×
Ad

‘ಸಸ್ಯಾಹಾರಿ ಭಾರತೀಯ ದೇಶ’ವೆಂಬ ಸುಳ್ಳು

Update: 2022-04-15 11:03 IST

 ಸಮೀಕ್ಷೆ ನಡೆಸಲಾದ ಕುಟುಂಬಗಳ ಪೈಕಿ ಶೇ. 65 ಕುಟುಂಬಗಳಲ್ಲಿ ದಂಪತಿಯರಲ್ಲಿ ಇಬ್ಬರೂ ಮಾಂಸಾಹಾರಿಗಳು ಹಾಗೂ ಕೇವಲ ಶೇ. 20 ಕುಟುಂಬಗಳಲ್ಲಿ ದಂಪತಿಯರಲ್ಲಿ ಇಬ್ಬರೂ ಸಸ್ಯಾಹಾರಿಗಳು. ಆದರೆ, ಶೇ. 12 ಕುಟುಂಬಗಳಲ್ಲಿ ಗಂಡ ಮಾಂಸಾಹಾರಿಯಾದರೆ, ಹೆಂಡತಿ ಸಸ್ಯಾಹಾರಿ ಹಾಗೂ ಕೇವಲ ಶೇ. 3 ಕುಟುಂಬಗಳಲ್ಲಿ ಹೆಂಡತಿ ಮಾಂಸಾಹಾರಿ ಮತ್ತು ಗಂಡ ಸಸ್ಯಾಹಾರಿ.

ಭಾರತೀಯರು ಏನು ತಿನ್ನುತ್ತಾರೆ ಎಂಬ ಕುರಿತ ಅತ್ಯಂತ ಸಾಮಾನ್ಯ ಭ್ರಮೆಗಳು ಯಾವುದು? ಭಾರತವು ಬಹುತೇಕ ಸಸ್ಯಾಹಾರಿ ದೇಶವೆನ್ನುವುದು ಖಂಡಿತವಾಗಿಯೂ ಅತ್ಯಂತ ದೊಡ್ಡ ಭ್ರಮೆಯಾಗಿದೆ. ಆದರೆ ಅದು ಹಾಗೆ ಅಲ್ಲವೇ ಅಲ್ಲ.

ಮೂರನೇ ಒಂದಕ್ಕಿಂತ ಹೆಚ್ಚಿನ ಭಾರತೀಯರು ಸಸ್ಯಾಹಾರಿ ಗಳಾಗಿದ್ದಾರೆ ಎಂಬುದಾಗಿ ಹಿಂದಿನ ‘ಗಂಭೀರವಲ್ಲದ’ ಅಂದಾಜುಗಳು ಹೇಳುತ್ತವೆ. ಮೂರು ಬೃಹತ್ ಪ್ರಮಾಣದ ಸರಕಾರಿ ಸಮೀಕ್ಷೆಗಳು, ಶೇ. 23ರಿಂದ ಶೇ. 37 ಭಾರತೀಯರು ಸಸ್ಯಾಹಾರಿಗಳು ಎಂಬುದಾಗಿ ಅಂದಾಜಿಸಿವೆ. ಆದರೆ, ಸ್ವತಃ ಈ ಸಮೀಕ್ಷೆಗಳೂ ದೊಡ್ಡದೊಂದು ವಿಷಯವನ್ನೇನೂ ಬಹಿರಂಗಪಡಿಸಿಲ್ಲ.

