×
Ad

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈಸ್ಟರ್ ಜಾಗರಣೆ

Update: 2022-04-16 19:55 IST

ಉಡುಪಿ : ಯೇಸು ಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರು ತ್ಥಾನಗೊಂಡ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ಬೈಬಲ್ ನಂಬಿಕೆಯಂತೆ ಯೇಸು ಕ್ರಿಸ್ತರು ಶಿಲುಬೆಗೇರಿದ ಮೂರನೇ ದಿನ ಅಂದರೆ ಈಸ್ಟರ್ ಸಂಡೆಯಂದು ಪುನರುತ್ಥಾನರಾದರೆಂಬ ವಿಶ್ವಾಸದೊಂದಿಗೆ ವಿಶ್ವದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ಈಸ್ಟರ್ ಜಾಗರಣೆ ಬಲಿ ಪೂಜೆಗಳು ಜರುಗಿದವು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಕಾರ್ಯಕ್ರಮ ಶನಿವಾರ ರಾತ್ರಿ ಪಾಸ್ಕ ಜಾಗರಣೆ(ಈಸ್ಟರ್ ವಿಜಿಲ್) ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ.ಜೋಯ್ ಅಂದ್ರಾದೆ, ಪಿಲಾರ್ ಸಭೆಯ ಧರ್ಮಗುರು ವಂ.ನಿತೇಶ್ ಡಿಸೋಜ ಉಪಸ್ಥಿತರಿದ್ದರು.

ಜಿಲ್ಲೆಯ ಪ್ರಮುಖ ಚರ್ಚುಗಳಾದ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ.ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ.ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ ನೇತೃತ್ವದಲ್ಲಿ ಪಾಸ್ಕ ಜಾಗರಣೆ(ಈಸ್ಟರ್ ವಿಜಿಲ್) ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಬಲಿಪೂಜೆ ಮುನ್ನ ಯೇಸು ಸಾವೆಂಬ ಕತ್ತಲೆಯಿಂದ ಹೊರಬಂದ ದ್ಯೋತಕ ವಾಗಿ ಹೊಸ ಬೆಂಕಿಯ ಆಶೀರ್ವಚನ ವನ್ನು ಧರ್ಮಗುರುಗಳು ನೇರವೇರಿಸಿ ಈಸ್ಟರ್ ಹಬ್ಬದ ಕ್ಯಾಂಡಲನ್ನು ಉರಿಸಿ ಪ್ರಾರ್ಥನಾ ವಿಧಿಗಳಿಗೆ ಚಾಲನೆ ನೀಡಿ ದರು. ಆಶಿರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲನ್ನು ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚ್‌ನಲ್ಲಿ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ಹಳೆ ಒಡಬಂಡಿಕೆಯ ದೇವರ ವಾಕ್ಯವನ್ನು ಪಠಿಸಿದ ಬಳಿಕ ಧರ್ಮ ಗುರುಗಳು ಹೊಸ ನೀರಿನ ಆಶೀರ್ವಚನ ನಡೆಸಿ, ಭಕ್ತಾದಿಗಳ ಮೇಲೆ ಹೊಸ ನೀರನ್ನು ಪ್ರೋ ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಧರ್ಮಗುರುಗಳು ಭಕ್ತಾದಿಗಳಿಗೆ ವಿವರಿಸಿದರು.

ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ ೪೫ ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನಗೊಳ್ಳವುದರ ಮೂಲಕ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಕೂಡ ಕ್ರಿಸ್ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News