×
Ad

ಹಿಂಸೆಯನ್ನು ಸೋಲಿಸಿದ ಮಾನವೀಯತೆ

Update: 2022-04-15 11:18 IST

ಉದ್ರಿಕ್ತ ಗುಂಪಿನ ಅಬ್ಬರಕ್ಕೆ ಮಣಿಯದ ಹಿಂದೂ ಮಹಿಳೆಯೋರ್ವಳು ಮುಸ್ಲಿಮ್ ವ್ಯಾಪಾರಿಗಳನ್ನು ರಕ್ಷಿಸಿದ ಮಾನವೀಯ ಘಟನೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿದೆ.

ಎ.2ರಂದು ಕರೌಲಿಯಲ್ಲಿ ಯುಗಾದಿ ಪ್ರಯುಕ್ತ ಬೈಕ್ ರ್ಯಾಲಿ ನಡೆದಿತ್ತು. ಅತ್ವಾರಾದ ಮುಸ್ಲಿಮ್ ಬಾಹುಳ್ಯದ ಪ್ರದೇಶದಿಂದ ಹಾದುಹೋಗುತ್ತಿದ್ದಾಗ ಕೋಮುದ್ವೇಷವನ್ನು ಪ್ರಚೋದಿಸುವ ಹಾಡುಗಳು ರ್ಯಾಲಿಯಲ್ಲಿ ಮೊಳಗುತ್ತಿದ್ದವು. ಈ ವೇಳೆ ರ್ಯಾಲಿಯತ್ತ ಕಲ್ಲುಗಳು ತೂರಿ ಬಂದಿದ್ದವು. ಪರಿಣಾಮವಾಗಿ ಮುಂದಿನ ಮೂರು ಗಂಟೆಗಳಲ್ಲಿ ದಶಕಗಳಲ್ಲಿಯೇ ಕಂಡಿರದ ತೀವ್ರ ಕೋಮು ಹಿಂಸಾಚಾರಕ್ಕೆ ಕರೌಲಿ ಪಟ್ಟಣ ಸಾಕ್ಷಿಯಾಗಿತ್ತು. ದಿನವಿಡೀ ಕರೌಲಿಯಾದ್ಯಂತ ಉದ್ರಿಕ್ತ ಗುಂಪುಗಳು ಅಂಗಡಿಗಳಿಗೆ ಬೆಂಕಿ ಹಚ್ಚುತ್ತ, ಘೋಷಣೆಗಳನ್ನು ಕೂಗುತ್ತ ದಾಂಧಲೆಗಳನ್ನು ನಡೆಸಿದ್ದವು. ಹಿಂಸಾಚಾರದಲ್ಲಿ ಕನಿಷ್ಠ 35 ಜನರು ಗಾಯಗೊಂಡಿದ್ದರು.

ಇದೇ ವೇಳೆ ಪಟ್ಟಣದ ಮಾರುಕಟ್ಟೆ ಸಂಕೀರ್ಣದ ಹೊರಗೆ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಕೇಸರಿ ಶಾಲುಗಳನ್ನು ಧರಿಸಿಕೊಂಡು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದ ಉದ್ರಿಕ್ತ ಗುಂಪಿನೆದುರು ಮಧುಲಿಕಾ ರಜಪೂತ (48) ಗೋಡೆಯಂತೆ ನಿಂತುಕೊಂಡಿದ್ದರು. ಅವರ ಕುಟುಂಬವು ಈ ಸಂಕೀರ್ಣದಲ್ಲಿ ಹಲವಾರು ಅಂಗಡಿಗಳನ್ನು ಹೊಂದಿದೆ. ಸಂಕೀರ್ಣದಲ್ಲಿ ‘ಅಡಗಿಕೊಂಡಿರಬಹುದಾದ ಇತರರನ್ನು’ ಹೊರಗೆಳೆಯಲು ಒಳ ಪ್ರವೇಶಿಸಿ ಪರಿಶೀಲಿಸಲು ಗುಂಪು ಪಟ್ಟು ಹಿಡಿದಿತ್ತು.