ಆದರೆ, ಅಮೆರಿಕದ ಮಾನವಶಾಸ್ತ್ರಜ್ಞ ಬಲ್ಮುರಿ ನಟರಾಜನ್ ಮತ್ತು ಭಾರತದ ಅರ್ಥಶಾಸ್ತ್ರಜ್ಞ ಸೂರಜ್ ಜಾಕೋಬ್ ನಡೆಸಿರುವ ಹೊಸ ಸಂಶೋಧನೆಯೊಂದು ಬೇರೆಯದೇ ಕತೆಯನ್ನು ಹೇಳಿವೆ. ಮೇಲಿನ ಸರಕಾರಿ ಸಮೀಕ್ಷೆಗಳು ‘‘ಸಾಂಸ್ಕೃತಿಕ ಮತ್ತು ರಾಜಕೀಯ ಒತ್ತಡಗಳಿಗೊಳಗಾಗಿ’’ ತಮ್ಮ ಅಂದಾಜುಗಳನ್ನು ಸಾಕಷ್ಟು ಹಿಗ್ಗಿಸಿ ಹೇಳಿವೆ ಎಂಬುದಾಗಿ ನೂತನ ಸಮೀಕ್ಷೆ ಹೇಳಿದೆ ಹಾಗೂ ಅದಕ್ಕೆ ಪುರಾವೆಗಳನ್ನೂ ಒದಗಿಸಿದೆ. ಹಾಗಾಗಿ, ಜನರು ತಾವು ಮಾಂಸ, ಅದರಲ್ಲೂ ಮುಖ್ಯವಾಗಿ ದನದ ಮಾಂಸ ತಿನ್ನುವುದನ್ನು ಹೆಚ್ಚಾಗಿ ದಾಖಲಿಸುವುದಿಲ್ಲ ಹಾಗೂ ಅದೇ ವೇಳೆ, ಸಸ್ಯಾಹಾರಿ ಆಹಾರ ತಿನ್ನುವುದನ್ನು ಹೆಚ್ಚೆಚ್ಚು ದಾಖಲಿಸುತ್ತಾರೆ.

ಈ ಎಲ್ಲ ಸಂಗತಿಗಳನ್ನು ಗಮನಕ್ಕೆ ತೆಗೆದುಕೊಂಡರೆ, ಸುಮಾರು ಶೇ. 20ರಷ್ಟು ಭಾರತೀಯರು ಮಾತ್ರ ನಿಜವಾಗಿ ಸಸ್ಯಾಹಾರಿಗಳು ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಇದು ಸಾಮಾನ್ಯವಾಗಿ ಪ್ರಚಲಿತ ದಲ್ಲಿರುವ ಅಂಕಿ-ಸಂಖ್ಯೆಗಳಿಗಿಂತ ತುಂಬಾ ಕಡಿಮೆಯಾಗಿದೆ.

ಭಾರತೀಯ ಜನಸಂಖ್ಯೆಯ ಶೇ. 80ರಷ್ಟಿರುವ ಹಿಂದೂಗಳು ಪ್ರಮುಖ ಮಾಂಸಾಹಾರಿಗಳಾಗಿದ್ದಾರೆ. ಮುಂದುವರಿದ, ಮೇಲ್ಜಾತಿಯ ಭಾರತೀಯರಲ್ಲೂ ಕೇವಲ ಮೂರನೇ ಒಂದು ಭಾಗ ಸಸ್ಯಾಹಾರಿಗಳು.

ಸಸ್ಯಾಹಾರಿ ಕುಟುಂಬಗಳು ಹೆಚ್ಚಿನ ಆದಾಯವನ್ನು ಹೊಂದಿವೆ ಹಾಗೂ ಅವರು ಹೆಚ್ಚಿನ ಆಹಾರವನ್ನು ತಿನ್ನುತ್ತಾರೆ. ಅವರು ಮಾಂಸ ತಿನ್ನುವ ಕುಟುಂಬಗಳಿಗಿಂತ ಹೆಚ್ಚು ಶ್ರೀಮಂತರು. ಕೆಳ ಜಾತಿಗಳ ಜನರು, ದಲಿತರು ಮತ್ತು ಬುಡಕಟ್ಟು ಜನರು ಮುಖ್ಯವಾಗಿ ಮಾಂಸಾಹಾರಿಗಳು.

ವಿವಿಧ ನಗರಗಳ ಸಸ್ಯಾಹಾರಿ ಜನಸಂಖ್ಯೆಯ ಪ್ರಮಾಣವನ್ನು ಇಲ್ಲಿ ನೀಡಲಾಗಿದೆ:

ಇಂದೋರ್- ಶೇ. 49, ಮೀರತ್- ಶೇ. 36, ದಿಲ್ಲಿ- ಶೇ. 30, ನಾಗಪುರ- ಶೇ. 22, ಮುಂಬೈ- ಶೇ. 18, ಹೈದರಾಬಾದ್- ಶೇ. 11, ಚೆನ್ನೈ- ಶೇ. 6, ಕೋಲ್ಕತಾ- ಶೇ. 4. ಈ ಮಾಹಿತಿಯ ಮೂಲ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ.

