×
Ad

ಸತತ ಒಂದು ವಾರದಿಂದ ಉಡುಪಿ ಜಿಲ್ಲೆ ಕೋವಿಡ್ ಮುಕ್ತ

Update: 2022-04-18 21:31 IST

ಉಡುಪಿ : ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆ ಸತತವಾಗಿ ಕೋವಿಡ್-19 ಮುಕ್ತವಾಗಿ ಕಾಣಿಸಿಕೊಂಡಿದೆ. ಎ.12ರ ಮಂಗಳವಾರ ಎರಡು ವರ್ಷಗಳಲ್ಲಿ ಮೊದಲ ಬಾರಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಯಾವುದೇ ವ್ಯಕ್ತಿ ಇಲ್ಲ. ಈ ಸಾಧನೆ ಕಳೆದ ಏಳು ದಿನಗಳಿಂದ ಸತತವಾಗಿ ಮುಂದುವರಿದಿದೆ.

ಆದರೆ ಜಿಲ್ಲೆಯನ್ನು ಈಗಲೇ ಕೋವಿಡ್-19 ಮುಕ್ತ ಎಂದು ಘೋಷಿಸುವ  ಮುನ್ನ ಇನ್ನೂ ಸ್ವಲ್ಪ ದಿನ ಕಾದು ನೋಡಲು ಜಿಲ್ಲಾಡಳಿತ ಮುಂದಾಗಿದೆ. ಹೊಸದಿಲ್ಲಿ ಸೇರಿದಂತೆ ಭಾರತದ ಕೆಲವು ಕಡೆಗಳಲ್ಲಿ ಮತ್ತೆ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಕೋವಿಡ್ ಸಂಪೂರ್ಣವಾಗಿ ಇಲ್ಲ ಎಂದು ಈಗಲೇ ದೃಢವಾಗಿ ಹೇಳುವಂತಿಲ್ಲ. ಈಗಲೂ ಪ್ರತಿದಿನ ಪರೀಕ್ಷೆಗಳು ನಡೆಯುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಪಾಸಿಟಿವ್ ಕಾಣಿಸಿಕೊಳ್ಳಬಹುದು. ಅಲ್ಲದೇ ಜನರು ದೇಶ-ವಿದೇಶ ಸೇರಿದಂತೆ ವಿವಿದೆಡೆಗಳಿಗೆ ಪ್ರಯಾಣಿಸುತ್ತಿರುವುದರಿಂದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ ಎಂದು ಕೂರ್ಮಾರಾವ್ ತಿಲಿಸಿದರು.

ಇಂದು  ಕೋವಿಡ್ ಪರೀಕ್ಷೆಗೊಳಗಾದ 67 ಮಂದಿಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಕೊನೆಗೆ ಉಳಿದಿದ್ದ ಏಕೈಕ ಸೋಂಕಿತ ವ್ಯಕ್ತಿ ಎ.11ರಂದು ಗುಣಮುಖರಾಗುವ ಮೂಲಕ ಈಗ ಕೋವಿಡ್ ಮುಕ್ತ ಜಿಲ್ಲೆಯಾಗಿತ್ತು. ಇಂದು ಉಡುಪಿ ತಾಲೂಕಿನ 55, ಕುಂದಾಪುರದ 8 ಹಾಗೂ ಕಾರ್ಕಳ ತಾಲೂಕಿನ ನಾಲ್ವರಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.

99 ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು 12ರಿಂದ 14ವರ್ಷದೊಳಗಿನ 99 ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೯೬೪೦ ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.

ದಿನದಲ್ಲಿ ಒಟ್ಟು ೮೬೮ ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ೬೦ ವರ್ಷ ಮೇಲಿನ ೪೦೫ ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ೪೪೬ ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು ೧೫೫ ಮಂದಿ ಮೊದಲ ಡೋಸ್ ಹಾಗೂ ೨೬೭ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲೀಗ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆ ಪಡೆದವರ ಒಟ್ಟು ಸಂಖ್ಯೆ ೬೧,೭೫೫ಕ್ಕೇರಿದೆ.

ʼʼಸತತವಾಗಿ ಒಂದು ವಾರ ಕೋವಿಡ್ ಪ್ರಕರಣ ಇಲ್ಲವಾದರೆ, ಕೋವಿಡ್ ಮುಕ್ತ ಜಿಲ್ಲೆ ಎಂದು ಘೋಷಿಸಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೊಸದಿಲ್ಲಿ ಸೇರಿದಂತೆ ಕೆಲವು ಕಡೆ ಮತ್ತೆ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ದಿನಗಳ ಕಾಲ ಕಾದು ನೋಡುತ್ತೇವೆ. ಅಲ್ಲದೇ ಕೋವಿಡ್ ವೈರಸ್ ಪೂರ್ತಿ ಹೋಗುವ ಸಾಧ್ಯತೆಯೂ ಕಡಿಮೆ ಇರುವುದರಿಂದ ಯಾವುದೇ ಕ್ಷಣದಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳ ಬಹುದುʼʼ.
- ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ ಉಡುಪಿ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News