×
Ad

ಅಕ್ಕಿಯ ಸಾರವರ್ಧನೆ ನಮ್ಮ ಆಹಾರ ವ್ಯವಸ್ಥೆಗೆ ಪೂರಕವೇ?

Update: 2022-04-16 00:05 IST

ಅಕ್ಕಿ ಸಾರವರ್ಧನೆ (ಕಬ್ಬಿಣ, ಫಾಲಿಕ್ ಆ್ಯಸಿಡ್ ಮತ್ತು ವಿಟಮಿನ್ ಬಿ12 ಮುಂತಾದ ಪೌಷ್ಟಿಕಾಂಶಗಳನ್ನು ಅಕ್ಕಿಗೆ ಹೆಚ್ಚುವರಿಯಾಗಿ ಸೇರಿಸುವುದು)ಯ ಕಲ್ಪನೆಯನ್ನು ಭಾರತದಲ್ಲಿ ವೇಗವಾಗಿ ಹರಡಲು ಸರಕಾರವು ಇತ್ತೀಚೆಗೆ ವೇಳಾಪಟ್ಟಿಯನ್ನು ರಚಿಸಿದೆ. ಈ ವೇಳಾಪಟ್ಟಿಯ ಪ್ರಕಾರ, ಐಸಿಡಿಎಸ್, ಶಾಲೆಗಳ ಮಧ್ಯಾಹ್ನದ ಬಿಸಿಯೂಟ, ಇತರ ಪೌಷ್ಟಿಕಾಂಶ ಮತ್ತು ಕಲ್ಯಾಣ ಯೋಜನೆಗಳು ಹಾಗೂ ಬೃಹತ್ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಗೆ ಸಾರವರ್ಧಿತ ಅಕ್ಕಿ ಪೂರೈಸುವ ಕಾರ್ಯಕ್ರಮವು 2024ರ ವೇಳೆಗೆ ಪೂರ್ಣಗೊಳ್ಳಬೇಕು. ಇತರ ದೇಶಗಳಿಗೆ ಹೋಲಿಸಿದರೆ, ಇದನ್ನು ಸಾಧಿಸುವ ಸಾಮರ್ಥ್ಯ ಭಾರತದ ಬಳಿ ಹೆಚ್ಚೇ ಇದೆೆ. ಯಾಕೆಂದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಇತರ ಪೌಷ್ಟಿಕಾಂಶ ಕಾರ್ಯಕ್ರಮಗಳ ಬೃಹತ್ ಜಾಲದ ನಿಯಂತ್ರಣವನ್ನು ಸರಕಾರವೇ ಹೊಂದಿದೆ. ಈ ಜಾಲಗಳ ಮೂಲಕ ಸುಮಾರು 80 ಕೋಟಿ ಜನರನ್ನು ತಲುಪಬಹುದಾಗಿದೆ.

ಸಾರವರ್ಧಿತ ಅಕ್ಕಿಯ ಕ್ಷಿಪ್ರ ರವಾನೆಯು ಹಲವು ವಿಧಗಳಲ್ಲಿ ಅಪಾಯಕಾರಿಯಾಗುವ ಸಾಧ್ಯತೆಯಿದೆ. ಘೋಷಿತ ಪೌಷ್ಟಿಕಾಂಶ ಗುರಿಗಳನ್ನು ಇತರ ಹಲವಾರು ವಿಧಾನಗಳಿಂದ ಸಾಧಿಸುವ ಮೂಲಕ ಈ ಹಾನಿಕಾರಕ ಪರಿಣಾಮಗಳು ಮತ್ತು ಅಪಾಯಗಳನ್ನು ಸುಲಭವಾಗಿ ನಿವಾರಿಸಬಹುದಾಗಿದೆ.

