ಆಡಳಿತ ಪಕ್ಷದ ಕೋಮುಗಲಭೆಯನ್ನು ಹತ್ತಿಕ್ಕುವಂತೆ ಜನತೆಯನ್ನು ಮನವಿ ಮಾಡಿದ ರಾಜಕೀಯ ಮುಖಂಡರು

Update: 2022-04-16 17:19 GMT

ಬೆಂಗಳೂರು, ಎ.16: ಆಡಳಿತ ಪಕ್ಷದ ಒಂದು ವರ್ಗವು ಉದ್ದೇಶಪೂರ್ವಕವಾಗಿ ಆಹಾರ, ವಸ್ತ್ರ, ನಂಬಿಕೆ, ಹಬ್ಬಗಳು ಹಾಗೂ ಭಾಷೆ ವಿಚಾರವಾಗಿ ನಮ್ಮ ಸಮಾಜ ಒಡೆಯಲು ಪ್ರಯತ್ನಿಸುತ್ತಿದೆ. ಕೋಮು ಸೌಹಾರ್ದ ವಿಚಾರದಲ್ಲಿ ಶಾಂತಿ ಕಾಪಾಡಲು ಹಾಗೂ ಕೋಮು ಗಲಭೆ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವಂತೆ ಜನತೆಗೆ ರಾಜಕೀಯ ಪಕ್ಷದ ಮುಖಂಡರು ಒಕ್ಕೊರಲ ಮನವಿ ಮಾಡಿದ್ದಾರೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‍ಸಿಪಿಯ ಅಧ್ಯಕ್ಷ ಶರದ್ ಪವಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಿಪಿಐನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಜೆಎಂಎಂನ ಕಾರ್ಯಕಾರಿ ಅಧ್ಯಕ್ಷ ಹಾಗೂ ಜಾರ್ಖಂಡ್ ನ ಮುಖ್ಯಮಂತ್ರಿ ಹೇಮಂತ್ ಸೋರೆನ್, ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಸಿಪಿಐನ ಡಿ.ರಾಜಾ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‍ನ ದೇಬಬ್ರತಾ ಬಿಸ್ವಾಸ್, ರೇವಲ್ಯೂಷನ್ ಸೋಷಿಯಲಿಸ್ಟ್ ಪಾರ್ಟಿಯ ಮನೋಜ್ ಭಟ್ಟಾಚಾರ್ಯ, ಐಯುಎಂಎಲ್‍ನ ಪಿ.ಕೆ. ಕುನ್ಹಾಲಿಕುಟ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಷನ್‍ನ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ದ್ವೇಷದ ಭಾಷಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹವರನ್ನು ಶಿಕ್ಷಿಸಬೇಕಾದವರೆ ದೇಶದ ಜನರು ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಉದ್ಭವಿಸಿರುವ ಕೋಮು ಗಲಭೆಗಳನ್ನು ನಾವು ಖಂಡಿಸುತ್ತೇವೆ. ಇಂತಹ ಘಟನೆಗಳು ನಡೆದಿರುವ ಪ್ರದೇಶಗಳಲ್ಲಿ ಭೀಕರವಾಗಿ ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳು ತಿಳಿಸಿರುವುದು ಆತಂಕಕಾರಿಯಾಗಿದೆ. ಸಮಾಜದಲ್ಲಿ ಕಿಚ್ಚು ಹಚ್ಚುವ ದ್ವೇಷ ಭಾಷಣ, ಮಾರಕಾಸ್ತ್ರಗಳಿಂದ ಕೂಡಿರುವ ಧಾರ್ಮಿಕ ಯಾತ್ರೆಗಳು ಕೋಮು ಗಲಭೆಯನ್ನು ಹುಟ್ಟು ಹಾಕುವಂತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೋಮು ದ್ವೇಷವನ್ನು ಬಿತ್ತಲು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಧ್ವನಿ ಹಾಗೂ ದೃಶ್ಯ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಮೌನ ಆಘಾತ ತಂದಿದೆ. ದ್ವೇಷ ಭಾಷಣ ಹಾಗೂ ಕೃತ್ಯಗಳ ಮೂಲಕ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವವರನ್ನು ಖಂಡಿಸುವ ಹಾಗೂ ಅವರ ವಿರುದ್ಧ ಕ್ರಮಕೈಗೊಳ್ಳಲು ಅವರು ವಿಫಲರಾಗಿದ್ದಾರೆ. ಅವರ ಈ ಮೌನ ದುಷ್ಕರ್ಮಿಗಳು, ಗಲಭೆಕೋರರ ಕೃತ್ಯದಷ್ಟೇ ಪ್ರಮಾದವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶತಮಾನಗಳಿಂದ ದೇಶಕ್ಕೆ ಕೀರ್ತಿ ತಂದಿರುವ ಸೌಹಾರ್ದತೆಯನ್ನು ಮತ್ತೆ ಸ್ಥಾಪಿಸಲು ಹಾಗೂ ಜನರನ್ನು ಒಗ್ಗೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ನಮ್ಮ ಸಮಾಜವನ್ನು ಒಡೆಯುವ ವಿಷಕಾರಿ ಸೈದ್ಧಾಂತಿಕ ವಿಚಾರಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ನಾವು ಎಲ್ಲ ವರ್ಗದ ಜನರಲ್ಲಿ ಶಾಂತಿಯನ್ನು ಕಾಪಾಡಿ, ಸಮಾಜ ಒಡೆಯುವ ಸಮಾಜಘಾತುಕ ಶಕ್ತಿಗಳ ಪ್ರಯತ್ನಗಳನ್ನು ವಿಫಲಗೊಳಿಸಬೇಕು. ನಾವೆಲ್ಲರೂ ನಮ್ಮ ಪಕ್ಷಗಳ ಘಟಕಗಳಿಗೆ ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಸ್ಥಾಪನೆಗೆ ಶ್ರಮಿಸುವಂತೆ ಕರೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News