ಅದೇ ವೇಳೆ, ಜನರು ದನದ ಮಾಂಸ ತಿನ್ನುವ ಪ್ರಮಾಣ ವರದಿಯಾಗಿರುವುದಕ್ಕಿಂತ ಹೆಚ್ಚಿದೆ ಎನ್ನುವುದನ್ನು ಡಾ. ನಟರಾಜನ್ ಮತ್ತು ಡಾ. ಜಾಕೋಬ್ ಪತ್ತೆಹಚ್ಚಿದ್ದಾರೆ. ಕನಿಷ್ಠ ಶೇ. 7 ಭಾರತೀಯರು ದನದ ಮಾಂಸ ತಿನ್ನುತ್ತಾರೆ ಎಂಬುದಾಗಿ ಸರಕಾರಿ ಸಮೀಕ್ಷೆಗಳು ಹೇಳಿವೆ.

ಆದರೆ, ಅಧಿಕೃತ ಅಂಕಿ-ಅಂಶಗಳಲ್ಲಿ, ದನದ ಮಾಂಸ ತಿನ್ನುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಯಾಕೆಂದರೆ, ‘‘ಭಾರತದಲ್ಲಿ ದನದ ಮಾಂಸ ಸೇವನೆಯ ವಿರುದ್ಧ ರಾಜಕೀಯ ಮತ್ತು ಸಾಂಸ್ಕೃತಿಕ ಅಭಿಯಾನ ನಡೆಯುತ್ತಿರುವುದರಿಂದ ಜನರು ತಾವು ದನದ ಮಾಂಸ ತಿನ್ನುತ್ತಿದ್ದರೂ ಅದನ್ನು ಹೊರಗೆ ಹೇಳಿಕೊಳ್ಳುವುದಿಲ್ಲ’’ ಎಂದು ಅವರು ಹೇಳುತ್ತಾರೆ.

ನರೇಂದ್ರ ಮೋದಿಯ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಸಸ್ಯಾಹಾರವನ್ನು ಉತ್ತೇಜಿಸುತ್ತಿದೆ ಹಾಗೂ ದನಗಳನ್ನು ರಕ್ಷಿಸಬೇಕು ಎಂಬುದಾಗಿ ಭಾವಿಸುತ್ತದೆ. ಯಾಕೆಂದರೆ, ದೇಶದ ಬಹುಸಂಖ್ಯಾತ ಹಿಂದೂಗಳು ದನಗಳನ್ನು ಪವಿತ್ರ ಎಂಬುದಾಗಿ ಪರಿಗಣಿಸುತ್ತಾರೆ. ಈಗಾಗಲೇ 10ಕ್ಕಿಂತ ಹೆಚ್ಚಿನ ರಾಜ್ಯಗಳು ಗೋಹತ್ಯೆಯನ್ನು ನಿಷೇಧಿಸಿವೆ. ಮೋದಿಯ ಆಳ್ವಿಕೆಯಲ್ಲಿ, ಗೋರಕ್ಷಣೆ ಮಾಡುವುದಾಗಿ ಹೇಳಿಕೊಳ್ಳುವ ಗುಂಪುಗಳು ಕಾನೂನಿನ ಯಾವುದೇ ಭಯವಿಲ್ಲದೆ ದನ ಸಾಗಾಟ ಮಾಡುತ್ತಿದ್ದ ಜನರನ್ನು ಕೊಂದಿವೆ.

ದಲಿತರು, ಮುಸ್ಲಿಮರು ಮತ್ತು ಕ್ರೈಸ್ತರು ಸೇರಿದಂತೆ ಲಕ್ಷಾಂತರ ಭಾರತೀಯರು ಬೀಫ್ ತಿನ್ನುತ್ತಾರೆ ಎನ್ನುವುದು ವಾಸ್ತವ. ಉದಾಹರಣೆಗೆ; ಕೇರಳದ ಸುಮಾರು 70 ಸಮುದಾಯಗಳು ದುಬಾರಿ ಆಡಿನ ಮಾಂಸಕ್ಕಿಂತ ದನದ ಮಾಂಸವನ್ನು ಆಯ್ಕೆ ಮಾಡುತ್ತವೆ.

