ಮ.ಪ್ರ.: ಬಿಜೆಪಿ ಸರಕಾರದಿಂದ ‘ಆಯ್ದʼ ಧ್ವಂಸ ಅಭಿಯಾನ; ಹೈಕೋರ್ಟ್ ಮೆಟ್ಟಿಲೇರಲಿರುವ ಮುಸ್ಲಿಂ ಸಮುದಾಯ

Update: 2022-04-16 16:44 GMT

ಭೋಪಾಲ್, ಎ. 16: ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಆರಂಭಿಸಿದ ‘ಆಯ್ದ’ ಧ್ವಂಸ ಅಭಿಯಾನದ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಲಾಗಿದೆ ಎಂದು ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ಶನಿವಾರ ಹೇಳಿದ್ದಾರೆ. 

ಎಪ್ರಿಲ್ 10ರಂದು ರಾಮ ನವಮಿ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಹಾಗೂ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದವರ ಅಕ್ರಮ ಸೊತ್ತುಗಳ ವಿರುದ್ಧ ರಾಜ್ಯ ಸರಕಾರ ಧ್ವಂಸ ಅಭಿಯಾನ ಆರಂಭಿಸಿದೆ. ಧ್ವಂಸ ಅಭಿಯಾನ ಹಲವು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಹೇಳಿರುವ ಮುಸ್ಲಿಂ ಧರ್ಮಗುರುವೊಬ್ಬರು, ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದವರ ಕುಟುಂಬದ ಸದಸ್ಯರಿಗೆ ಸರಕಾರ ಯಾಕೆ ಶಿಕ್ಷೆ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. 

ಹಿಂಸಾಚಾರದ ಹಿನ್ನೆಲೆಯಲ್ಲಿ ಸರಕಾರ ಮುಸ್ಲಿಂ ಸಮುದಾಯದ ಸದಸ್ಯರನ್ನು ಅನ್ಯಾಯವಾಗಿ ಗುರಿ ಮಾಡುತ್ತಿದೆ. ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಪ್ರಕ್ರಿಯೆಗಳನ್ನು ನಡೆಸದೆ ಮನೆಗಳನ್ನು ಧ್ವಂಸ ಮಾಡುತ್ತಿದೆ ಎಂದು ರಾಜ್ಯದ ಹಲವು ಮುಸ್ಲಿಂ ಧಾರ್ಮಿಕ ನಾಯಕರು ಈ ಹಿಂದೆ ಆರೋಪಿಸಿದ್ದರು. 

‘ರಾಜ್ಯದಲ್ಲಿ ನಡೆಯುತ್ತಿರುವ ಆಯ್ದ ಧ್ವಂಸ ಅಭಿಯಾನದ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಮ್ಮ ಸಮುದಾಯದ ನ್ಯಾಯವಾದಿಗಳಲ್ಲಿ ನಾನು ಕೋರಿದ್ದೇನೆ. ಈ ಏಕಪಕ್ಷೀಯ ಅಭಿಯಾನದ ವಿರುದ್ಧ ನಾವು ಖಚಿತವಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ’ಎಂದು ಭೋಪಾಲದ ಖಾಝಿ ಸೈಯದ್ ಮುಸ್ತಾಕ್ ಅಲಿ ನದ್ವಿ ಅವರು ಹೇಳಿದ್ದಾರೆ. 

ಖರಗೋನ್ ನಲ್ಲಿ ಇದುವರೆಗೆ ಮುಸ್ಲಿಮರಿಗೆ ಸೇರಿದ ಎಷ್ಟು ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಪ್ರಶ್ನಿಸಿದಾಗ ಅವರು, ಕರ್ಫ್ಯೂ ಹಿಂಪಡೆದ ಬಳಿಕ ಅದು ತಿಳಿಯಲಿದೆ ಎಂದಿದ್ದಾರೆ. ‘ಸಮಾಜ ಕಾನೂನಿಗೆ ಅನುಗುಣವಾಗಿ ನಡೆಯುತ್ತದೆ. ಅಪರಾಧ ಎಸಗಿದ ವ್ಯಕ್ತಿಯನ್ನು ಶಿಕ್ಷಿಸಬೇಕು. ಆತನ ಕುಟುಂಬವನ್ನು ಶಿಕ್ಷಿಸುವುದಲ್ಲ. ಕುಟುಂಬದ ಓರ್ವ ವ್ಯಕ್ತಿ ತಪ್ಪೆಸಗಿದ್ದರೆ ಮನೆಯನ್ನು ಯಾಕೆ ಧ್ವಂಸಗೊಳಿಸಬೇಕುʼ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News