ಅಕ್ಕಿ ಸಾರವರ್ಧನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಮೊದಲು ಇಲ್ಲಿ ಚರ್ಚಿಸೋಣ. ಬಳಿಕ ಈ ಅಪಾಯಗಳು ಮತ್ತು ಹಾನಿಗಳಿಲ್ಲದೆ ಪೌಷ್ಟಿಕಾಂಶ ಗುರಿಗಳನ್ನು ಹೇಗೆ ಸಾಧಿಸಬಹುದು ಎನ್ನುವುದನ್ನು ನೋಡೋಣ. ಆದರೆ, ಒಂದು ವಿಷಯವನ್ನು ನಾವಿಲ್ಲಿ ಗಮನದಲ್ಲಿಡಬೇಕು. ಅಕ್ಕಿ ಸಾರವರ್ಧನೆ ಯೋಜನೆಯನ್ನು ಪ್ರತ್ಯೇಕವಾಗಿ ಪರಿಗಣಿಸಬಾರದು. ಉಪ್ಪು, ಹಾಲು, ಖಾದ್ಯ ತೈಲಗಳು ಮತ್ತು ಗೋಧಿ ಮುಂತಾದ ಇತರ ಹಲವಾರು ಪ್ರಮುಖ ಆಹಾರಗಳ ಸಾರವರ್ಧನೆ ಕಾರ್ಯಕ್ರಮಗಳು ಮತ್ತು ಪ್ರಸ್ತಾವಗಳ ಜೊತೆಗೇ ಅದನ್ನು ಪರಿಗಣಿಸಬೇಕು. ವ್ಯಾಪಕವಾಗಿ ಮಾರಾಟಗೊಳ್ಳುತ್ತಿರುವ ಪೊಟ್ಟಣ ಆಹಾರ ಉತ್ಪನ್ನಗಳಲ್ಲೂ ಸಾರವರ್ಧನೆಯನ್ನು ಬಳಸಲಾಗುತ್ತಿದೆ.

ಮೊದಲ ಅಪಾಯವೆಂದರೆ, ಕಬ್ಬಿಣ ಮತ್ತು ವಿಟಮಿನ್‌ಗಳಂತಹ ಕೆಲವು ಸೂಕ್ಷ್ಮ ಪೋಷಕಾಂಶಗಳ ಅತಿ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಇವುಗಳ ಅತಿ ಸೇವನೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಈಗಾಗಲೇ ಸಾಬೀತಾಗಿದೆ. ನೈಸರ್ಗಿಕ ಆಹಾರಗಳಿಗೆ ಹೋಲಿಸಿದರೆ ಕೃತಕ ಸಾರವರ್ಧನೆಗೆ ಒಳಗಾದ ಆಹಾರಗಳಿಂದ ಈ ಅಪಾಯ ಹೆಚ್ಚು. ಸಾರವರ್ಧನೆ ಪ್ರಕ್ರಿಯೆಯು ಬೃಹತ್ ಯಂತ್ರಗಳಲ್ಲಿ ನಡೆಯುವುದರಿಂದ, ಕೆಲವು ಅನಪೇಕ್ಷಿತ ಉಪ ಉತ್ಪನ್ನಗಳೂ ಆಹಾರದ ಜೊತೆಗೆ ಸೇರಿಕೊಳ್ಳುವ ಸಾಧ್ಯತೆಯಿದೆ.