ವಾಸ್ತವವಾಗಿ, ಸುಮಾರು ಶೇ. 15 ಭಾರತೀಯರು ಅಥವಾ ಸುಮಾರು 18 ಕೋಟಿ ಜನರು ದನದ ಮಾಂಸ ತಿನ್ನುತ್ತಾರೆ ಎಂಬುದಾಗಿ ಡಾ. ನಟರಾಜನ್ ಮತ್ತು ಡಾ. ಜಾಕೋಬ್ ಹೇಳುತ್ತಾರೆ. ಇದು ಅಧಿಕೃತ ಸಮೀಕ್ಷೆಗಳಿಗಿಂತ ಶೇ. 96ರಷ್ಟು ಹೆಚ್ಚಾಗಿದೆ.

ಆಹಾರ ಪದ್ಧತಿಗಳ ತಪ್ಪು ಗುರುತು

ಕೆಲವು ನಗರಗಳ ಆಹಾರ ಪದ್ಧತಿಯನ್ನು ತಪ್ಪಾಗಿ ಗುರುತಿಸಿದ ಘಟನೆಗಳೂ ನಡೆದಿವೆ.

ದಿಲ್ಲಿಯ ನಿವಾಸಿಗಳ ಪೈಕಿ ಮೂರನೇ ಒಂದು ಭಾಗ ಸಸ್ಯಾಹಾರಿಗಳು ಎಂಬುದಾಗಿ ಭಾವಿಸಲಾಗಿದೆ. ಹಾಗಾಗಿ, ಭಾರತದ ಬಟರ್ ಚಿಕನ್ ರಾಜಧಾನಿ ಎಂಬ ಅದರ ಹೆಗ್ಗಳಿಕೆ ಸರಿಯಾಗಿಯೇ ಇದೆ.

 ಆದರೆ, ಭಾರತದ ‘ದಕ್ಷಿಣ ಭಾರತೀಯ ಸಸ್ಯಾಹಾರಿ ಊಟ’ದ ಕೇಂದ್ರ ಎಂಬ ಚೆನ್ನೈಯ ಬಿರುದು ಸಂಪೂರ್ಣವಾಗಿ ತಪ್ಪು. ಯಾಕೆಂದರೆ, ನಗರದ ಶೇ. 6 ನಿವಾಸಿಗಳು ಮಾತ್ರ ಸಸ್ಯಾಹಾರಿಗಳು ಎಂಬುದಾಗಿ ಒಂದು ಸಮೀಕ್ಷೆ ಹೇಳುತ್ತದೆ.

 ಪಂಜಾಬ್ ‘ಚಿಕನ್ ಇಷ್ಟಪಡುವ ರಾಜ್ಯ’ ಎಂಬುದಾಗಿ ಹೆಚ್ಚಿನವರು ಭಾವಿಸುತ್ತಾರೆ. ಆದರೆ, ಆ ರಾಜ್ಯದ ಶೇ. 75 ಜನರು ಸಸ್ಯಾಹಾರಿಗಳು.

ಹಾಗಾದರೆ, ಭಾರತವು ಹೆಚ್ಚಾಗಿ ಸಸ್ಯಾಹಾರಿ ದೇಶ ಎಂಬ ಸುಳ್ಳನ್ನು ಇಷ್ಟೊಂದು ಯಶಸ್ವಿಯಾಗಿ ಹೇಗೆ ಹರಡಲಾಗಿದೆ?

