ಗಲಭೆ ವೇಳೆ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ; ಪೊಲೀಸರ ಮೇಲೆ ಆರೋಪ: ಕರ್ಫ್ಯೂ ವಿಸ್ತರಣೆ

Update: 2022-04-18 16:42 GMT


ಭೋಪಾಲ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದ  ಕೋಮು ಘರ್ಷಣೆಯ ಬಳಿಕ ಏಪ್ರಿಲ್ 10 ರಂದು ನಾಪತ್ತೆಯಾಗಿದ್ದ 28 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ. ಇಬ್ರೀಶ್ ಖಾನ್ ಎಂದು ಗುರುತಿಸಲಾದ ವ್ಯಕ್ತಿ ಏಪ್ರಿಲ್ 12 ರಂದು ಮೃತಪಟ್ಟಿದ್ದರು, ಆದರೆ ಆರು ದಿನಗಳಿಂದ ಅವರ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಖಾರ್ಗೋನ್‌ನಲ್ಲಿ ರಾಮನವಮಿ ಮೆರವಣಿಗೆಯ ವೇಳೆ ಭುಗಿಲೆದ್ದ ನಡೆದ ಕೋಮು ಘರ್ಷಣೆಯಲ್ಲಿ ನಡೆದ ಮೊದಲ ಸಾವು ಇದು . ಘರ್ಷಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 50 ಮಂದಿ ಗಾಯಗೊಂಡಿದ್ದು, ಶಾಂತಿ ನೆಲೆಸಲು ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸೋಮವಾರ ಇಬ್ರೀಶ್ ಖಾನ್ ಸಾವಿನ ಸುದ್ದಿ ಹೊರಬಿದ್ದ ನಂತರ, ಪೊಲೀಸರು ಕೂಡಲೇ ಕರ್ಫ್ಯೂವನ್ನು ವಿಸ್ತರಿಸಿದ್ದಾರೆ.


ಘರ್ಷಣೆಯಲ್ಲಿ ಗಾಯಗೊಂಡ ನಂತರ ಅವರನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ಪೊಲೀಸರು ಅವರನ್ನು ಕೊಂದಿದ್ದಾರೆ ಎಂದು ಇಬ್ರೀಶ್ ಖಾನ್ ಅವರ ಕುಟುಂಬ ಆರೋಪಿಸಿದೆ, ಆದರೆ ಪೊಲೀಸರು ಆರೋಪವನ್ನು ನಿರಾಕರಿಸಿದ್ದಾರೆ.


ಖಾರ್ಗೋನ್‌ನ ಆನಂದ್ ನಗರ ಪ್ರದೇಶದಲ್ಲಿ ಘರ್ಷಣೆ ಸಂಭವಿಸಿದ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇಬ್ರೀಶ್ ಖಾನ್ ಅವರನ್ನು ಪೊಲೀಸ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಖಾರ್ಗೋನ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿತ್ ಕಸ್ವಾನಿ ಹೇಳಿದ್ದಾರೆ.


"ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅವರು ತಲೆಗೆ ಗಾಯಗೊಂಡಿದ್ದರು. (ಖಾರ್ಗೋನ್) ಜಿಲ್ಲಾ ಆಸ್ಪತ್ರೆಯಲ್ಲಿ ಶವವನ್ನು ಇಡಲು ಯಾವುದೇ ಸೌಲಭ್ಯವಿಲ್ಲದ ಕಾರಣ ಮೃತದೇಹವನ್ನು ಇಂದೋರ್‌ನ ಎಂವೈ (ಮಹಾರಾಜ ಯಶವಂತರಾವ್) ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ" ಎಂದು ರೋಹಿತ್ ಕಸ್ವಾನಿ ಹೇಳಿದ್ದಾರೆ.