ಸಾರವರ್ಧಿತ ಅಕ್ಕಿಯ ವಿಷಯದಲ್ಲಿ ಹೇಳುವುದಾದರೆ, ಸಾರವರ್ಧಿತ ತಿರುಳುಗಳು ಸಾದಾ ಅಕ್ಕಿಯ ಜೊತೆ ಗರಿಷ್ಠ ಪ್ರಮಾಣದಲ್ಲಿ ಬೆರೆಯದಿದ್ದರೆ ಅದು ಬಳಕೆದಾರರ ಗೊಂದಲಕ್ಕೆ ಕಾರಣವಾಗಬಹುದು. ತಮ್ಮ ಅಕ್ಕಿಯಲ್ಲಿ ಅನಪೇಕ್ಷಿತ ಕಲಬೆರಕೆಗಳು ಇವೆ ಎಂಬುದಾಗಿ ಭಾವಿಸಿ ಅವುಗಳನ್ನು ಎಸೆಯುವ ಸಾಧ್ಯತೆಗಳಿವೆ. ಹಾಗಾಗಿ, ಆಗ ಚೆನ್ನಾಗಿ ಬೆರೆಯುವ ಅಕ್ಕಿ ತಳಿಗಳನ್ನೇ ಬಳಸಬೇಕು ಎನ್ನುವ ಒತ್ತಡವೂ ಉಂಟಾಗಬಹುದು. ಆಗ ಅಕ್ಕಿ ತಳಿಗಳ ವೈವಿಧ್ಯವನ್ನೇ ಕಡಿಮೆಗೊಳಿಸಬೇಕೆನ್ನುವ ಒತ್ತಡವೂ ಹೆಚ್ಚಬಹುದು. ಇದರ ಮುಂದಿನ ಭಾಗವಾಗಿ, ಕೆಲವೇ ಕೆಲವು ಅಕ್ಕಿ ತಳಿಗಳಿಗೆ ಉತ್ತೇಜನ ನೀಡುವುದು ಅಥವಾ ಅಂತಹ ತಳಿಗಳಿಗೆ ಹೆಚ್ಚು ಬೆಲೆ ನೀಡುವುದು ಅಥವಾ ಚೆನ್ನಾಗಿ ಬೆರೆಯುವ ತಳಿಗಳು ಎಂಬ ಹೆಸರಿನಲ್ಲಿ ಪೇಟೆಂಟ್ ಹೊಂದಿದ ಅಥವಾ ಕುಲಾಂತರಿ ತಳಿಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಣ್ಣ ಹಾಗೂ ಹಳ್ಳಿ ಮಟ್ಟದ ಅಕ್ಕಿ ಮತ್ತು ಇತರ ಆಹಾರಗಳ ಸಂಸ್ಕರಣೆಗೆ ಉತ್ತೇಜನ ನೀಡುವುದು ಈಗಿನ ಅಗತ್ಯವಾಗಿದೆ. ಆದರೆ, ಪ್ರಸ್ತಾಪಿತ ಅಕ್ಕಿ ಸಾರವರ್ಧನೆಯು ನಮ್ಮನ್ನು ವಿರುದ್ಧ ದಿಕ್ಕಿನಲ್ಲಿ ಒಯ್ಯಲಿದೆ. ಅದು ಕೇಂದ್ರೀಕರಣವನ್ನು ಹೆಚ್ಚಿಸಲಿದೆ ಮತ್ತು ಆಹಾರ ಕ್ಷೇತ್ರದ ನಿಯಂತ್ರಣವನ್ನು ಕೆಲವೇ ಕೆಲವು ಬೃಹತ್ ಉದ್ಯಮಗಳಿಗೆ ವಹಿಸಲಿದೆ.

ಹಲವು ಗಾಂಧಿವಾದಿ ಸುಧಾರಕರು ಈಗಲೂ ಗ್ರಾಮ ಮಟ್ಟದ ಅಕ್ಕಿ ಸಂಸ್ಕರಣೆ ಕಲ್ಪನೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಕಡ್ಡಾಯ ಅಕ್ಕಿ ಸಾರವರ್ಧನೆಯು ಅವರ ಆಶಯಗಳಿಗೆ ಶಾಶ್ವತವಾಗಿ ಕೊಳ್ಳಿಯಿಡುತ್ತದೆ. ಗ್ರಾಮವೊಂದರ ಸಮೀಪದ ಹೊಲಗಳಲ್ಲಿ ಬೆಳೆಯುವ ಅಕ್ಕಿ ಆಧಾರಿತ ಗುಡಿ ಕೈಗಾರಿಕೆಯೊಂದನ್ನು ಸ್ಥಾಪಿಸುವುದೂ ಕಷ್ಟವಾಗಲಿದೆ. ಯಾಕೆಂದರೆ ಅಲ್ಲಿ ಬೆಳೆದ ಅಕ್ಕಿಯನ್ನು ಸಾರವರ್ಧನೆಯಿಲ್ಲದೆ ನೇರವಾಗಿ ಬಳಸಲು ಸಾಧ್ಯವಾಗುವುದಿಲ್ಲ.