ವಿಭಿನ್ನ ಆಹಾರ ಅಭ್ಯಾಸಗಳಿರುವ ಸಮಾಜದಲ್ಲಿ, ಪ್ರತಿ ಕೆಲವು ಕಿಲೋಮೀಟರ್‌ಗಳ ಅಂತರದಲ್ಲಿ ಮತ್ತು ಸಾಮಾಜಿಕ ಗುಂಪೊಂದರ ಒಳಗೇ ಆಹಾರ ಪದ್ಧತಿಗಳು ಬದಲಾಗುತ್ತವೆ. ಆದರೂ ಈ ಸಾಮಾಜಿಕ ಗುಂಪುಗಳ ಆಹಾರ ಪದ್ಧತಿಯನ್ನು ಸಾಮಾನ್ಯೀಕರಣಗೊಳಿಸಬೇಕಾದಾಗ, ಅವುಗಳ ಪರವಾಗಿ ಯಾರು ಮಾತನಾಡುತ್ತಾರೋ ಅವರ ಆಹಾರ ಪದ್ಧತಿಯೇ ಸಾಮಾನ್ಯ ಆಹಾರ ಪದ್ಧತಿಯಾಗುತ್ತದೆ ಎಂದು ಡಾ. ನಟರಾಜನ್ ಮತ್ತು ಡಾ. ಜಾಕೋಬ್ ಹೇಳುತ್ತಾರೆ.

‘‘ಸಮುದಾಯಗಳನ್ನು, ವಲಯಗಳನ್ನು ಅಥವಾ ಇಡೀ ದೇಶವನ್ನು ಪ್ರತಿನಿಧಿಸುವ ಅಧಿಕಾರವೇ ಇಂಥ ತಪ್ಪುಗಳಿಗೆ ಅವಕಾಶ ಮಾಡಿಕೊಡುತ್ತವೆ. ಪ್ರಭಾವಿಗಳ ಆಹಾರ ಪದ್ಧತಿಯೇ ಇಡೀ ಸಮುದಾಯದ ಆಹಾರ ಪದ್ಧತಿಯಾಗಿ ಬಿಡುತ್ತದೆ’’ ಎಂದರು.

‘‘ಇದಕ್ಕೆ ‘ನಾನ್-ವೆಜಿಟೇರಿಯನ್’ ಎಂಬ ಪದವೇ ಉತ್ತಮ ಉದಾಹರಣೆ. ಇದು ಸಸ್ಯಾಹಾರಿ ವರ್ಗಗಳ ಸಾಮಾಜಿಕ ಪ್ರಾಬಲ್ಯವನ್ನು ಸೂಚಿಸುತ್ತದೆ. ಈ ಅಧಿಕಾರವನ್ನು ಬಳಸಿ ಅವರು ‘ಶ್ರೇಣೀಕೃತ ಆಹಾರ ವ್ಯವಸ್ಥೆ’ಯೊಂದನ್ನು ಸೃಷ್ಟಿಸಬಲ್ಲರು ಹಾಗೂ ಅದಕ್ಕಾಗಿ ಆಹಾರಗಳನ್ನು ವರ್ಗೀಕರಿಸಬಲ್ಲರು. ಈ ಶ್ರೇಣೀಕೃತ ಆಹಾರ ವ್ಯವಸ್ಥೆಯಲ್ಲಿ ಸಸ್ಯಾಹಾರವೇ ಪ್ರಧಾನ ಹಾಗೂ ಅದು ಮಾಂಸಾಹಾರಕ್ಕಿಂತ ಹೆಚ್ಚಿನ ಸ್ಥಾನಮಾನ ಹೊಂದಿದೆ. ಇದು ಬಿಳಿಯರೇ ಸೃಷ್ಟಿಸಿದ ಪದ ‘ನಾನ್-ವೈಟ್ಸ್’ (ಬಿಳಿಯೇತರರು)ಗೆ ಸಮವಾಗಿದೆ. ತಾವು ವಸಾಹತುಗಳನ್ನು ಸ್ಥಾಪಿಸಿದ ಸ್ಥಳಗಳ ವಿಭಿನ್ನ ಹಿನ್ನೆಲೆಗಳ ಜನರನ್ನು ಬಿಳಿಯರು ಒಂದೇ ಪದದಲ್ಲಿ ಹೀಗೆ ಬಣ್ಣಿಸಿದರು’’ ಎಂದು ಅವರು ನುಡಿದರು.

