ನೂತನ ಸರ್ಕಾರ ಪತನಗೊಳಿಸಲು ಅನಿವಾಸಿ ಪಾಕಿಸ್ತಾನಿಗಳ ದೇಣಿಗೆ ಕೋರಿದ ಇಮ್ರಾನ್ ಖಾನ್!

Update: 2022-04-16 02:34 GMT

ಇಸ್ಲಾಮಾಬಾದ್: ಶೆಹಬಾಝ್ ಶರೀಫ್ ನೇತೃತ್ವದ ವಿದೇಶಿ ಬೆಂಬಲಿತ ಸರ್ಕಾರವನ್ನು ಪತನಗೊಳಿಸಲು ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳು ತಮ್ಮ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ದೇಣಿಗೆ ನೀಡಬೇಕು ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮನವಿ ಮಾಡಿದ್ದಾರೆ.

ವಿಚಿತ್ರವೆಂದರೆ ತಮ್ಮ ಸರ್ಕಾರ ಪತನಗೊಳಿಸಲು ಅಮೆರಿಕ ಸಂಚು ಹೂಡಿತ್ತು ಎಂಬ ಆರೋಪ ಮಾಡಿರುವ ಇಮ್ರಾನ್ ಇದೀಗ ಹಾಲಿ ಸರ್ಕಾರವನ್ನು ಪತನಗೊಳಿಸಲು ಸಾಗರೋತ್ತರ ಪಾಕಿಸ್ತಾನಿಗಳ ನೆರವು ಕೋರಿದ್ದಾರೆ.

ಟ್ವಿಟ್ಟರ್ ವೀಡಿಯೊ ಮೂಲಕ ಸಾಗರೋತ್ತರ ಪಾಕಿಸ್ತಾನಿಗಳಿಗೆ, ಶೆಹಬಾಝ್ ಶರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ ಹೊಸ ಚುನಾವಣೆ ನಡೆಸುವ ಸಂಬಂಧ ದೇಣಿಗೆಗಳನ್ನು ಸಂಗ್ರಹಿಸುತ್ತಿರುವ namanzoor.com ಎಂಬ ವೆಬ್‍ಸೈಟನ್ನು ಇಮ್ರಾನ್ ಪರಿಚಯಿಸಿದ್ದಾರೆ.

ಈ ಅಭಿಯಾನವನ್ನು ಹಖಿಖಿ ಅಝಾದಿ ಎಂದು ಕರೆದಿರುವ ಅವರು, ಭ್ರಷ್ಟ ಸರ್ಕಾರವನ್ನು ಪಾಕಿಸ್ತಾನದ 22 ಕೋಟಿ ಮಂದಿಯ ಮೇಲೆ ಹೇರಲಾಗಿದೆ ಎಂದು ಆಪಾದಿಸಿದ್ದಾರೆ.

ಪಾಕಿಸ್ತಾನವನ್ನು ಪಿಟಿಐ ಪಾರ್ಟಿ ಅಥವಾ ಮೂರು ವರ್ಷಗಳಿಂದ ಜೈಲಿನಲ್ಲಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಭ್ರಷ್ಟ ಶರೀಫ್ ಕುಟುಂಬ ಹೀಗೆ ಯಾರು ಆಳ್ವಿಕೆ ಮಾಡಬೇಕು ಎಂದು ನಿರ್ಧರಿಸುವುದು ಪಾಕಿಸ್ತಾನಿಗಳ ಹಕ್ಕು ಎಂದು ವಿವರಿಸಿದ್ದಾರೆ.

ಶೆಹಬಾಝ್ ಶರೀಫ್ ಜತೆಗೆ ಸಂಚು ರೂಪಿಸಿರುವ ಅಮೆರಿಕ, ಪಾಕಿಸ್ತಾನಿ ಜನತೆಯ ಮೇಲೆ ಈ ಸರ್ಕಾರವನ್ನು ಹೇರಿದೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News