ಇಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮೂರು ಪಟ್ಟು ಹೆಚ್ಚಳ?

Update: 2022-04-15 06:08 GMT

2021-22 (ಎಪ್ರಿಲ್-ಮಾರ್ಚ್)ರಲ್ಲಿ ಇಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟವು ಮೂರು ಪಟ್ಟು ಹೆಚ್ಚಿತು ಎನ್ನುವುದನ್ನು ಅಟೊಮೊಬೈಲ್ ಮಾರಾಟಗಾರರ ಸಂಘಗಳ ಒಕ್ಕೂಟ (ಎಫ್‌ಎಡಿಎ)ದ ಅಂಕಿಸಂಖ್ಯೆಗಳು ತೋರಿಸಿವೆ. ಈ ಅವಧಿಯಲ್ಲಿ, 4.29 ಲಕ್ಷ ಇಲೆಕ್ಟ್ರಿಕ್ ವಾಹನಗಳು ಮಾರಾಟವಾದವು. ಅದರ ಹಿಂದಿನ ವರ್ಷ 1.34 ಲಕ್ಷ ವಾಹನಗಳು ಮಾರಾಟವಾಗಿದ್ದರೆ, 2019-20ರ ಸಾಲಿನಲ್ಲಿ 1.68 ಲಕ್ಷ ಇಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದವು.

ಯಾವ ಮಾದರಿಯ ಇಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ ಹಾಗೂ ಅದರ ಹಿಂದಿನ ಕಾರಣಗಳ ಬಗ್ಗೆ ನಾವಿಲ್ಲಿ ಪರಿಶೀಲಿಸೋಣ.

ಯಾವ ಮಾದರಿಯ ವಾಹನಗಳು ಹೆಚ್ಚು ಮಾರಾಟವಾಗುತ್ತಿವೆ?

ಇಲೆಕ್ಟ್ರಿಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಈಗಷ್ಟೇ ಮುಗಿದ ಹಣಕಾಸು ವರ್ಷದಲ್ಲಿ, 2.31 ಲಕ್ಷ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಕೇವಲ 41,046 ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.

ಬ್ರಾಂಡ್‌ಗಳ ಪೈಕಿ, ಹೀರೊ ಇಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಗರಿಷ್ಠ ಸಂಖ್ಯೆಯ, ಅಂದರೆ 65,303 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತು. ಎರಡನೇ ಸ್ಥಾನದಲ್ಲಿ ಬರುವ ಒಕಿನಾವ ಅಟೊಟೆಕ್ ಪ್ರೈವೇಟ್ ಲಿಮಿಟೆಡ್ 46,447 ದ್ವಿಚಕ್ರ ವಾಹನಗಳನ್ನು ಮಾರಿತು. ಅದೇ ವೇಳೆ, ಆ್ಯಂಪಿಯರ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ 24,648 ವಾಹನಗಳನ್ನು ಮಾರಿದರೆ, ಆ್ಯತರ್ ಎನರ್ಜಿ 19,971 ದ್ವಿಚಕ್ರಗಳನ್ನು ಮಾರಾಟ ಮಾಡಿತು.

ಇಲೆಕ್ಟ್ರಿಕ್ ಚತುಷ್ಚಕ್ರ ವಾಹನಗಳ ಮಾರಾಟ ಹೆಚ್ಚಳ?

ಹೌದು. ಇಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟವೂ ಶೇ. 257ರಷ್ಟು ಏರಿಕೆಯಾಗಿದೆ. 2021-22ರಲ್ಲಿ 17,802 ಇಲೆಕ್ಟ್ರಿಕ್ ಚತುಷ್ಚಕ್ರ ವಾಹನಗಳು ಮಾರಾಟವಾಗಿವೆ ಎಂದು ಎಫ್‌ಎಡಿಎ ತಿಳಿಸಿದೆ. ಕಳೆದ ವರ್ಷ ಮಾರಾಟವಾದ ಈ ಮಾದರಿಯ ವಾಹನಗಳ ಸಂಖ್ಯೆ 4,984. ಈ ಪೈಕಿ ಹೆಚ್ಚಿನ ವಾಹನಗಳನ್ನು ಟಾಟಾ ಮೋಟರ್ಸ್ ಮಾರಾಟ ಮಾಡಿದೆ. ಟೈಗರ್ ಮತ್ತು ನೆಕ್ಸನ್ ಮಾದರಿಗಳು ಟಾಟಾ ಮೋಟರ್ಸ್‌ನ ಇಲೆಕ್ಟ್ರಾನಿಕ್ ವಾಹನಗಳು. ಟಾಟಾ ಮೋಟರ್ಸ್ 2021-22ರಲ್ಲಿ 15,198 ವಾಹನಗಳನ್ನು ಮಾರಾಟ ಮಾಡಿದೆ. ಎರಡನೇ ಸ್ಥಾನದಲ್ಲಿರುವ ಎಮ್‌ಜಿ ಮೋಟರ್ ಇಂಡಿಯಾ 2,045 ಇಲೆಕ್ಟ್ರಿಕ್ ಕಾರುಗಳನ್ನು ಮಾರಿದರೆ, ನಂತರದ ಸ್ಥಾನದಲ್ಲಿ ಬರುವ ಮಹೀಂದ್ರ - ಮಹೀಂದ್ರ 156 ವಾಹನಗಳನ್ನು ಮಾರಾಟ ಮಾಡಿವೆ.