ವಲಸೆ

ಆಹಾರ ಪದ್ಧತಿಗಳ ತಪ್ಪು ಗುರುತಿಸುವಿಕೆಗೆ ಎರಡನೆಯ ಕಾರಣ ವಲಸೆ. ದಕ್ಷಿಣ ಭಾರತೀಯರು ಉತ್ತರ ಮತ್ತು ಮಧ್ಯ ಭಾರತಕ್ಕೆ ವಲಸೆ ಹೋದಾಗ ಅವರ ಆಹಾರ ಪದ್ಧತಿಯೇ ಇಡೀ ದಕ್ಷಿಣ ಭಾರತದ ಆಹಾರ ಪದ್ಧತಿಯಾಗಿ ಬಿಡುತ್ತದೆ. ಉತ್ತರ ಭಾರತೀಯರು ದೇಶದ ಇತರ ಭಾಗಗಳಿಗೆ ವಲಸೆ ಹೋಗುವಾಗಲೂ ಇದೇ ಸಂಭವಿಸುತ್ತದೆ.

ಇಂತಹ ಕೆಲವು ತಪ್ಪು ಕಲ್ಪನೆಗಳಿಗೆ ಹೊರಗಿನವರು ಕಾರಣ. ಉತ್ತರ ಭಾರತೀಯರು ಕೆಲವೇ ಕೆಲವು ದಕ್ಷಿಣ ಭಾರತೀಯರನ್ನು ಭೇಟಿಯಾಗಿ ಅವರೇ ದಕ್ಷಿಣ ಭಾರತದ ಸಮಗ್ರ ಪ್ರತಿನಿಧಿಗಳು ಎಂಬುದಾಗಿ ಭಾವಿಸುತ್ತಾರೆ ಹಾಗೂ ವಲಯದ ವೈವಿಧ್ಯದ ಬಗ್ಗೆ ಅವರು ಯೋಚಿಸುವುದಿಲ್ಲ. ಇದು ಕೆಲವೇ ಕೆಲವು ಉತ್ತರ ಭಾರತೀಯರನ್ನು ಭೇಟಿಯಾಗಿ ಅವರೇ ಇಡೀ ವಲಯದ ಪ್ರತಿನಿಧಿಗಳು ಎಂಬುದಾಗಿ ಪರಿಗಣಿಸುವ ದಕ್ಷಿಣ ಭಾರತೀಯರಿಗೂ ಅನ್ವಯಿಸುತ್ತದೆ.

ಇದಕ್ಕೆ ವಿದೇಶಿ ಮಾಧ್ಯಮಗಳೂ ಕಾರಣ ಎಂದು ಸಂಶೋಧಕರು ಹೇಳುತ್ತಾರೆ. ಸಮಾಜದ ಕೆಲವು ಪ್ರಭಾವಿಗಳ ಮೂಲಕ ಮಾಧ್ಯಮಗಳು ಇಡೀ ಸಮಾಜವನ್ನು ಗುರುತಿಸುತ್ತವೆ ಎಂದು ಅವರು ಹೇಳಿದರು.

ಭಾರತೀಯರು ಕೋಳಿ ಮಾಂಸವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂಬುದಾಗಿ ಭಾವಿಸಲಾಗಿದೆ.

ಪುರುಷ ಮತ್ತು ಮಹಿಳೆಯರ ಆಹಾರ ಅಭ್ಯಾಸಗಳಲ್ಲಿಯೂ ವ್ಯತ್ಯಾಸ ಇರುವುದನ್ನು ಅಧ್ಯಯನ ತೋರಿಸಿದೆ. ಉದಾಹರಣೆಗೆ; ಪುರುಷರಿಗಿಂತ ಹೆಚ್ಚು ಮಹಿಳೆಯರು ತಾವು ಸಸ್ಯಾಹಾರಿಗಳು ಎಂಬುದಾಗಿ ಹೇಳುತ್ತಾರೆ.

‘‘ಇದನ್ನು ಆಂಶಿಕವಾಗಿ ಹೀಗೆ ವಿವರಿಸಬಹುದಾಗಿದೆ. ಹೆಚ್ಚು ಪುರುಷರು ಮನೆಯಿಂದ ಹೊರಗೆ ತಿನ್ನುತ್ತಾರೆ. ಈ ವಿಷಯದಲ್ಲಿ ಅವರಿಗೆ ಹೆಚ್ಚು ನೈತಿಕ ವಿನಾಯಿತಿ ಇದೆ. ಆದರೆ ಮಹಿಳೆಯರ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಆದರೆ, ಹೊರಗೆ ತಿನ್ನುವುದು ಒಂದೇ ಮಾಂಸಾಹಾರ ಸೇವನೆಗೆ ಕಾರಣವಾಗುತ್ತದೆ ಎಂದು ಹೇಳಲಾಗದು’’ ಎಂದು ಸಂಶೋಧಕರು ಹೇಳುತ್ತಾರೆ.

