ಐಪಿಎಲ್: ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ರೋಚಕ ಜಯ

Update: 2022-04-18 18:25 GMT

    ಮುಂಬೈ, ಎ.18: ನಾಯಕ ಶ್ರೇಯಸ್ ಅಯ್ಯರ್(85 ರನ್) ಹಾಗೂ ಆರಂಭಿಕ ಬ್ಯಾಟರ್ ಆ್ಯರೊನ್ ಫಿಂಚ್ (58) ಅರ್ಧಶತಕದ ಕೊಡುಗೆಯ ಹೊರತಾಗಿಯೂ ‘ಹ್ಯಾಟ್ರಿಕ್ ಹೀರೊ’ ಯಜುವೇಂದ್ರ ಚಹಾಲ್(5-40) ಅಮೋಘ ಬೌಲಿಂಗ್‌ಗೆ ತತ್ತರಿಸಿದ  ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್‌ನ 30ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ರನ್‌ಗಳ ಅಂತರದಿಂದ ಸೋಲುಂಡಿದೆ.

   ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 218 ರನ್ ಗುರಿ ಪಡೆದ ಕೆಕೆಆರ್ 19.4 ಓವರ್‌ಗಳಲ್ಲಿ 210 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಚಹಾಲ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಒಬೆಡ್ ಮೆಕಾಯ್(2-41)ಎರಡು ವಿಕೆಟ್ ಪಡೆದರು.

ಕೆಕೆಆರ್ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಬ್ಯಾಟರ್ ಸುನೀಲ್ ನರೇನ್(0)ವಿಕೆಟನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆಗ ಜೊತೆಯಾದ ಶ್ರೇಯಸ್ ಅಯ್ಯರ್(85 ರನ್, 51 ಎಸೆತ, 7 ಬೌಂಡರಿ, 4 ಸಿಕ್ಸರ್)ಹಾಗೂ ಆ್ಯರೊನ್ ಫಿಂಚ್(58 ರನ್, 28 ಎಸೆತ, 9 ಬೌಂಡರಿ, 2 ಸಿಕ್ಸರ್)ಎರಡನೇ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ಆಸ್ಟ್ರೇಲಿಯ ಆಟಗಾರ ಫಿಂಚ್ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು. ಅದರೆ, ಅದೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. 10ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿ ನಾಯಕನ ಆಟವಾಡಿದ ಶ್ರೇಯಸ್ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ‘ಹ್ಯಾಟ್ರಿಕ್ ಹೀರೊ’ಚಹಾಲ್ ಅವರು ಶ್ರೇಯಸ್‌ಗೆ ಪೆವಿಲಿಯನ್ ಹಾದಿ ತೋರಿಸಿ ಕೆಕೆಆರ್ ಸಂಕಷ್ಟ ಹೆಚ್ಚಿಸಿದರು.

17ನೇ ಓವರ್‌ನ 4ನೇ, 5ನೇ ಹಾಗೂ ಆರನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್, ಶಿವಂ ಮಾವಿ(0) ಹಾಗೂ ಪ್ಯಾಟ್ ಕಮಿನ್ಸ್(0) ವಿಕೆಟ್ ಪಡೆದ ಚಹಾಲ್ ಹ್ಯಾಟ್ರಿಕ್ ಪೂರೈಸಿದರು. ಇದು ಐಪಿಎಲ್ ಟೂರ್ನಿಯಲ್ಲಿ ಬೌಲರ್‌ವೊಬ್ಬ ಗಳಿಸಿದ 21ನೇ ಹ್ಯಾಟ್ರಿಕ್ ವಿಕೆಟ್ ಆಗಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಸಿಡಿಸಿದ ಆಕರ್ಷಕ ಶತಕದ(103 ರನ್, 61 ಎಸೆತ, 9 ಬೌಂಡರಿ, 5 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.

ರಾಜಸ್ಥಾನ ಪರ ಇನಿಂಗ್ಸ್ ಆರಂಭಿಸಿದ ಬಟ್ಲರ್ ಹಾಗೂ ದೇವದತ್ತ ಪಡಿಕ್ಕಲ್(24 ರನ್, 18 ಎಸೆತ)ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು. ಪಡಿಕ್ಕಲ್ ಔಟಾದ ಬಳಿಕ ನಾಯಕ ಸಂಜು ಸ್ಯಾಮ್ಸನ್(38 ರನ್, 19 ಎಸೆತ, 3 ಬೌಂಡರಿ,2 ಸಿಕ್ಸರ್)ಅವರೊಂದಿಗೆ 2ನೇ ವಿಕೆಟ್‌ಗೆ 67 ರನ್ ಸೇರಿಸಿದ ಬಟ್ಲರ್ ತಂಡದ ಸ್ಕೋರನ್ನು ಹಿಗ್ಗಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News