×
Ad

ಧ್ವನಿವರ್ಧಕ ವಿವಾದ; ರಾಜ್ ಠಾಕ್ರೆಗೆ ಮಹಾರಾಷ್ಟ್ರ ಸಚಿವ ತಿರುಗೇಟು ನೀಡಿದ್ದು ಹೀಗೆ...

Update: 2022-04-16 07:50 IST
ಆದಿತ್ಯ ಠಾಕ್ರೆ - ರಾಜ್ ಠಾಕ್ರೆ 

ಮುಂಬೈ: ಮಸೀದಿಗಳಿಂದ ಮೇ 3ರ ಒಳಗಾಗಿ ಧ್ವನಿವರ್ಧಕಗಳನ್ನು ತೆಗೆದುಹಾಕಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ.

"ಒಳ್ಳೆಯದು.. ಧ್ವನಿವರ್ಧಕ ಕಿತ್ತುಹಾಕುವ ಬದಲು ಏರುತ್ತಿರುವ ಹಣದುಬ್ಬರ ವಿರುದ್ಧ ಮಾತನಾಡಲು ಅದನ್ನು ಬಳಸಿ. ಪೆಟ್ರೋಲ್, ಡೀಸೆಲ್, ಸಿಎನ್‍ಜಿ ಬೆಲೆಗಳ ಬಗ್ಗೆ ಮಾತನಾಡಬೇಕು. 60 ವರ್ಷಗಳ ಹಿಂದೆ ಏನು ನಡೆದಿದೆ ಎಂದು ಹೇಳುವ ಬದಲು ಕಳೆದ ಎರಡು ಮೂರು ವರ್ಷಗಳಲ್ಲಿ ಏನಾಗಿದೆ ಎಂದು ನಾವು ಚರ್ಚೆ ಮಾಡೋಣ" ಎಂದು ಸುದ್ದಿಗಾರರ ಜತೆ ಮಾತನಾಡುವ ವೇಳೆ ಸವಾಲು ಹಾಕಿದರು. ಬಿಜೆಪಿ ಮತ್ತು ಎಂಎನ್‍ಎಸ್ ಧ್ವನಿವರ್ಧಕಗಳನ್ನು ವಿತರಿಸುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದಾಗ ಈ ಪ್ರತಿಕ್ರಿಯೆ ನೀಡಿದರು.

ಧ್ವನಿವರ್ಧಕಗಳ ಬಗೆಗಿನ ರಾಜ್ ಠಾಕ್ರೆ ಹೇಳಿಕೆ ಬಳಿಕ ರಾಜ್ಯ ರಾಜಕೀಯ ಕಾವೇರಿದೆ. ಮೇ 3ರ ಒಳಗಾಗಿ ಮಸೀದಿಗಳಿಂದ ಧ್ವನಿವರ್ಧಕ ತೆಗೆಸದಿದ್ದರೆ, ಎಂಎನ್‍ಎಸ್ ಕಾರ್ಯಕರ್ತರು ಧ್ವನಿವರ್ಧಕಗಳನ್ನು ಮಸೀದಿಗಳ ಹೊರಗೆ ಅಳವಡಿಸಿ ಹನುಮಾನ್ ಚಾಲೀಸ್ ಪಠಿಸಲಿದ್ದಾರೆ ಎಂದು ಠಾಕ್ರೆ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News