ಹನುಮ ಜಯಂತಿಯಂದು ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಗೆ ಆಗ್ರಹ
ಹೊಸದಿಲ್ಲಿ,ಎ.18: ವಾಯುವ್ಯ ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಶನಿವಾರ ಹನುಮ ಜಯಂತಿ ಸಂದರ್ಭ ಸಂಭವಿಸಿದ್ದ ಹಿಂಸಾಚಾರಗಳ ಕುರಿತು ಹಾಲಿ ನ್ಯಾಯಾಧೀಶರೋರ್ವರ ನೇತೃತ್ವದ ಸಮಿತಿಯಿಂದ ನಿಷ್ಪಕ್ಷ ತನಿಖೆಯನ್ನು ನಡೆಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಹನುಮ ಜಯಂತಿ ಮೆರವಣಿಗೆ ಸಂದರ್ಭ ಕಲ್ಲು ತೂರಾಟದ ಬಳಿಕ ನಡೆದಿದ್ದ ಹಿಂಸಾಚಾರದಲ್ಲಿ ಹಲವಾರು ಜನರು ಗಾಯಗೊಂಡಿದ್ದರು.
ಫೆಬ್ರವರಿ 2020ರ ಬಳಿಕ ದಿಲ್ಲಿಯಲ್ಲಿ ಎರಡು ಸಮುದಾಯಗಳ ನಡುವೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಘರ್ಷಣೆಗಳು ಇದೇ ಮೊದಲ ಬಾರಿಗೆ ನಡೆದಿವೆ.
ಜಹಾಂಗೀರ್ಪುರಿ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಗಲಭೆಗಳು ಸಂವಿಧಾನಕ್ಕೆ ಕಪ್ಪು ಚುಕ್ಕೆಯಾಗಿವೆ. ಎರಡು ವರ್ಷಗಳಲ್ಲಿ ಎರಡನೇ ಬಾರಿ ದಿಲ್ಲಿಯಲ್ಲಿ ಗಲಭೆಗಳು ನಡೆದಿವೆ ಮತ್ತು ಎರಡೂ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಮಾತ್ರ ದೂಷಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಮುಖೇನ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿರುವ ನ್ಯಾಯವಾದಿ ಅಮೃತಪಾಲ ಸಿಂಗ್ ಖಾಲ್ಸಾ ಅವರು, ದಿಲ್ಲಿ ಪೊಲೀಸರ ತನಿಖೆಯು ಈವರೆಗೆ ತಾರತಮ್ಯದಿಂದ ಕೂಡಿದ್ದು ಕೋಮುವಾದಿಯಾಗಿದೆ. ಆರಂಭದಲ್ಲಿ ಏಳು ಜನರನ್ನು ಬಂಧಿಸಲಾಗಿದ್ದು, ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
2020ರ ದಂಗೆಗಳಲ್ಲಿ ಪೊಲೀಸರ ಪಾತ್ರವು ಅವರನ್ನು ಉಪೇಕ್ಷಿಸುವಂತೆ ಮಾಡಿದೆ ಮತ್ತು ಪೊಲೀಸರಲ್ಲಿ ಜನರ ನಂಬಿಕೆಯನ್ನು ದುರ್ಬಲಗೊಳಿಸಿದೆ. ಈ ಪತ್ರವನ್ನೇ ದೂರು ಅರ್ಜಿಯನ್ನಾಗಿ ಪರಿಗಣಿಸಬೇಕು ಮತ್ತು ಜಹಾಂಗೀರ್‌ಪುರಿ ಗಲಭೆಗಳ ಕುರಿತು ನಿಷ್ಪಕ್ಷ ತನಿಖೆಯನ್ನು ನಡೆಸಲು ಈ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಖಾಲ್ಸಾ ಪತ್ರದಲ್ಲಿ ಕೋರಿದ್ದಾರೆ.
ಪ್ರಕರಣದಲ್ಲಿ ಈವರೆಗೆ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.