ಅಂದಿನ ಘಟನಾವಳಿಯನ್ನು ಮೆಲುಕು ಹಾಕಿದ ಮಧುಲಿಕಾ, ‘‘ಯಾರನ್ನೂ ಒಳಗೆ ಬಿಡುವುದಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಒಳಗೆ ಯಾರಾದರೂ ಬಚ್ಚಿಟ್ಟುಕೊಂಡಿದ್ದಾರೆಯೇ ಎಂದು ಗುಂಪು ನನ್ನನ್ನು ಕೇಳಿತ್ತು, ಆದರೆ ಇಲ್ಲಿ ಯಾರೂ ಇಲ್ಲ ಎಂದು ನಾನು ಅವರಿಗೆ ತಿಳಿಸಿದ್ದೆ. ದಂಗೆ ಇನ್ನಷ್ಟು ಹರಡುವುದನ್ನು ನಾನು ಬಯಸಿರಲಿಲ್ಲ. ಇಲ್ಲಿ ನನಗೆ ಯಾರೂ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಬಯಸದ ಏನನ್ನೂ ಮಾಡುವಂತೆ ಯಾರೂ ನನ್ನನ್ನು ಬಲವಂತಗೊಳಿಸಲು ಸಾಧ್ಯವಿಲ್ಲ’’ ಎಂದು ಹೇಳಿದರು.

ಸಂಕೀರ್ಣದ ಮೊದಲ ಅಂತಸ್ತಿನಲ್ಲಿ ಸುಮಾರು 15 ಮುಸ್ಲಿಮ್ ವ್ಯಾಪಾರಿಗಳು ಮತ್ತು ಕೆಲಸಗಾರರಿದ್ದಾರೆ ಎನ್ನುವುದನ್ನು ಮಧುಲಿಕಾ ಮಾರುಕಟ್ಟೆಯ ಪ್ರವೇಶದ್ವಾರದಲ್ಲಿ ಜಮಾಯಿಸಿದ್ದ ಗುಂಪಿಗೆ ಹೇಳಿರಲಿಲ್ಲ. ಅವರೆಲ್ಲ (ಮುಸ್ಲಿಮರು) ಭಯಭೀತರಾಗಿದ್ದರು ಮತ್ತು ಬೆಂಕಿಯಲ್ಲಿ ಉರಿಯುತ್ತಿದ್ದ ಪಕ್ಕದ ಕಟ್ಟಡಗಳಿಂದ ವ್ಯಾಪಿಸುತ್ತಿದ್ದ ಹೊಗೆಯಿಂದಾಗಿ ಕೆಮ್ಮುತ್ತಿದ್ದರು.

‘‘ನಾನು ಅವರನ್ನು ಸುರಕ್ಷಿತವಾದ ಕೋಣೆಯೊಂದಕ್ಕೆ ಸಾಗಿಸಿದ್ದೆ. ಫ್ಯಾನ್ ಹಾಕಿ ಅವರಿಗೆ ಕುಡಿಯುವ ನೀರು ಒದಗಿಸಿದ್ದೆ. ಅಗತ್ಯವಿದ್ದಷ್ಟು ಸಮಯ ಇಲ್ಲಿ ಉಳಿದುಕೊಳ್ಳಬಹುದು ಎಂದು ನಾನು ಅವರಿಗೆ ತಿಳಿಸಿದ್ದೆ’’ ಎಂದು ಮಧುಲಿಕಾ ತಿಳಿಸಿದರು.

ಅಲ್ಲಿ ಆಶ್ರಯ ಪಡೆದುಕೊಂಡವರಲ್ಲಿ ಸಂಕೀರ್ಣದಲ್ಲಿ ಚಪ್ಪಲಿ ಅಂಗಡಿಯನ್ನು ಹೊಂದಿರುವ ದಾನಿಶ್ ಖಾನ್ (28) ಮತ್ತು ಹೊರಗೆ ರಸ್ತಬದಿಯಲ್ಲಿನ ಗಾರ್ಮೆಂಟ್ ಅಂಗಡಿಯ ಕೆಲಸಗಾರ ಮುಹಮ್ಮದ್ ಖಾನ್ (31) ಸೇರಿದ್ದರು.

ಪಟ್ಟಣದಲ್ಲಿ ಗಲಭೆ ನಡೆಯುತ್ತಿದೆ ಎಂದು ಗೊತ್ತಾದಾಗ ಸಂಕೀರ್ಣದಲ್ಲಿಯ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಲು ಅನುವಾಗಿದ್ದರು. ಸಂಕೀರ್ಣದಿಂದ ಹೊರಬೀಳುವುದರಲ್ಲಿದ್ದಾಗ ಕೇಸರಿ ಧ್ವಜಗಳನ್ನು ಹಿಡಿದುಕೊಂಡಿದ್ದ, ಅಂಗಡಿಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದ ಗುಂಪೊಂದು ಅವರ ಕಣ್ಣಿಗೆ ಬಿದ್ದಿತ್ತು. ಅವರೆಲ್ಲ ಸಂಕೀರ್ಣದೊಳಗೆ ವಾಪಸ್ ಓಡಿದ್ದರು.

