ಇಂದಿನಿಂದ ಜಾರಿಗೆ ಬರುವಂತೆ ತನ್ನ ಎಲ್ಲಾ ವಾಹನಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಝುಕಿ
Update: 2022-04-18 14:21 IST
ಹೊಸದಿಲ್ಲಿ: ದೇಶದ ಅತ್ಯಂತ ದೊಡ್ಡ ಕಾರು ತಯಾರಿಕಾ ಕಂಪೆನಿಯಾಗಿರುವ ಮಾರುತಿ ಸುಝುಕಿ ಇಂಡಿಯಾ ಸೋಮವಾರ ತನ್ನ ಸಂಪೂರ್ಣ ಶ್ರೇಣಿಯ ವಾಹನಗಳ ಬೆಲೆಯನ್ನು ಏರಿಕೆ ಮಾಡಿರುವುದಾಗಿ ಹೇಳಿದೆ. ಈ ಬೆಲೆಗಳಲ್ಲಿ ಹೆಚ್ಚಳ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಕಂಪೆನಿ ಹೇಳಿದೆ.
ಇನ್‍ಪುಟ್ ಬೆಲೆಗಳು ಅಥವಾ ಕಾರು ತಯಾರಿಕೆಗೆ ಅಗತ್ಯವಿರುವ ಕಚ್ಛಾ ವಸ್ತುಗಳ ಬೆಲೆಯೇರಿಕೆಯನ್ನು ಸರಿದೂಗಿಸಲು ಕಾರುಗಳ ಬೆಲೆಯನ್ನು ಏರಿಸಲಾಗುತ್ತಿದೆ ಎಂದು ಕಂಪೆನಿ ಹೇಳಿದೆ.
ಆಲ್ಟೋದಿಂದ ಹಿಡಿದು ಎಸ್-ಕ್ರಾಸ್ ತನಕ ಹಲವು ಕಾರುಗಳನ್ನು ಮಾರಾಟ ಮಾಡುವ ಮಾರುತಿ, ತನ್ನ ವಾಹನಗಳ ಸರಾಸರಿ ಬೆಲೆ ಶೇ 1.3ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ಜನವರಿ 2021ರಿಂದ ಮಾರ್ಚ್ 2022ರ ತನಕ ಕಂಪೆನಿ ಈಗಾಗಲೇ ತನ್ನ ವಾಹನಗಳ ಬೆಲೆಯನ್ನು ಶೇ 8.8ರಷ್ಟು ಏರಿಕೆ ಮಾಡಿದೆ.