ್ವರಪ್ಪ ಅವರು ತನಗೆ ನ್ಯಾಯವಾಗಿ ಬಿಡುಗಡೆಯಾಗಬೇಕಾದ ಹಣವನ್ನು ಶೇ. 40 ಕಮಿಶನ್‌ಗಾಗಿ ತಡೆಹಿಡಿದಿದ್ದಾರೆ’ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಬರೆದ ಬಳಿಕವೂ ಪ್ರಕರಣವನ್ನು ಪರಿಶೀಲಿಸುವ ಕೆಲಸವನ್ನು ಸರಕಾರ ಮಾಡಲಿಲ್ಲ. ಬದಲಿಗೆ, ಪತ್ರ ಬರೆದ ಸಂತ್ರಸ್ತನ ಮೇಲೆ ಕೇಸು ದಾಖಲಿಸಲಾಗುತ್ತದೆ. ಹಣ ಬಿಡುಗಡೆಯಾಗುವುದು ಪಕ್ಕಕ್ಕಿರಲಿ, ರಾಜಕೀಯವಾಗಿ ಆತನಿಗೆ ಕಿರುಕುಳವಾಗುತ್ತದೆ. ಇಂತಹ ಅಸಹಾಯಕ ಸನ್ನಿವೇಶದಲ್ಲಿ ಆತ ‘‘ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ’ ಎಂಬ ಸಂದೇಶವನ್ನು ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ರಾಜಕೀಯ ದ್ವೇಷದಿಂದಲೋ ಅಥವಾ ಇನ್ನಿತರ ವೈಯಕ್ತಿಕ ಕಾರಣದಿಂದಲೋ ಒಬ್ಬ ರಾಜಕಾರಣಿಯ ವಿರುದ್ಧ ಆರೋಪವನ್ನು ಯಾರೂ ಮಾಡಬಹುದು. ಆದರೆ ಆತ್ಮಹತ್ಯೆ ಮಾಡಿಕೊಳ್ಳಲಾರರು. ಈಶ್ವರಪ್ಪರ ರಾಜೀನಾಮೆ ನಾಡಿಗೆ ಮಾಡುವ ಉಪಕಾರ ಖಂಡಿತ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ‘ರಾಜೀನಾಮೆ’ ಎನ್ನುವುದು ಈಶ್ವರಪ್ಪರಿಗೆ ನೀಡಿರುವ ಶಿಕ್ಷೆಯೂ ಅಲ್ಲ. ಶಿಕ್ಷೆಯೇನೇ ಆಗಬೇಕಾದರೂ, ಈಶ್ವರಪ್ಪರ ಬಂಧನವಾಗಬೇಕು. ಅವರ ವಿಚಾರಣೆಯಾಗಬೇಕು. ಇದಕ್ಕೆ ಸರಕಾರ ಸಿದ್ಧವಿದೆಯೇ ಎನ್ನುವ ಪ್ರಶ್ನೆ ಗೆ ಸಿಗುವ ಉತ್ತರ ಪ್ರಕರಣದ ಮುಂದಿನ ಗತಿಯನ್ನು ನಿರ್ಧರಿಸುತ್ತದೆ.

ಕೇವಲ ಈಶ್ವರಪ್ಪ ನಿಭಾಯಿಸುತ್ತಿದ್ದ ಖಾತೆಯಲ್ಲೇ 3,000 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡದೇ ಬಾಕಿ ಉಳಿದಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. 2022-23ನೇ ಸಾಲಿನ ನಿರ್ವಹಣಾ ಮುಂಗಡ ಪತ್ರ ಇದನ್ನು ಬಹಿರಂಗ ಪಡಿಸಿವೆ. ನರೇಗಾ ಮತ್ತು ಗ್ರಾಮೀಣ ಉದ್ಯೋಗಗಳಿಗೆಂದು ಮೀಸಲಿಟ್ಟ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗಿಲ್ಲ ಎನ್ನುವುದನ್ನು ಇದು ಹೇಳುತ್ತದೆ. ಜಲಜೀವನ್ ಮಿಷನ್‌ನ ಅನುದಾನವೂ ಉಳಿಕೆಯಾಗಿದೆ. ಒಂದೆಡೆ ಯೋಜನೆಗಳಿಗೆ ಸೂಕ್ತ ಅನುದಾನ ದೊರಕುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬರುತ್ತಿದ್ದರೆ, ಮಗದೊಂದೆಡೆ ಇರುವ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡುವಲ್ಲಿ ಸಚಿವಾಲಯಗಳು ವಿಫಲವಾಗುತ್ತಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ನಂತಹ ಮಹತ್ವದ ಖಾತೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸಿದರೂ ಸಮಯ ಸಾಕಾಗದು. ಆದರೆ ಸಚಿವ ಈಶ್ವರಪ್ಪ ಸದಾ, ಕೋಮು ಉದ್ವಿಗ್ನಕಾರಿ ಯೋಜನೆಗಳಲ್ಲೇ ಸಮಯ ವ್ಯಯಿಸುತ್ತಿದ್ದರು. ಹೀಗಿರುವಾಗ ಗ್ರಾಮೀಣ ಪ್ರದೇಶದ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಮುಂದೆ ಸಾಗುವುದಾದರೂ ಹೇಗೆ?