ಆರು ದಿನಗಳ ಕಾಲ ಆತನ ಗಾಯಗಳು ಅಥವಾ ಸಾವಿನ ಬಗ್ಗೆ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಲಿಲ್ಲ ಎಂದು ಇಬ್ರೀಶ್ ಸಹೋದರ ಇಖ್ಲಾಖ್ ಖಾನ್ ಹೇಳಿದ್ದಾರೆ. ಏಪ್ರಿಲ್ 14 ರಂದು, ಅವರು ನಾಪತ್ತೆಯಾದ ನಾಲ್ಕು ದಿನಗಳ ನಂತರ, ಅವರ ತಾಯಿ ಮುಮ್ತಾಜ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ನಾಪತ್ತೆ ದೂರನ್ನು ದಾಖಲಿಸಿದ್ದಾರೆ.


“ನನ್ನ ಸಹೋದರನನ್ನು ಗಲಭೆಕೋರರು ಕ್ರೂರವಾಗಿ ಥಳಿಸಿದರು, ಬಳಿಕ ಪೊಲೀಸರು ನನ್ನ ಸಹೋದರನನ್ನು ಬಂಧಿಸಿದರು. ನನ್ನ ಸಹೋದರನನ್ನು ಪೊಲೀಸರ ವಶದಲ್ಲಿ ನೋಡಿರುವುದಾಗಿ ಅನೇಕ ಜನರು ನಮಗೆ ಹೇಳಿದರು ಮತ್ತು ನನ್ನ ಸಹೋದರನ ತಲೆಗೆ ಗಾಯವಾಗಿದೆ ಮತ್ತು ಅವನಿಗೆ ತೀವ್ರ ರಕ್ತಸ್ರಾವವಾಗಿದೆ ಎಂದು ಅವರು ತಿಳಿಸಿದ್ದರು,” ಎಂದು ಇಕ್ಲಾಖ್ ಖಾನ್ ಹೇಳಿದ್ದಾರೆ.


“ಏಪ್ರಿಲ್ 13 ರಂದು, ನಾವು ನನ್ನ ಸಹೋದರನ ಬಗ್ಗೆ ಪೊಲೀಸರನ್ನು ಕೇಳಿದೆವು. ಆದರೆ ಅವರು ಪೊಲೀಸ್ ಕಸ್ಟಡಿಯಲ್ಲಿರುವುದನ್ನು  ಅವರು ನಿರಾಕರಿಸಿದರು. ಏಪ್ರಿಲ್ 14 ರಂದು, ನನ್ನ ತಾಯಿ ಮುಮ್ತಾಜ್ ಕಾಣೆಯಾದ ದೂರನ್ನು ದಾಖಲಿಸಿದರು. ಆದರೆ ಅವರು ಆತನ ಸಾವಿನ ಬಗ್ಗೆ ನಮಗೆ ತಿಳಿಸಲಿಲ್ಲ. ಏಪ್ರಿಲ್ 17 ರ ರಾತ್ರಿ, ನನ್ನ ಸಹೋದರನ ಬಗ್ಗೆ ಮಾಹಿತಿ ಸಂಗ್ರಹಿಸಲು ಒಬ್ಬ ಪೋಲೀಸ್ ನಮ್ಮ ಮನೆಗೆ ಬಂದರು, ಮಾಧ್ಯಮದ ಮೊರೆ ಹೋಗುವುದಾಗಿ ಎಚ್ಚರಿಸಿದ ಮೇಲೆ ಸತ್ತಿರುವ ಸಾಧ್ಯತೆ ಬಗ್ಗೆ ನಮಗೆ ತಿಳಿಸಲಾಯಿತು” ಎಂದು ಇಕ್ಲಾಖ್ ಖಾನ್ ಹೇಳಿದ್ದಾರೆ.


ಭಾನುವಾರ ತಡರಾತ್ರಿ ಮೃತದೇಹವನ್ನು ಗುರುತಿಸಲು ಕುಟುಂಬವನ್ನು 100 ಕಿಮೀ ದೂರದಲ್ಲಿರುವ ಇಂದೋರ್‌ನ ಎಂವೈ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು HindustanTimes ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News