ಆಗ ಅಕ್ಕಿ ಸಂಸ್ಕರಣೆಯು ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಸಾರವರ್ಧನೆ ತಂತ್ರಜ್ಞಾನದ ಮೇಲೆ ನಿಯಂತ್ರಣವನ್ನು ಹೊಂದಿರುವ ಬೃಹತ್ ಕಂಪೆನಿಗಳ ಕೈಯಲ್ಲಿರುತ್ತದೆ. ಸಾಲ ಪಡೆದು ದುಬಾರಿ ನೂತನ ಯಂತ್ರಗಳನ್ನು ಖರೀದಿಸುವ ಸಾಮರ್ಥ್ಯವಿರುವ ದೊಡ್ಡ ಅಕ್ಕಿ ಗಿರಣಿಗಳು ಮಾತ್ರ ಬದುಕುಳಿಯಬಹುದು. ಅದು ಕೂಡ ಸಾರವರ್ಧನೆ ತಂತ್ರಜ್ಞಾನದ ಮೇಲೆ ನಿಯಂತ್ರಣ ಹೊಂದಿರುವ ಬೃಹತ್ ಕಂಪೆನಿಗಳ ಕಿರಿಯ ಪಾಲುದಾರರಾಗಿ ಈ ಸ್ಥಳೀಯ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸಬೇಕಾಗಬಹುದು. ಸಂಸ್ಕರಣೆ ಮತ್ತು ಯಂತ್ರಗಳಲ್ಲಿ ಈ ಮಾರ್ಪಾಡುಗಳನ್ನು ಮಾಡಿ, ಆ ಮಾರ್ಪಾಡು ಗಳನ್ನು ಮಾಡಿ ಎಂಬುದಾಗಿ ಬೃಹತ್ ಕಂಪೆನಿಗಳು ಸ್ಥಳೀಯ ಗಿರಣಿಗಳಿಗೆ ಆಗಾಗ ಒತ್ತಡ ಹೇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹಾಗೂ ಅದಕ್ಕಾಗಿ ಅವರಿಂದ ಹೆಚ್ಚಿನ ಹಣವನ್ನೂ ವಸೂಲು ಮಾಡಬಹುದಾಗಿದೆ.

ಪ್ರಧಾನ ಆಹಾರದ ಸಂಸ್ಕರಣೆಯನ್ನು ದೊಡ್ಡ ಕಂಪೆನಿಗಳಿಗೆ ವಹಿಸಿದರೆ ಆಹಾರ ದುಬಾರಿಯಾಗುವುದನ್ನು ನಾವು ಆಗಾಗ ನೋಡುತ್ತಾ ಬಂದಿದ್ದೇವೆ. ಉದಾಹರಣೆಗೆ; ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮೆಕ್ಸಿಕೊಗೆ ಅಗ್ಗದ ಮುಸುಕಿನ ಜೋಳದ ರಾಶಿಯೇ ಹರಿದು ಬಂತು. ಆದರೆ ಮೆಕ್ಸಿಕೊದ ಪ್ರಧಾನ ಆಹಾರ 'ಟೋರ್ಟಿಲ'ದ ಬೆಲೆ ಮಾತ್ರ ಅಧಿಕವೇ ಆಗಿತ್ತು. ಯಾಕೆಂದರೆ ಜೋಳದ ಗಿರಣಿ ಮತ್ತು ಹಿಟ್ಟು ಉದ್ದಿಮೆಯು ಕೆಲವೇ ಕೆಲವು ಬೃಹತ್ ಉದ್ಯಮಗಳ ನಿಯಂತ್ರಣದಲ್ಲಿತ್ತು. ಹಾಗಾಗಿ, ರೈತರಿಗೂ ಸಿಗಲಿಲ್ಲ (ಅಧಿಕ ಜೋಳದ ಆಮದಿನಿಂದಾಗಿ), ಬಳಕೆದಾರರಿಗೂ ಗಿಟ್ಟಲಿಲ್ಲ ಎಂಬಂತಾಯಿತು. ಕೃಷಿ ಕ್ಷೇತ್ರದಲ್ಲಿ ಬೃಹತ್ ಉದ್ಯಮಗಳ ಉಪಸ್ಥಿತಿ ಹೆಚ್ಚುತ್ತಿರುವುದರಿಂದ ಸಾಮಾನ್ಯ ರೈತರು ಮತ್ತು ಬಳಕೆದಾರರಿಬ್ಬರಿಗೂ ನಷ್ಟವಾಗುತ್ತದೆ ಎನ್ನುವುದು ಕಳೆದ ವರ್ಷದ ರೈತ ಚಳವಳಿಯ ಪ್ರಮುಖ ವಿಷಯವಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ, ಸರಕಾರ ಇನ್ನೂ ಪಾಠ ಕಲಿತಿಲ್ಲ ಎಂಬಂತೆ ಕಾಣುತ್ತದೆ.