ಅಲ್ಲಿ ಅವರಿಗೆ ಮಧುಲಿಕಾ ಎದುರಾಗಿದ್ದರು. ‘‘ಅವರಿಂದ ಇಂತಹ ದಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಮೇಲಿನ ಅಂತಸ್ತಿನಲ್ಲಿರುವ ನಮ್ಮ ಕೋಣೆಗೆ ಬನ್ನಿ, ಇಲ್ಲಿರುವುದು ಸುರಕ್ಷಿತವಲ್ಲ ಎಂದು ಅವರು ನಮಗೆ ತಿಳಿಸಿದ್ದರು’’ ಎಂದು ದಾನಿಶ್ ಖಾನ್ ನೆನಪಿಸಿಕೊಂಡರು.

ಅವರು ಅಲ್ಲಿ ಬಚ್ಚಿಟ್ಟುಕೊಂಡಿದ್ದಾಗ ಹೊರಗೆ ಪ್ರವೇಶದ್ವಾರದಲ್ಲಿ ಗುಂಪು ಗಲಾಟೆಯಲ್ಲಿ ತೊಡಗಿತ್ತು. ‘‘ಬೊಬ್ಬೆ ಹೊಡೆಯುತ್ತಿದ್ದ ಅವರು ಬಲವಂತದಿಂದ ಪ್ರವೇಶದ್ವಾರವನ್ನು ತೆರೆಯಲು ಪ್ರಯತ್ನಿಸುತ್ತಿದ್ದರು, ನಾವು ಎಲ್ಲಿದ್ದೇವೆ ಎಂದು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮುಸ್ಲಿಮರ ಅಂಗಡಿಗಳಿಗೆ ತಾವು ಬೆಂಕಿ ಹಚ್ಚುವುದಾಗಿ ಅವರು ಹೇಳುತ್ತಿದ್ದರು. ಈ ವೇಳೆ ಆಂಟಿ (ಮಧುಲಿಕಾ) ಅಲ್ಲಿಂದ ಹೊರಟು ಹೋಗುವಂತೆ ಗುಂಪಿಗೆ ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದರು. ಅಂಗಡಿಗಳನ್ನು ನಾಶ ಮಾಡಲು ತಾನು ಬಿಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದು ನಮಗೆ ಕೇಳಿಸಿತ್ತು ಮತ್ತು ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆವು’’ ಎಂದು ದಾನಿಶ್ ಖಾನ್ ತಿಳಿಸಿದರು.

ಈ ವೇಳೆ ಕಾರ್ಯನಿಮಿತ್ತ ಹೊರಗೆ ತೆರಳಿದ್ದ ಮಧುಲಿಕಾರ ಸಂಬಂಧಿ ಸಂಜಯ ಸಿಂಗ್ ವಾಪಸಾಗಿದ್ದರು. ಕೋಣೆಯಲ್ಲಿದ್ದ ಎಲ್ಲರಿಗೂ ನೀರು ಮತ್ತು ಚಹಾ ಸಿಗುವಂತೆ ನೋಡಿಕೊಂಡ ಅವರು, ಹೊರಗೆ ಪರಿಸ್ಥಿತಿ ಶಾಂತವಾಗುತ್ತಿದೆ ಮತ್ತು ರಸ್ತೆಗಳು ಶೀಘ್ರವೇ ಮುಕ್ತವಾಗಲಿವೆ ಎಂದು ಭರವಸೆ ನೀಡಿದ್ದರು.

ತನ್ನ ತಾಯಿ ಕರೆ ಮಾಡಿದಾಗ ಮುಹಮ್ಮದ್ ಖಾನ್ ‘‘ನಾವಿಲ್ಲಿ ಸುರಕ್ಷಿತರಾಗಿದ್ದೇವೆ. ಮಧುಲಿಕಾ ಮತ್ತು ಸಂಜಯ್‌ಜಿ ನಮ್ಮನ್ನು ಸುರಕ್ಷಿತವಾಗಿಟ್ಟಿದ್ದಾರೆ’’ ಎಂದು ತಿಳಿಸಿದ್ದ.