ಇದೇ ಸಂದರ್ಭದಲ್ಲಿ ತನಿಖೆ ಕೇವಲ ಈಶ್ವರಪ್ಪ ಅವರನ್ನು ಮಾತ್ರ ಕೇಂದ್ರೀಕರಿಸಿ ನಡೆಯಬಾರದು. ಈ ಹಿಂದೆ ಭ್ರಷ್ಚಾಚಾರದಲ್ಲಿ ಸರಕಾರದೊಳಗಿರುವ ಹಲವು ರಾಜಕಾರಣಿಗಳ ಹೆಸರು ಕೇಳಿ ಬಂದಿದ್ದವು. ಅವರಲ್ಲಿ ಮುಖ್ಯವಾಗಿ, ಸಚಿವ ಎಚ್. ನಾಗೇಶ್, ಬಿ.ಸಿ. ಪಾಟೀಲ್, ಆರ್. ಅಶೋಕ್ ಮೊದಲಾದವರ ಮೇಲೆ ಬೇರೆ ಬೇರೆ ಆರೋಪಗಳು ಕೇಳಿ ಬಂದಿದ್ದವು. ಇದೀಗ ಕಮಿಷನ್ ದಂಧೆಯಲ್ಲಿ ‘ಸಚಿವ ಸುಧಾಕರ್ ಫೈಲ್ಸ್’ ಬಹಿರಂಗಪಡಿಸುವುದಾಗಿ ಗುತ್ತಿಗೆದಾರರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಕಮಿಷನ್ ದಂಧೆಗೆ ಕಡಿವಾಣ ಹಾಕದೇ ಇದ್ದರೆ ರಾಜ್ಯಾದ್ಯಂತ ಒಂದು ತಿಂಗಳು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇದು ಕೇವಲ ಗುತ್ತಿಗೆದಾರರ ಸಮಸ್ಯೆ ಅಷ್ಟೇ ಅಲ್ಲ. ಗುತ್ತಿಗೆ ದಾರರು ಕಮಿಷನ್ ಲಾಬಿಗೆ ಹೆಚ್ಚು ಹೆಚ್ಚು ಬಲಿಯಾದಂತೆ ಕಾಮಗಾರಿಗಳು ಹೆಚ್ಚು ಕಳಪೆಯಾಗುತ್ತವೆ. ಅಥವಾ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತವೆ. ಇವು ನಾಡಿನ ಅಭಿವೃದ್ಧಿಯ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಬೀರುತ್ತವೆ. ಈ ಕಾರಣದಿಂದ, ಎಲ್ಲ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಡುಗಡೆಯಾಗದೆ ಬಾಕಿ ಉಳಿದಿರುವ ಹಣ ಮತ್ತು ಅದರ ಕಾರಣಗಳು ತನಿಖೆಗೊಳಪಡಬೇಕು. ಹಾಗೆಯೇ ಗುತ್ತಿಗೆದಾರರ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡು, ಸ್ವತಂತ್ರ ತನಿಖಾ ಸಂಸ್ಥೆಯೊಂದನ್ನು ನೇಮಿಸಿ ಶೇ. 40 ಕಮಿಷನ್‌ನ ಹಿಂದಿರುವ ಹೆಗ್ಗಣಗಳನ್ನು ಬಿಲಗಳಿಂದ ಹೊರ ಹಾಕುವ ಕೆಲಸವನ್ನು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News