ಲಖಿಂಪುರ ಖೇರಿ ಪ್ರಕರಣ: ಕೇಂದ್ರ ಸಚಿವನ ಪುತ್ರ ಆಶಿಶ್ ಮಿಶ್ರಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2022-04-18 05:51 GMT

ಹೊಸದಿಲ್ಲಿ: ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ಮಾಡಿದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.

ಫೆಬ್ರವರಿ 10 ರಂದು ಉತ್ತರ ಪ್ರದೇಶ ಚುನಾವಣೆಯ ಪ್ರಚಾರ ನಡೆಯುತ್ತಿರುವಾಗಲೇ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು.

ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ಹತ್ಯೆಗೀಡಾದ ರೈತರ ಕುಟುಂಬಗಳು ಜಾಮೀನು ಅರ್ಜಿಯನ್ನು ಪ್ರಶ್ನಿಸಿದ್ದವು.

ಹೈಕೋರ್ಟ್ ಆದೇಶವು "ಅಪ್ರಸ್ತುತ ಅವಲೋಕನಗಳು" ಹಾಗೂ  "ನಿರ್ಲಕ್ಷಿಸಲಾದ ಸಂಬಂಧಿತ ಪರಿಗಣನೆಗಳನ್ನು" ಆಧರಿಸಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

"ಅಂತಹ ಕ್ರಿಮಿನಲ್ ವಿಚಾರಣೆ ಪ್ರಕ್ರಿಯೆಯಲ್ಲಿ ಸಂತ್ರಸ್ತರು ಭಾಗವಹಿಸುವ ಹಕ್ಕನ್ನು ಹೊಂದಿದ್ದಾರೆ. ಸಂತ್ರಸ್ತರಿಗೆ ಪರಿಣಾಮಕಾರಿ ವಿಚಾರಣೆಯ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ನಾವು ಭಾವಿಸುತ್ತೇವೆ'' ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ನಿರ್ಧಾರವನ್ನು ಪ್ರಕಟಿಸುವಾಗ ತೀಕ್ಷ್ಣವಾದ ಮಾತುಗಳಲ್ಲಿ ಹೇಳಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ  ಆಶಿಶ್ ಮಿಶ್ರಾ ಕೃಷಿ ಕಾನೂನುಗಳ ವಿರುದ್ಧ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ  ನಾಲ್ವರು ರೈತರು ಹಾಗೂ  ಪತ್ರಕರ್ತರ ಮೇಲೆ ಕಾರನ್ನು ಹರಿಸಿ ಸಾಯಿಸಿರುವ ಆರೋಪವಿದೆ. ಉತ್ತರಪ್ರದೇಶ ಪೋಲಿಸ್ ಹಾಗೂ ಸರಕಾರದ ನಿಧಾನಗತಿಯ ಪ್ರತಿಕ್ರಿಯೆ ಬಗ್ಗೆ  ಆಕ್ರೋಶ ವ್ಯಕ್ತವಾದ ಹಲವಾರು ದಿನಗಳ ನಂತರ ಆಶೀಶ್ ನನ್ನು ಬಂಧಿಸಲಾಗಿತ್ತು.

ಆರೋಪಿ ಆಶಿಶ್ ಮಿಶ್ರಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿರುವ ಕಾರಣ ಆತನ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ರೈತರ ಕುಟುಂಬಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

ಮಾರ್ಚ್‌ನಲ್ಲಿ ಸಾಕ್ಷಿಯೊಬ್ಬರ ಮೇಲೆ ದಾಳಿ ನಡೆಸಲಾಯಿತು ಹಾಗೂ  ಇತ್ತೀಚಿನ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ  ಗೆಲುವನ್ನು ಉಲ್ಲೇಖಿಸಿ ದಾಳಿಕೋರರು ಬೆದರಿಕೆ ಹಾಕಿದ್ದರು ಎಂದು ರೈತರ ಕುಟುಂಬದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News