'ಬುಲ್ಡೋಝರ್ ರಾಜಕಾರಣ'ದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಜಮೀಯತುಲ್ ಉಲಮಾ ಅರ್ಜಿ

Update: 2022-04-18 17:22 GMT

ಹೊಸದಿಲ್ಲಿ,ಎ.18: ದಂಡನಾತ್ಮಕ ಕ್ರಮವಾಗಿ ವಸತಿ ಅಥವಾ ವಾಣಿಜ್ಯಿಕ ಆಸ್ತಿಗಳನ್ನು ನೆಲಸಮಗೊಳಿಸುವಂತಿಲ್ಲ ಎಂದು ನಿರ್ದೇಶನವನ್ನು ಕೋರಿ ಜಮೀಯತ್ ಉಲಮಾ-ಇ-ಹಿಂದ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಹಲವಾರು ರಾಜ್ಯಗಳಲ್ಲಿ ಆಡಳಿತಗಳು ಗಲಭೆಯಂತಹ ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾರೆಂಬ ಶಂಕಿತರಿಗೆ ಸೇರಿದ ಆಸ್ತಿಗಳನ್ನು ನೆಲಸಮಗೊಳಿಸಲು ಬುಲ್ಡೋಝರ್ ಗಳನ್ನು ಬಳಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೋಮು ದಂಗೆಗಳು ಮತ್ತು ಜನರು ಪ್ರಕ್ಷುಬ್ಧಗೊಳ್ಳುವಂತಹ ಸ್ಥಿತಿಗಳನ್ನು ನಿಭಾಯಿಸಲು ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ತರಬೇತಿಯನ್ನು ನೀಡಬೇಕು ಎಂದೂ ಅರ್ಜಿಯು ಕೋರಿಕೊಂಡಿದೆ.

ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾರೆಂಬ ಶಂಕಿತರ ವಿರುದ್ಧ ದಂಡನಾತ್ಮಕ ಕ್ರಮವಾಗಿ ಹಲವಾರು ರಾಜ್ಯಗಳಲ್ಲಿ ಸರಕಾರಗಳು ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸುವ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿವೆ ಎಂದು ಹೇಳಿರುವ ಅರ್ಜಿಯು, ಕ್ರಿಮಿನಲ್ ನ್ಯಾಯಾಲಯದಿಂದ ನಿರ್ಣಯವಾಗುವವರೆಗೆ ಸಚಿವರು, ಶಾಸಕರು ಮತ್ತು ಅಪರಾಧ ತನಿಖೆಗೆ ಸಂಬಂಧಿಸದವರು ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಅಥವಾ ಯಾವುದೇ ಅಧಿಕೃತ ಸಂವಹನದ ಮೂಲಕ ಅಪರಾಧದ ಹೊಣೆಯನ್ನು ಇತರರ ಮೇಲೆ ಹೊರಿಸುವುದರಿಂದ ದೂರವಿರುವಂತೆ ನಿರ್ದೇಶಗಳನ್ನು ಹೊರಡಿಸುವಂತೆ ಕೋರಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ಸೇರಿದಂತೆ ಹಲವಾರು ಸಚಿವರು ಮತ್ತು ಶಾಸಕರು ಇಂತಹ ಕ್ರಮಗಳನ್ನು ಸಮರ್ಥಿಸಿಕೊಂಡು ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಗಲಭೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ಮನೆಗಳು ಮತ್ತು ಅಂಗಡಿಗಳನ್ನು ನಾಶಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇಂತಹ ಕ್ರಮಗಳು ಸ್ಪಷ್ಟವಾಗಿ ನಮ್ಮ ಸಾಂವಿಧಾನಿಕ ನೀತಿಗಳು ಮತ್ತು ಅಪರಾಧ ನ್ಯಾಯ ವ್ಯವಸ್ಥೆಗೆ ವಿರುದ್ಧವಾಗಿವೆ ಹಾಗೂ ಆರೋಪಿಗಳ ಹಕ್ಕುಗಳನ್ನೂ ಉಲ್ಲಂಘಿಸುತ್ತವೆ. ಇಂತಹ ಕ್ರಮಗಳು ನ್ಯಾಯಾಲಯಗಳ ಮಹತ್ವದ ಪಾತ್ರ ಸೇರಿದಂತೆ ನಮ್ಮ ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ಅರ್ಜಿಯು ವಾದಿಸಿದೆ.

 ಸರಕಾರದ ಈ ಕ್ರಮಗಳಿಂದ ಪೂರ್ವ ವಿಚಾರಣೆ ಮತ್ತು ವಿಚಾರಣೆ ಹಂತ ಸೇರಿದಂತೆ ಕಾನೂನು ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತದೆ ಎಂದು ವಾದಿಸಿರುವ ಅರ್ಜಿಯು, ಆದ್ದರಿಂದ ಇಂತಹ ಘಟನೆಗಳ ಪುನರಾವರ್ತನೆಯನ್ನು ತಡೆಯಲು ತಕ್ಷಣ ಕ್ರಮವನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವುದನ್ನು ಮತ್ತು ಇತರ ರಾಜ್ಯಗಳಲ್ಲಿಯೂ ಇಂತಹ ಘಟನೆಗಳ ಪುನರಾವರ್ತನೆಯನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News