ದಿಲ್ಲಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಆಟೋ, ಟ್ಯಾಕ್ಸಿ ಚಾಲಕರಿಂದ ಇಂದಿನಿಂದ ಮುಷ್ಕರ

Update: 2022-04-18 05:05 GMT

ಹೊಸದಿಲ್ಲಿ:  ಏರುತ್ತಿರುವ ಇಂಧನ ಬೆಲೆಯನ್ನು ವಿರೋಧಿಸಿ ದಿಲ್ಲಿ ಯ ಆಟೋ, ಟ್ಯಾಕ್ಸಿ ಹಾಗೂ  ಕ್ಯಾಬ್ ಚಾಲಕರ ಸಂಘಗಳ ಸದಸ್ಯರು ಸೋಮವಾರದಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಆಟೋ ಹಾಗೂ  ಕ್ಯಾಬ್ ಚಾಲಕರ ಹಲವಾರು ಒಕ್ಕೂಟಗಳು ಪ್ರಯಾಣ ದರವನ್ನು ಹೆಚ್ಚಿಸಬೇಕು ಹಾಗೂ  ಇಂಧನ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಿವೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ದಿಲ್ಲಿ ಸರಕಾರ ಭರವಸೆ ನೀಡಿದರೂ ಮುಷ್ಕರ ಹಿಂಪಡೆದಿಲ್ಲ. ನಿಗದಿತ ಸಮಯಕ್ಕೆ ಅನುಗುಣವಾಗಿ ದರ ಪರಿಷ್ಕರಣೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ದಿಲ್ಲಿ ಸರಕಾರ ಘೋಷಿಸಿತ್ತು.

ಭಾರತೀಯ ಮಜ್ದೂರ್ ಸಂಘದ ಘಟಕವಾದ ದಿಲ್ಲಿಯ ಆಟೋ  ಹಾಗೂ  ಟ್ಯಾಕ್ಸಿ ಅಸೋಸಿಯೇಶನ್ ಎಪ್ರಿಲ್ 18 ಹಾಗೂ  19 ರಂದು ದಿಲ್ಲಿಯಲ್ಲಿ ಮುಷ್ಕರವನ್ನು ಘೋಷಿಸಿದೆ. ಈ ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಆಟೋಗಳು ಹಾಗೂ  ಕ್ಯಾಬ್‌ಗಳು ದಿಲ್ಲಿಯ ರಸ್ತೆಗಿಳಿಯುವುದಿಲ್ಲ ಎಂದು ಅದು ಹೇಳಿದೆ.

ಕೇಂದ್ರ ಹಾಗೂ ದಿಲ್ಲಿ ಸರಕಾರ ತಮ್ಮ ಬೇಡಿಕೆಗಳಿಗೆ ಗಮನ ಕೊಡುತ್ತಿಲ್ಲ ಎಂದು ದಿಲ್ಲಿ ಆಟೋ ರಿಕ್ಷಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಎಎನ್‌ಐ ಜೊತೆ ಮಾತನಾಡುತ್ತಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News