ಸ್ಥಳೀಯ ಅಕ್ಕಿ ತಳಿಗಳ ಸ್ವಾದವು ಸಮಯ ಕಳೆದಂತೆ ಹೆಚ್ಚುತ್ತದೆ ಎನ್ನುವ ಅಭಿಪ್ರಾಯವಿದೆ. ಹಾಗಾಗಿ, ಅವುಗಳನ್ನು ಸಂಗ್ರಹ ಮಾಡಿ ನಂತರದ ದಿನಗಳಲ್ಲಿ ತಿನ್ನುವ ಕ್ರಮ ಸಾಮಾನ್ಯವಾಗಿದೆ. ಆದರೆ ಸಾರವರ್ಧಿತ ಅಕ್ಕಿಯ ವಾಯಿದೆ ಸುಮಾರು 12 ತಿಂಗಳು ಮಾತ್ರ ಎಂದು ಹೇಳಲಾಗಿದೆ. ಹಾಗಾಗಿ, ಸಾರವರ್ಧಿತ ಅಕ್ಕಿಯನ್ನು ಅದರ ವಾಯಿದೆಯ ಬಳಿಕವೂ ಸಂಗ್ರಹಿಸಿಟ್ಟರೆ ಕೆಡಲು ಆರಂಭಗೊಳ್ಳಬಹುದು. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ದೀರ್ಘಾವಧಿಗೆ ಸಂಗ್ರಹಿಸಿಡಲಾಗುತ್ತದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಬಳಿಕ ಧಾನ್ಯಗಳನ್ನು ದೂರದ ಸ್ಥಳಗಳಿಗೆ ಸಾಗಿಸಲಾಗುತ್ತದೆ. ಅಂತಿಮವಾಗಿ ನ್ಯಾಯಬೆಲೆ ಅಂಗಡಿಗಳಿಗೆ ತಲುಪಲು ಅದು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ.

ಭಾರತದಲ್ಲಿ ಆಹಾರ ಧಾನ್ಯಗಳ ವಿಕೇಂದ್ರೀಕೃತ ಸಂಗ್ರಹಣೆಯು ಇಂದಿನ ಅಗತ್ಯವಾಗಿದೆ. ಹಳ್ಳಿಯೊಂದರಲ್ಲಿ ಸಂಗ್ರಹಿಸಲಾದ ಆಹಾರ ಧಾನ್ಯಗಳ ಗಮನಾರ್ಹ ಭಾಗವು ಅದೇ ಹಳ್ಳಿಯ ನ್ಯಾಯಬೆಲೆ ಅಂಗಡಿಗಳು ಮತ್ತು ಪೌಷ್ಟಿಕಾಂಶ ಯೋಜನೆಗಳಿಗೆ ಸಿಗಬೇಕು. ಈ ಮೂಲಕ ಆಹಾರ ಧಾನ್ಯಗಳ ಸುದೀರ್ಘ ಸಾಗಣೆಯನ್ನು ತಡೆಯಬಹುದು. ಇದು ಪರಿಸರ ಮತ್ತು ಆಹಾರ ಭದ್ರತೆ ಎರಡಕ್ಕೂ ಪೂರಕವಾಗಿದೆ. ಆದರೆ ಕಡ್ಡಾಯ ಆಹಾರ ಸಾರವರ್ಧನೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ.

ಇತರ ವಿಧಾನಗಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಗುರಿಯನ್ನು ಸಾಧಿಸಬಹುದೇ ಎನ್ನುವುದನ್ನು ಈಗ ನೋಡೋಣ. ಈಗಿನ ಕಾಲದ ಗಿರಣಿಗಳು ಅಕ್ಕಿಯಿಂದ ದೊಡ್ಡ ಪ್ರಮಾಣದಲ್ಲಿ ಅಗತ್ಯ ಪೌಷ್ಟಿಕಾಂಶಗಳನ್ನು ತೆಗೆದುಹಾಕುತ್ತವೆ ಎನ್ನುವ ಕಾರಣಕ್ಕಾಗಿ ಸಾರವರ್ಧನೆಯ ಅಗತ್ಯವಿದೆ ಎನ್ನುವುದನ್ನು ಸರಕಾರದ ಅಧಿಕೃತ ಸಮೀಕ್ಷೆಗಳೇ ಹೇಳುತ್ತವೆ. ಹಾಗಾಗಿ, ಸಮಸ್ಯೆಯ ಮೂಲದಲ್ಲೇ ಪರಿಹಾರವಿದೆ. ಅಧಿಕ ಪ್ರಮಾಣದಲ್ಲಿ ಅಕ್ಕಿಯಿಂದ ಪೌಷ್ಟಿಕಾಂಶಗಳನ್ನು ತೆಗೆಯುವ ಮತ್ತು ಪಾಲಿಶಿಂಗ್ ಮಾಡುವ ಗಿರಣಿಗಳನ್ನು ದೂರವಿಟ್ಟು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ತೆಗೆಯುವ ಮತ್ತು ಅತ್ಯಂತ ಕಡಿಮೆ ಪಾಲಿಶಿಂಗ್ ಮಾಡುವ ಗಿರಣಿಗಳ ಬಳಿ ಹೋಗಬೇಕು. ಇಂತಹ ತಂತ್ರಜ್ಞಾನ ಖಂಡಿತವಾಗಿಯೂ ಲಭ್ಯವಿದೆ. ಹಾಗಾಗಿ, ನಿಜವಾದ ಪರಿಹಾರ ಅತ್ಯಂತ ಸರಳ ಮತ್ತು ಅಗ್ಗ. ಆದರೆ, ಬೃಹತ್ ಉದ್ಯಮಗಳ ಬಗ್ಗೆ ಸರಕಾರ ಹೊಂದಿರುವ ಅಪಾರ ಕಾಳಜಿಯಿಂದಾಗಿ, ಇಂತಹ ಸರಳ ಸತ್ಯಗಳನ್ನು ಅದು ಉಪೇಕ್ಷಿಸುತ್ತದೆ.