ಖಾನ್ ಸಂಕೀರ್ಣದೊಳಗೆ ಕೆಲಸ ಮಾಡುತ್ತಿರಲಿಲ್ಲ, ಆದರೂ ಮಧುಲಿಕಾ ತೋರಿಸಿದ್ದ ದಯೆ ಆತನನ್ನು ಭಾವುಕನಾಗಿಸಿತ್ತು.

ದಂಗೆಯ ಅಬ್ಬರ ಕಡಿಮೆಯಾಗಿ ಅಂಗಡಿಯವರು ಮತ್ತು ಕೆಲಸಗಾರರ ಗುಂಪು ಹೊರಡಲು ಅಣಿಯಾಗುತ್ತಿದ್ದಂತೆ ಮನೆಯವರೆಗೆ ಜೊತೆಯಲ್ಲಿ ಬರಬೇಕೇ ಎಂದು ಸಂಜಯ್ ಕೇಳಿದ್ದರು.

‘‘ಇದು ಹಿಂದೂಸ್ಥಾನ ಮತ್ತು ನಾವು ರಜಪೂತರು. ಧರ್ಮ ಯಾವುದೇ ಇರಲಿ, ಜನರನ್ನು ರಕ್ಷಿಸುವಲ್ಲಿ ನಾವು ಹೆಸರಾಗಿದ್ದೇವೆ ಮತ್ತು ನಾವದನ್ನು ಸದಾ ಮಾಡುತ್ತೇವೆ’’ ಎಂದು ಸಂಜಯ್ ಹೇಳಿದ್ದನ್ನು ಖಾನ್ ನೆನಪಿಸಿಕೊಂಡರು.

ಹಿಂಸಾಚಾರದ ಸಂಪೂರ್ಣ ಚಿತ್ರಣ ಸ್ಪಷ್ಟವಾದಾಗ ತಾವು ಎಂತಹ ಅಪಾಯದಿಂದ ಪಾರಾಗಿದ್ದೇವೆ ಎನ್ನುವುದು ದಾನಿಶ್ ಖಾನ್ ಮತ್ತು ಮುಹಮ್ಮದ್ ಖಾನ್‌ಗೆ ಅರ್ಥವಾಗಿತ್ತು. ಅಗತ್ಯವಾದಾಗ ಮಧುಲಿಕಾ ಮತ್ತು ಅವರ ಕುಟುಂಬಕ್ಕೆ ನೆರವಾಗುವುದಾಗಿ ಅವರು ಶಪಥ ತೊಟ್ಟಿದ್ದಾರೆ.

ಹಿಂದೂಗಳ ರ್ಯಾಲಿಯ ಮೇಲೆ ಮುಸ್ಲಿಮರಿಂದ ಕಲ್ಲುತೂರಾಟದ ಕಥೆಗಳನ್ನು ಕೇಳಿದ ನಂತರವೂ ಅವರನ್ನು ರಕ್ಷಿಸುವ ತನ್ನ ನಿರ್ಧಾರವನ್ನು ಮಧುಲಿಕಾ ಸಮರ್ಥಿಸಿಕೊಂಡಿದ್ದಾರೆ.

‘‘ನೋಡಿ, ರ್ಯಾಲಿಯಲ್ಲಿ ನಡೆದಿರುವುದಕ್ಕೂ ಈ ಹುಡುಗರಿಗೂ ಏನೂ ಸಂಬಂಧವಿಲ್ಲ. ಅವರು ಇಲ್ಲಿಂದ ಹೊರಬೀಳಲು ಪ್ರಯತ್ನಿಸಿದ್ದರು, ಆದರೆ ಉದ್ರಿಕ್ತ ಗುಂಪುಗಳು ಎದುರಾಗಿದ್ದವು. ಅವರಿಗೆ ನೋವಾಗುವುದು ಅಥವಾ ರಕ್ತಪಾತವನ್ನು ನಾನು ಬಯಸಿರಲಿಲ್ಲ. ನನ್ನ ಆತ್ಮಸಾಕ್ಷಿ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ’’ ಎಂದ ಮಧುಲಿಕಾ, ಅದು ಮಾನವೀಯತೆಯ ಪ್ರಶ್ನೆಯಾಗಿತ್ತು ಎಂದರು.

ಕೃಪೆ:scroll.in

Writer - ಐಶ್ವರ್ಯ ಅಯ್ಯರ್

contributor

Editor - ಐಶ್ವರ್ಯ ಅಯ್ಯರ್

contributor

Similar News