ಇತರ ಮಾದರಿಯ ಇಲೆಕ್ಟ್ರಿಕ್ ವಾಹನಗಳು ಇವೆಯೇ?

2021-22ರಲ್ಲಿ, 1.78 ಲಕ್ಷ ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ಅದಕ್ಕಿಂತ ಹಿಂದಿನ ವರ್ಷದಲ್ಲಿ 88,391 ವಾಹನಗಳು ಮಾರಾಟಗೊಂಡರೆ, 2019-20ರಲ್ಲಿ 1.41 ಲಕ್ಷ ತ್ರಿಚಕ್ರ ವಾಹನಗಳು ಮಾರಾಟಗೊಂಡಿದ್ದವು. ಈ ಪೈಕಿ ಮುಂಚೂಣಿಯಲ್ಲಿರುವ ವೈಸಿ ಇಲೆಕ್ಟ್ರಿಕ್ ವೆಹಿಕಲ್ 17,049 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಎರಡನೇ ಸ್ಥಾನದಲ್ಲಿರುವ ಸಾಯಿರಾ ಇಲೆಕ್ಟ್ರಿಕ್ ಅಟೊ ಪ್ರೈವೇಟ್ ಲಿಮಿಟೆಡ್ 8,475 ವಾಹನಗಳನ್ನು ಮಾರಿದರೆ, ನಂತರದ ಸ್ಥಾನದಲ್ಲಿ ಬರುವ ಮಹೀಂದ್ರ ರೇವ ಇಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ 8,037 ವಾಹನಗಳನ್ನು ಮಾರಿದೆ.

ತ್ರಿಚಕ್ರ ವಾಹನ ವಲಯವು ಬೃಹತ್ ಪ್ರಮಾಣದಲ್ಲಿ ಇಂಟರ್‌ನಲ್ ಕಂಬಶ್ಶನ್ (ಪೆಟ್ರೋಲ್ ಆಧಾರಿತ) ಇಂಜಿನ್ ಮಾದರಿಯಿಂದ ಇಲೆಕ್ಟ್ರಿಕ್ ಮಾದರಿಗೆ ಪರಿತವರ್ತನೆಯಾಗುತ್ತಿದೆ ಎಂದು ಎಫ್‌ಎಡಿಎ ಹೇಳಿದೆ. ಪ್ರಸಕ್ತ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇರುವ 45 ಶೇಕಡ ವಾಹನಗಳು ಇಲೆಕ್ಟ್ರಿಕ್ ವಾಹನಗಳಾಗಿವೆ.

ಮಾರಾಟ ಹೆಚ್ಚಳಕ್ಕೆ ಕಾರಣಗಳೇನು?

ಸರಕಾರ ನೀಡುತ್ತಿರುವ ಸಂಘಟಿತ ಬೆಂಬಲ ಮತ್ತು ವಿಸ್ತಾರಗೊಳ್ಳುತ್ತಿರುವ ಚಾರ್ಜಿಂಗ್ ಮೂಲಸೌಕರ್ಯವು ಈ ವರ್ಷ ಇಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮುಂತಾದ ಇಂಧನಗಳ ಬೆಲೆಯಲ್ಲಿ ಆಗಿರುವ ಅಗಾಧ ಹೆಚ್ಚಳ ಇದಕ್ಕೆ ಇನ್ನೊಂದು ಕಾರಣವಾಗಿದೆ. ಮುಂದೆ, ಬ್ಯಾಟರಿ ವಿನಿಮಯ ಮತ್ತು ಬ್ಯಾಟರಿ-ಆ್ಯಸ್-ಎ-ಸರ್ವಿಸ್ (ಬಿಎಎಎಸ್) ಮುಂತಾದ ಸೇವೆಗಳು ಚಾಲ್ತಿಗೆ ಬರುತ್ತಿರುವಂತೆಯೇ ಇಲೆಕ್ಟ್ರಿಕ್ ವಾಹನಗಳ ಕ್ಷೇತ್ರವು ಮತ್ತಷ್ಟು ಬೆಳವಣಿಗೆಯನ್ನು ಕಾಣಲಿದೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News