ಅದೇ ವೇಳೆ, ಅತ್ಯಧಿಕ ಪೌಷ್ಟಿಕತೆಯನ್ನು ಸಾಧಿಸುವ ಇನ್ನೊಂದು ಮಾರ್ಗವಿದೆ. ಅದೆಂದರೆ, ಕೃಷಿ ಮತ್ತು ಆಹಾರದಲ್ಲಿ 'ಸಾಮಾಜಿಕ ಕೃಷಿ-ಪರಿಸರ' ವಿಧಾನವನ್ನು ಅನುಸರಿಸುವುದು. ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು ಮತ್ತು ಕೃಷಿಯಲ್ಲಿ ಸಹಜ ವಿಧಾನಗಳ ಬಳಕೆಯನ್ನು ಹೆಚ್ಚಿಸುವುದು ಹಾಗೂ ಅಸಮಾನತೆಗಳನ್ನು ಕಡಿಮೆ ಮಾಡುವುದು ಈ ವಿಧಾನದ ಪ್ರಮುಖ ಅಂಶಗಳು.

ಮೂಲ ಆರೋಗ್ಯವನ್ನು ಮರಳಿ ಪಡೆಯಲು ಮಣ್ಣಿನ ಆರೈಕೆ ಮಾಡುವುದರಿಂದ, ಮಣ್ಣಿನ ಸೂಕ್ಷ್ಮ-ಪೌಷ್ಟಿಕಾಂಶಗಳ ಸಮತೋಲನವೂ ಮರಳುತ್ತದೆ. ಹಾಗಾಗಿ, ಈ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳ ಪೌಷ್ಟಿಕತೆಯೂ ಹೆಚ್ಚುತ್ತದೆ. ಎಲ್ಲ ಮಟ್ಟಗಳಲ್ಲಿ ಅಸಮಾನತೆಯನ್ನು ಕಡಿಮೆಗೊಳಿಸುವುದು ಹಾಗೂ ಜನರ ಕ್ರಿಯಾತ್ಮಕ, ನಿರಂತರ, ಪರಿಸರ ಪೂರಕ ಜೀವನೋಪಾಯಗಳಿಗೆ ಉತ್ತೇಜನ ನೀಡುವುದು- ಹಸಿವು ಮತ್ತು ಅಪೌಷ್ಟಿಕತೆಯನ್ನು ದೂರ ಮಾಡುವ ಅತ್ಯುತ್ತಮ ವಿಧಾನಗಳಾಗಿವೆ. ಆದರೆ, ಇದಕ್ಕೆ ಹೆಚ್ಚುವರಿಯಾಗಿ ಗ್ರಾಮಗಳು ಮತ್ತು ನಗರಗಳೆರಡರಲ್ಲೂ ಉತ್ತಮವಾಗಿ ಅನುಷ್ಠಾನಗೊಳ್ಳುವ ಪೌಷ್ಟಿಕಾಂಶ ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿ ಉಪಯುಕ್ತವಾಗಿರುತ್ತವೆ.

ಕೃಪೆ: countercurrents.org

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News