ಪೆಟ್ರೋಲ್,ಸಿಎನ್‌ಜಿ ಬೆಲೆ ಏರಿಕೆ: ನಾಳೆಯಿಂದ ದಿಲ್ಲಿಯಲ್ಲಿ ಆಟೊ,ಟ್ಯಾಕ್ಸಿ ಚಾಲಕರ ಮುಷ್ಕರ

Update: 2022-04-17 17:12 GMT
PTI

ಹೊಸದಿಲ್ಲಿ,ಎ.17: ಬಾಡಿಗೆ ದರಗಳಲ್ಲಿ ಹೆಚ್ಚಳ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ಕಡಿತವನ್ನು ಆಗ್ರಹಿಸಿ ಸೋಮವಾರದಿಂದ ಮುಷ್ಕರ ನಡೆಸಲು ಆಟೊ,ಟ್ಯಾಕ್ಸಿ ಮತ್ತು ಮಿನಿಬಸ್ ಚಾಲಕರ ಹಲವಾರು ಒಕ್ಕೂಟಗಳು ನಿರ್ಧರಿಸಿದ್ದು,ದಿಲ್ಲಿಯಲ್ಲಿ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.

ಹೆಚ್ಚಿನ ಆಟೊ ಯೂನಿಯನ್‌ಗಳು ತಮ್ಮ ಮುಷ್ಕರವನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ್ದರೆ ಕ್ಯಾಬ್ ಅಗ್ರಿಗೇಟರ್‌ಗಳಿಗಾಗಿ ಕೆಲಸ ಮಾಡುವ ಚಾಲಕರ ಒಕ್ಕೂಟ ಸರ್ವೋದಯ ಡ್ರೈವರ್ ಅಸೋಸಿಯೇಷನ್ ದಿಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಮುಷ್ಕರವನ್ನು ನಡೆಸುವುದಾಗಿ ಹೇಳಿದೆ.

ಕಾಲಬದ್ಧ ರೀತಿಯಲ್ಲಿ ಬಾಡಿಗೆ ದರಗಳನ್ನು ಪರಿಷ್ಕರಿಸುವುದಾಗಿ ದಿಲ್ಲಿ ಸರಕಾರವು ಪ್ರಕಟಿಸಿದ್ದರೂ ಮುಷ್ಕರದ ಕರೆಯನ್ನು ಹಿಂದೆಗೆದುಕೊಳ್ಳಲು ಯೂನಿಯನ್‌ಗಳು ನಿರಾಕರಿಸಿವೆ.

ಸಿಎನ್‌ಜಿ ಬೆಲೆಗಳ ಮೇಲೆ ಸಬ್ಸಿಡಿಗಾಗಿ ಆಗ್ರಹಿಸಿ ನೂರಾರು ಆಟೊ ಮತ್ತು ಟ್ಯಾಕ್ಸಿ ಚಾಲಕರು ಇತ್ತೀಚಿಗೆ ದಿಲ್ಲಿ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದ್ದರು.

ದಿಲ್ಲಿಯಲ್ಲಿ 90,000ಕ್ಕೂ ಅಧಿಕ ಆಟೊಗಳು ಮತ್ತು 80,000ಕ್ಕೂ ಅಧಿಕ ಟ್ಯಾಕ್ಸಿಗಳು ಸಂಚರಿಸುತ್ತಿವೆ. ಮೆಟ್ರೋ ರೈಲು ನಿಲ್ದಾಣಗಳಿಂದ ನಗರದ ಒಳಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 10,000ದಷ್ಟು ಆರ್‌ಟಿವಿ ಬಸ್‌ಗಳೂ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News