ಜುವೆನೈಲ್ ಜಸ್ಟಿಸ್: ನ್ಯಾಯ ಪಾಲಕರ ಭಾವ ಸಂಘರ್ಷ

Update: 2022-04-18 06:10 GMT

ಜುವೆನೈಲ್ ಜಸ್ಟಿಸ್’ ಹಾಂಗ್ ಜಾಂಗ್ ಚಾಂಗ್ ನಿರ್ದೇಶಿಸಿದ ಈ ವರ್ಷದ ಜನಪ್ರಿಯ ಕೊರಿಯನ್ ಸಿರೀಸ್. ಇದೊಂದು ಕೋರ್ಟ್ ರೂಂ ಥ್ರಿಲ್ಲರ್. ಒಟ್ಟು ಹತ್ತು ಕಂತುಗಳನ್ನು ಇದು ಹೊಂದಿದೆ. ಈ ಸರಣಿ ಬಾಲಾಪರಾಧಿಗಳನ್ನು ನಿರ್ವಹಿಸುವ ನ್ಯಾಯಾಲಯದ ಕಾರ್ಯವಿಧಾನಗಳನ್ನು ಚರ್ಚಿಸುತ್ತದೆ. ಬಾಲಾಪರಾಧಿಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಇದು ವಿಶ್ಲೇಶಿಸುವ ಪ್ರಯತ್ನವನ್ನು ಮಾಡುತ್ತದೆ. ಮೇಲ್ನೋಟಕ್ಕೆ ಬಾಲಾಪರಾಧಿಗಳು ಮತ್ತು ಅವರನ್ನು ಆ ಸ್ಥಿತಿಗೆ ತಳ್ಳುವ ಸಮಾಜವನ್ನು ಕೇಂದ್ರವಾಗಿಟ್ಟು ಈ ಚಿತ್ರ ಮಾಡಲಾಗಿದೆಯಾದರೂ, ಬಾಲಾಪರಾಧಿಗಳ ವಿಚಾರಣೆಯನ್ನು ನಿರ್ವಹಿಸುವ ನ್ಯಾಯಾಧೀಶರ ಮಾನಸಿಕ ಸಂಘರ್ಷಕ್ಕೆ ಹೆಚ್ಚಿನ ಆದ್ಯತೆಗಳನ್ನು ಕೊಡಲಾಗಿದೆ. ಬಾಲಾಪರಾಧಗಳ ಬೇರೆ ಬೇರೆ ಪ್ರಕರಣಗಳನ್ನು ನ್ಯಾಯಾಲಯಗಳು ನಿರ್ವಹಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳೇ ಸರಣಿಯನ್ನು ಕುತೂಹಲಕರವಾಗಿಸುತ್ತದೆ. ಹಲವು ಕತೆಗಳ ಗೊಂಚಲಿನಂತಿದ್ದರೂ, ಆರಂಭದಿಂದ ಕೊನೆಯವರೆಗೂ ಒಂದಕ್ಕೊಂದು ಬೆಸೆದುಕೊಂಡಿರುವುದು ವಿಶೇಷ. ಯೋನ್ಹಾ ಜಿಲ್ಲೆಯ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹೊಸ ನ್ಯಾಯಾಧೀಶೆಯೊಬ್ಬರ ಪ್ರವೇಶದೊಂದಿಗೆ ಸರಣಿ ತೆರೆದುಕೊಳ್ಳುತ್ತದೆ. ಹಿಮದಷ್ಟು ತಣ್ಣಗಿನ ವ್ಯಕ್ತಿತ್ವ, ಚುಟುಕು ಮಾತು, ತೀಕ್ಷ್ಣ ಕಣ್ಣೋಟ ಇವುಗಳ ಮೂಲಕ ಬಂದ ದಿನದಿಂದಲೇ ನ್ಯಾಯಾಧೀಶೆ ಶಿಮ್ ಹ್ಯೂನ್ ಸಿಯೋಕ್ ಸುದ್ದಿಯಾಗುತ್ತಾಳೆ. ಇವಳಿಗೆ ಸಹಾಯಕ ನ್ಯಾಯಾಧೀಶನಾಗಿ ಚಾ ತಾಯ್ ಜೂ ಕಾರ್ಯನಿರ್ವಹಿಸುತ್ತಿರುತ್ತಾನೆ. ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಕಾಂಗ್ ವೋನ್ ಜೂಂಗ್. ಬಾಲಾಪರಾಧಗಳನ್ನು ನಿರ್ವಹಿಸುವಾಗ ನ್ಯಾಯಾಲಯ ಹೊಂದಿರಬೇಕಾದ ಸೂಕ್ಷ್ಮತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಇಡೀ ಸರಣಿ ನ್ಯಾಯಾಧೀಶರ ಭಾವ ಸಂಘರ್ಷಗಳಿಗೆ ಆದ್ಯತೆಯನ್ನು ನೀಡಿದೆ. ಮುಖ್ಯ ನ್ಯಾಯಾಧೀಶನ ಪುತ್ರನೇ ಆರೋಪಿಯಾಗಿ ಆತನ ಮುಂದೆ ನಿಂತಾಗ ಆತನ ಹುದ್ದೆಗೆ ಎದುರಾಗುವ ಸವಾಲು, ಯಾವ ಬಾಲಕನಿಂದ ತನ್ನ ಖಾಸಗಿ ಕುಟುಂಬಕ್ಕೆ ಅನ್ಯಾಯವಾಗಿದೆಯೋ ಆ ಬಾಲಕನಿಗೆ ನ್ಯಾಯ ಕೊಡುವ ಅಗ್ನಿ ಪರೀಕ್ಷೆ ಎದುರಾದರೆ ನ್ಯಾಯಾಧೀಶ ಏನು ಮಾಡಬೇಕು? ಇಂತಹ ಅಗ್ನಿಪರೀಕ್ಷೆಗಳನ್ನು ನ್ಯಾಯಾಧೀಶರು ಯಶಸ್ವಿಯಾಗಿ ದಾಟುತ್ತಾರೆಯೇ ಇಲ್ಲ ವಿಫಲವಾಗುತ್ತಾರೆಯೇ? ಎನ್ನುವುದನ್ನು ಕುತೂಹಲಕರವಾಗಿ ನಿರೂಪಿಸಲಾಗಿದೆ. ಬಾಲಾಪರಾಧಿಯಾಗಿ ಜೈಲು ಪಾಲಾಗಿ, ಮುಂದೆ ಜೈಲಲ್ಲಿ ಹಿರಿಯ ನ್ಯಾಯಾಧೀಶರೊಬ್ಬರ ಸಹಾಯದಿಂದ ವಕೀಲನಾಗಿ, ನ್ಯಾಯಾಧೀಶನಾಗಿ, ಮುಂದೆ ತನ್ನ ಬದುಕಿಗೆ ಆಸರೆಯಾದ ನ್ಯಾಯಾಧೀಶರ ವಿರುದ್ಧವೇ ತೀರ್ಪು ನೀಡಬೇಕಾಗಿ ಬಂದರೆ? ಇಂತಹ ಹಲವು ಸನ್ನಿವೇಶಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ. ಪತ್ತೇದಾರಿ ಕಥನ ರೂಪದಲ್ಲಿ ಸರಣಿ ಸಾಗುತ್ತದೆ. ಇಲ್ಲಿ ನ್ಯಾಯಾಧೀಶರು ಕೇವಲ ಆದೇಶ ನೀಡುವ ಯಂತ್ರಗಳಲ್ಲ. ಇರುವ ಬಾಲಾಪರಾಧಿ ಕಾನೂನಿನ ಬಗ್ಗೆ ಅವರಿಗೆ ಅಪಾರ ಅಸಹನೆಯಿದೆ. ಮಕ್ಕಳನ್ನು ಶಿಕ್ಷಿಸುವುದು ಅವರ ಗುರಿಯಲ್ಲ. ಮಕ್ಕಳ ಅಪರಾಧಗಳ ಹಿಂದೆ ಸಮಾಜದ ಪಾತ್ರವಿರುವುದರ ಬಗ್ಗೆ ಅವರಿಗೆ ಅರಿವಿದೆ. ‘ಪ್ರಶ್ನೆ ಪತ್ರಿಕೆ ಸೋರಿಕೆ’ ಪ್ರಕರಣದ ವಿಚಾರಣೆಯನ್ನು ಮಾಡುತ್ತಾ, ಕೊರಿಯಾದ ಇಡೀ ಶಿಕ್ಷಣ ವ್ಯವಸ್ಥೆಯ ಕ್ರೌರ್ಯಗಳನ್ನು ಸರಣಿಯಲ್ಲಿ ಪರಿಣಾಮಕಾರಿಯಾಗಿ ಅನಾವರಣ ಮಾಡಲಾಗಿದೆ. ಮಕ್ಕಳ ಕುರಿತಂತೆ, ಸಮಾಜದ ಕುರಿತಂತೆ ಕಾಳಜಿಯಿರುವ ಎಲ್ಲರೂ ನೋಡಬೇಕಾದ ಒಂದು ಅತ್ಯುತ್ತಮ ಸರಣಿ. ಕ್ಷಣಕ್ಷಣವೂ ಕುತೂಹಲ ಕೆರಳಿಸುತ್ತಾ ಹೋಗುವ ‘ಜುವೆನೈಲ್ ಜಸ್ಟಿಸ್’ ನೆಟ್‌ಫ್ಲಿಕ್‌ನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸರಣಿ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News