ಪಿತೃಪ್ರಧಾನ ವ್ಯವಸ್ಥೆ ಮತ್ತು ರಾಜಕೀಯವೂ ಇದಕ್ಕೆ ಕಾರಣವಾಗಿರಬಹುದು.

‘‘ಸಸ್ಯಾಹಾರದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಹೊರೆಯನ್ನು ಅನುಪಾತವನ್ನು ಮೀರಿ ಮಹಿಳೆಯರ ಮೇಲೆ ಹೇರಲಾಗಿದೆ’’ ಎಂದು ಡಾ. ನಟರಾಜನ್ ಮತ್ತು ಡಾ. ಜಾಕೋಬ್ ಹೇಳುತ್ತಾರೆ.

 ಸಮೀಕ್ಷೆ ನಡೆಸಲಾದ ಕುಟುಂಬಗಳ ಪೈಕಿ ಶೇ. 65 ಕುಟುಂಬಗಳಲ್ಲಿ ದಂಪತಿಯರಲ್ಲಿ ಇಬ್ಬರೂ ಮಾಂಸಾಹಾರಿಗಳು ಹಾಗೂ ಕೇವಲ ಶೇ. 20 ಕುಟುಂಬಗಳಲ್ಲಿ ದಂಪತಿಯರಲ್ಲಿ ಇಬ್ಬರೂ ಸಸ್ಯಾಹಾರಿಗಳು. ಆದರೆ, ಶೇ. 12 ಕುಟುಂಬಗಳಲ್ಲಿ ಗಂಡ ಮಾಂಸಾಹಾರಿಯಾದರೆ, ಹೆಂಡತಿ ಸಸ್ಯಾಹಾರಿ ಹಾಗೂ ಕೇವಲ ಶೇ. 3 ಕುಟುಂಬಗಳಲ್ಲಿ ಹೆಂಡತಿ ಮಾಂಸಾಹಾರಿ ಮತ್ತು ಗಂಡ ಸಸ್ಯಾಹಾರಿ.

ಹೆಚ್ಚಿನ ಭಾರತೀಯರು ಯಾವುದಾದರೂ ಮಾಂಸ- ಮುಖ್ಯವಾಗಿ ಕೋಳಿ ಅಥವಾ ಆಡು-ಕುರಿಯ ಮಾಂಸವನ್ನು ನಿಯಮಿತವಾಗಿ ಅಥವಾ ಸಾಂದರ್ಭಿಕವಾಗಿ ಸೇವಿಸುತ್ತಾರೆ ಎನ್ನುವುದು ಸ್ಪಷ್ಟ. ಸಸ್ಯಾಹಾರ ಸೇವನೆಯನ್ನು ಹೆಚ್ಚಿನವರು ಅಭ್ಯಾಸ ಮಾಡಿಕೊಂಡಿಲ್ಲ.

ಹಾಗಾದರೆ, ಭಾರತ ಮತ್ತು ಭಾರತೀಯರನ್ನು ಹೊರ ಜಗತ್ತಿನಲ್ಲಿ ಪ್ರತಿನಿಧಿಸುವಾಗ ಸಸ್ಯಾಹಾರವು ಯಾಕೆ ಮುನ್ನೆಲೆಗೆ ಬರುತ್ತದೆ? ಅಗಾಧ ಸಂಕೀರ್ಣ ಮತ್ತು ಬಹುಸಾಂಸ್ಕೃತಿಕ ಸಮಾಜದಲ್ಲಿ, ನಿರ್ದಿಷ್ಟ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆನ್ನುವ ಬಲವಂತಕ್ಕೂ ಇದಕ್ಕೂ ಸಂಬಂಧವಿದೆಯೇ?

ಕೃಪೆ:www.bbc.com

Writer - ಸೌತಿಕ್ ಬಿಸ್ವಾಸ್

contributor

Editor - ಸೌತಿಕ್ ಬಿಸ್ವಾಸ್

contributor

Similar News